ಉದಯರಶ್ಮಿ ದಿನಪತ್ರಿಕೆ
ಜಿಲ್ಲೆಯಲ್ಲಿ ಹಸಿರೀಕರಣದ ಸಂಕಲ್ಪ
ವಿಜಯಪುರದಲ್ಲಿ ಅರಣ್ಯೀಕರಣ ಸಂಕಲ್ಪ ಮಾಡಲಾಗಿದೆ. ಹಸಿರು ಗ್ರಾಮ ಕನಸಿನ ಯೋಜನೆ ಸಾಕಾರಕ್ಕೆ ಜಿಲ್ಲಾ ಪಂಚಾಯತಿ, ತಾಲೂಕ ಪಂಚಾಯತಿ, ಗ್ರಾಮ ಪಂಚಾಯತಿಗಳು ಒತ್ತು ನೀಡಿವೆ. ಪ್ರತಿ ತಾಲ್ಲೂಕುಗಳಲ್ಲೂ ಸಸ್ಯಕ್ಷೇತ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಜಿಲ್ಲೆಯ ೨೧೧ ಗ್ರಾಮ ಪಂಚಾಯತಿಗಳನ್ನೂ ಹಸಿರು ಗ್ರಾಮಗಳನ್ನಾಗಿ ಪರಿವರ್ತಿಸಲು ಜಿಲ್ಲಾ ಪಂಚಾಯತಿ ಉದ್ದೇಶಿಸಿದೆ. ಅರಣ್ಯ ಇಲಾಖೆಯೊಂದಿಗೆ ಪ್ರತಿ ಗ್ರಾಮ ಪಂಚಾಯತಿಗಳೂ ಕೈಜೋಡಿಸಿವೆ. ಅರಣ್ಯೀಕರಣ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಕ್ರಮವಹಿಸಲಾಗುತ್ತಿದೆ. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ ೧೭೯೪.೭೬ ಹೆಕ್ಟೇರ್ ನಷ್ಟು ಇದೆ. ಇದರಲ್ಲಿ ಲಭ್ಯವಿರುವ ಸರ್ಕಾರಿ ಜಮೀನು ಒಟ್ಟು ೧೦೫೩.೨೯ ಹೆಕ್ಟೇರ್ ಇದೆ. ಈ ಸರ್ಕಾರಿ ಜಮೀನಿನಲ್ಲಿ ಒಟ್ಟು ೭೫೪.೫೨ ಹೆಕ್ಟೇರ್ ನಲ್ಲಿ ೨.೪೯ ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಜಿಲ್ಲೆಗೆ ೨೦೨೪-೨೫ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ೪.೫೦ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಿದ್ದು, ಈಗಾಗಲೇ ೨.೬೬ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.
ಸಸ್ಯ ಕ್ಷೇತ್ರಗಳಲ್ಲಿ ಸಸಿಗಳ ನಾಟಿ
ಜಿಲ್ಲೆಯಲ್ಲಿ ಒಟ್ಟು ೫ ವಲಯಗಳಾದ ವಿಜಯಪುರ ತಾಲೂಕಿನ ಹಡಗಲಿ, ಇಂಡಿ ತಾಲೂಕಿನ ಬಬಲಾದ, ಬಸವನ ಬಾಗೇವಾಡಿ ತಾಲೂಕಿನ ಮಣೂರ, ಸಿಂದಗಿ ತಾಲೂಕಿನ ಬಬಲೇಶ್ವರ ಹಾಗೂ ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮಗಳಲ್ಲಿ ಸಸ್ಯ ಕ್ಷೇತ್ರಗಳಿದ್ದು, ಇದರಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ೫೬,೪೬೮ ಸಸಿಗಳನ್ನು ಬೆಳೆಸಲಾಗಿದೆ. ಇಲಾಖೆಯ ಇತರೆ ಯೋಜನೆಗಳಡಿ ೫೫,೩೬೦ ಸಸಿಗಳನ್ನು ಬೆಳೆಸಲಾಗಿದೆ. ಬೆಳೆಸಿರುವ ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಒಟ್ಟು ೬೦,೭೦೫ ಸಸಿಗಳನ್ನು ವಿತರಿಸಲಾಗಿದೆ. ಅಷ್ಟೇ ಅಲ್ಲದೇ ಇನ್ನೂ ೧,೦೦,೭೪೮ ಸಸಿಗಳ ಅವಶ್ಯಕತೆ ಇದ್ದು, ಮುಂಬರುವ ದಿನಗಳಲ್ಲಿ ಅವಶ್ಯವಿರುವ ಸಸಿಗಳನ್ನು ಬೆಳೆಸಿ ನಾಟಿ ಮಾಡಲಾಗುವುದು.
ಮುಂಗಾರು ಅರಣ್ಯ
ಮುಂಗಾರು ಕೃಷಿ ಚಟುವಟಿಕೆ ಗರಿಗೆದರಿರುವಂತೆ ಜಿಲ್ಲೆಯಲ್ಲಿ ಮುಂಗಾರು ಅರಣ್ಯ ಚಟುವಟಿಕೆ ಶುರುವಾಗಿದೆ. ಸಸಿ ನೆಟ್ಟು ಪೋಷಿಸುವ ಕೆಲಸ ಎಲ್ಲೆಡೆ ಸಾಗಿದೆ. ಹೊಲ-ಗದ್ದೆಗಳಲ್ಲಿ ಕೃಷಿ ಬೆಳೆಗಳ ಬಿತ್ತನೆ, ನಾಟಿ ಕಾರ್ಯದಂತೆಯೇ ಅರಣ್ಯ ಪ್ರದೇಶ, ರಸ್ತೆ ಬದಿಗಳು, ಶಾಲೆ-ಅಂಗನವಾಡಿ ಆವರಣಗಳು, ಆಟದ ಮೈದಾನಗಳ ಸುತ್ತ-ಮುತ್ತ, ಸರಕಾರಿ ಕಛೇರಿಗಳು ಸೇರಿದಂತೆ ಅವಕಾಶ ಇದ್ದಲ್ಲೆಲ್ಲಾ ಸಸಿಗಳ ನಾಟಿ ಮಾಡುವ ಕಾರ್ಯ ಪ್ರಾರಂಭಗೊಂಡಿದೆ.
೧.೦೦ ಲಕ್ಷ ಸಸಿಗಳು
ಜಿಲ್ಲಾ ಪಂಚಾಯತಿ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆ ವತಿಯಿಂದ ಬೆಳೆಸಿದಂತಹ ಒಟ್ಟು ೧.೦೦ ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಈ ಹೊತ್ತಲ್ಲೇ ಮುಂಗಾರು ಮಳೆಯ ಸಂದರ್ಭದಲ್ಲಿ ಸಸಿ ನೆಟ್ಟು ಪೋಷಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವ “ಹಸಿರು ವಿಜಯಪುರ” ಸೃಷ್ಟಿ ನಿರೀಕ್ಷಿತವಾಗಿ ಸಾಗಿದೆ.
ಸಪ್ತಯೋಜನೆ ಆಸರೆ
ಕಾರ್ಯಕ್ರಮಕ್ಕೆ ಕರ್ನಾಟಕ ಸಾಮಾಜಿಕ ಅರಣ್ಯ, ಮಹಾತ್ಮ ಗಾಂಧಿ ನರೇಗಾ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಹಸಿರು ಕರ್ನಾಟಕ, ಹಸಿರು ಆಯ-ವ್ಯಯ, ನಗರ ಪ್ರದೇಶ ಹಸಿರೀಕರಣ, ರಸ್ತೆ ಬದಿ ನೆಡುತೋಪು ಸೇರಿದಂತೆ ಸಪ್ತಯೋಜನೆಯ ಅನುದಾನಗಳ ಆಸರೆಯಾಗಿದೆ. ಜಿಲ್ಲಾ ಪಂಚಾಯತಿ, ಮಹಾತ್ಮಗಾಂಧಿ ನರೇಗಾ ಯೋಜನೆ ಹಾಗೂ ಇಲಾಖೆಯಲ್ಲಿನ ವಿವಿಧ ಯೋಜನೆಗಳಡಿ ಪ್ರಸ್ತುತ ಸಾಲಿನಲ್ಲಿ ಹೊಸದಾಗಿ ೨.೪೯ ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಹಾಗೂ ಈಗಾಗಲೇ ನಿರ್ಮಾಣ ಮಾಡಿದ ನೆಡುತೋಪುಗಳನ್ನು ನಿರ್ವಹಿಸಲಾಗುತ್ತಿದೆ.
ಸಸಿಗಳ ವಿತರಣೆ
೨೦೨೩-೨೪ ನೇ ಸಾಲಿಗೆ ಅರಣ್ಯ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಶ್ರೀಗಂಧ, ಹೊಂಗೆ, ಬೇವು, ಸೀತಾಫಲ, ನೆಲ್ಲಿ, ಮಹಾಘನಿ, ಹೆಬ್ಬೇವು, ನಿಂಬೆ, ಕಾಡುಬಾದಾಮಿ, ಸಾಗವಾನಿ, ರಕ್ತಚಂದನ, ಸೇರಿದಂತೆ ಇತರೆ ೨೨ ಬಗೆಯ ೨.೪೨ ಲಕ್ಷ ಸಸಿಗಳನ್ನು ಪೋಷಣೆ ಮಾಡಿ ೨೦೨೪-೨೫ನೇ ಸಾಲಿಗೆ ರೈತರಿಗೆ ರಿಯಾಯಿತಿ ದರಗಳಲ್ಲಿ ಸುಮಾರು ೨,೪೨,೦೦೦ ಸಸಿಗಳನ್ನು ವಿತರಿಸಲಾಗಿದೆ.
ಮಣ್ಣಿನ ಸವಕಳಿ ತಡೆಗೆ ಆಧಾರವಾದ ನೆಡುತೋಪು:
ವೇಗವಾಗಿ ಬೀಸುವ ಗಾಳಿ, ರಭಸವಾಗಿ ಹರಿಯುವ ನೀರು, ಈ ಎಲ್ಲಾ ಕಾರಣಗಳಿಂದ ಮಣ್ಣಿನ ಸವಕಳಿ ತಡೆಯಲ್ಪಟ್ಟು ಮಣ್ಣಿನ ಫಲವತ್ತತೆ ಹಾಗೆಯೇ ಉಳಿಯುತ್ತದೆ. ಗಿಡಗಳನ್ನು ಬೆಳಸುವುದರಿಂದ ಮಣ್ಣಿನ ಸವಕಳಿ ತಪ್ಪಿಸಲು ಪರಿಣಾಮಕಾರಿಯಾದ ಕ್ರಮವಾಗಿದೆ ಮತ್ತು ಇಳಿಜಾರಿಗೆ ಅಡ್ಡಲಾಗಿ ಸಸಿಗಳನ್ನು ನೆಟ್ಟಿದ್ದರಿಂದ ಮರಗಳ ಬೇರುಗಳು ಮಣ್ಣಿನ ಕಣಗಳನ್ನು ಹಿಡಿದಿಟ್ಟಿಕೊಳ್ಳುತ್ತವೆ. ಇದರಿಂದ ಮಣ್ಣಿನ ಸವಕಳಿ ತಪ್ಪುತ್ತದೆ. ಭೌಗೋಳಿಕವಾಗಿ ಅರಣ್ಯ ಪ್ರದೇಶಗಳು ಇಳಿಜಾರಿಗಿದ್ದು ಇಲ್ಲಿನ ಮಣ್ಣು ಮಳೆಗಾಲದಲ್ಲಿ ನೀರಿನ ರಭಸಕ್ಕೆ ಹರಿದು ಕೆರೆ, ಹಳ್ಳಗಳಿಗೆ ಜಾರಿ ಶೇಖರಣೆ ಆಗುತ್ತಿತ್ತು. ಆದರೆ ಇದೀಗ ವಿವಿಧ ಜಾತಿಯ ಗಿಡಗಳ ನೆಡುವುದರಿಂದ ಮಣ್ಣು ಫಲವತ್ತತೆ ಮತ್ತು ಮಣ್ಣಿನ ನೈಸರ್ಗಿಕ ಸವಕಳಿ ತಡೆಯಲು ಸಾಧ್ಯವಾಗಿದೆ.

ಅಂತರ್ಜಲ ಮಟ್ಟ ಹೆಚ್ಚಿಸಿದೆ:
ಮಳೆಗಾಲ ಸಮಯದಲ್ಲಿ ಮಳೆಯ ನೀರು ಯಥೆಸೇಚ್ಛವಾಗಿ ಹರಿಯದೇ ಬೇರುಗಳ ಮೂಲಕ, ನೆಡುತೋಪುಗಳ ಮತ್ತು ಇಳಿಜಾರು ಪ್ರದೇಶಗಳಲ್ಲಿ ಕಂದಕಗಳು, ತಗ್ಗು ದಿಣ್ಣೆಗಳನ್ನು ನಿರ್ಮಾಣಗೊಂಡಿದ್ದರ ಫಲದಿಂದ ನೀರು ಶೇಖರಣೆಗೊಂಡು ಭೂಮಿಯಲ್ಲಿ ಇಂಗಿ, ಅಂರ್ತಜಲ ಮಟ್ಟ ಹೆಚ್ಚಳವಾಗಿದೆ. ಜೊತೆಗೆ ಅರಣ್ಯ ಪ್ರದೇಶಗಳಲ್ಲಿ ಕಂದಕ ಬದುಗಳು ಮತ್ತು ಚೆಕ್ ಡ್ಯಾಮ್ ಗಳನ್ನು ನಿರ್ಮಿಸಲಾಗಿ, ಅಲ್ಲಲ್ಲಿ ಇಳಿಜಾರಿಗೆ ಅಡ್ಡಲಾಗಿ ಬದುಗಳ ನಿರ್ಮಾಣ, ತಗ್ಗು ಪ್ರದೇಶದಲ್ಲಿ ಹೊಂಡಗಳನ್ನು ನಿರ್ಮಿಸಿ ನೀರಿನ ಶೇಖರಣೆ ಮತ್ತು ಅಂತರ್ಜಾಲದ ಮಟ್ಟ ಹೆಚ್ಚಿಸುವತ್ತ ದಾಪುಗಾಲು ಇಟ್ಟಿದೆ. ಇದರಿಂದ ಸುತ್ತ-ಮುತ್ತಲಿನ ರೈತರ ಕೊಳವೆಬಾವಿ, ಬಾವಿಗಳು ಮತ್ತು ಕೆರೆ-ಕಟ್ಟೆಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಮಾನ್ಸೂನ್ ಮಾರುತವು ಸರಿಯಾದ ಸಮಯಕ್ಕೆ ಮಳೆ ಸುರಿಸಿದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ನೀರು ಸಂಗ್ರಹವಾಗುತ್ತದೆ ಎನ್ನಲಾಗುತ್ತದೆ.
ಸಸ್ಯ ಕ್ಷೇತ್ರಗಳಲ್ಲಿ ಸಸಿಗಳನ್ನು ಬೆಳೆಸಲು ಅಳವಡಿಸಿರುವ ವಿಶೇಷ ತಂತ್ರಜ್ಞಾನಗಳು ಮತ್ತು ಪ್ರಯತ್ನಗಳು:
ರಸ್ತೆ ಬದಿಗಳಲ್ಲಿ ೨೫೨೫ ಅಳತೆಯ ಸಸಿಗಳನ್ನು ನೆಡಲು, ಸಸ್ಯಕ್ಷೇತ್ರಗಳಲ್ಲಿ ಮೊದಲು ಚಿಕ್ಕ ಅಳತೆಯ ಪಾಲಥೀನ ಚೀಲಗಳಲ್ಲಿ ಬೀಜಗಳನ್ನು ನಾಟಿ ಮಾಡಿ ಬೀಜ ಮೋಳಕೆಯೊಡೆದು ಒಂದು ನಿರ್ದಿಷ್ಟವಾದ ಎತ್ತರ ಬರುವವರೆಗೂ ಪಾಲಿ ಹೌಸನಲ್ಲಿ ಬೆಳೆಸಲಾಗುತ್ತದೆ. ಹೀಗೆ ಬೆಳೆದಂತಹ ಸಸಿಗಳನ್ನು ೨೫೨೫ ಅಳತೆಯ ಎಚ್‌ಡಿಪಿಇ (ಊಆPಇ) ಚೀಲಗಳಿಗೆ ವರ್ಗಾಯಿಸಿ ೧೫-೨೦ ತಿಂಗಳುಗಳವರೆಗೆ ಸರಿಯಾದ ಪೋಶಕಾಂಶಗಳು ಕಾಲ-ಕಾಲಕ್ಕೆ ನೀರುಣಿಸುವುದರ ಜೊತೆಗೆ ಚೀಲದಲ್ಲಿ ಬೆಳೆದಂತಹ ಕಸವನ್ನು ಸ್ವಚ್ಚಗೊಳಿಸುತ್ತಾ ಸಸಿಗಳಿಗೆ ಪೂರಕ ವಾತಾವರಣ ನಿರ್ಮಿಸುತ್ತವೆ. ಅಲ್ಲದೇ ಸಸಿಗಳು ಎತ್ತರ ಹೋಗುವ ಉದ್ದೇಶದಿಂದ ಆಧಾರ ಕಡ್ಡಿಗಳನ್ನು ನೀಡುತ್ತಾ ಬೆಳೆದಂತಹ ಸಸಿಗಳ ಕೆಳ ಮಟ್ಟದ ರೆಂಬೆ-ಕೊಂಬೆಗಳನ್ನು ಕತ್ತರಿಸುತ್ತೇವೆ. ಸಸಿಗಳು ಒಂದು ಜಾಗದಲ್ಲಿ ಬಹಳ ದಿನಗಳವರೆಗೆ ಇದ್ದರೆ ಇದ್ದ ಸ್ಥಳದಲ್ಲಿಯೇ ಬೇರು ಬಿಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಕಾಲಕಾಲಕ್ಕೆ ಅವುಗಳನ್ನು ಸ್ಥಾನಪಲ್ಲಟ ಮಾಡಲಾಗುವುದು.ಹೀಗೆ ಬೆಳೆದಂತಹ ೨೫೨೫ ಅಳತೆಯ ಸಸಿಗಳು ಕನಿಷ್ಠ ೪೫-೫೦ ಕೆ.ಜಿ. ಯವರೆಗೆ ಇದ್ದು, ಸಸಿಗಳು ಒಟ್ಟಾರೆಯಾಗಿ ೧೮-೨೪ ತಿಂಗಳವರೆಗೆ ಸಸ್ಯಕ್ಷೇತ್ರಗಳಲ್ಲಿ ನಿರ್ವಹಣೆಗೆ ಮಾತ್ರ ಅವಕಾಶವಿರುತ್ತದೆ. ಅರಣ್ಯೀಕರಣ ಹೆಚ್ಚಿಸಲು ಕೈಗೊಂಡ ವಿನೂತನ(ವಿಶೇಷ) ಪ್ರಯತ್ನಗಳು: ವಿಜಯಪುರ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಮಳೆಯ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಅಧಿಕ ತಾಪಮಾನ, ಒಣಹವೆಯಂತಹ ವಾತಾವರಣವಿರುತ್ತದೆ. ಅಲ್ಲದೇ ದನ-ಕರುಗಳಿಗೆ ಹಾಗೂ ಆಡು ಮೇಕೆಗಳಿಗೆ ಕಡಿಮೆ ಎತ್ತರದ ಸಸಿಗಳು ಸುಲಭವಾಗಿ ಆಹಾರವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ ಕಾರಣ, ಹೊಸ ಪ್ರಯತ್ನವಾಗಿ ರಸ್ತೆ ಬದಿಗಳಲ್ಲಿ ೨೫೨೫ ಅಳತೆಯ ಸಸಿಗಳನ್ನು ನೆಡಲಾಗಿದ್ದು ಅವುಗಳ ಎತ್ತರವು ೧೦ ರಿಂದ ೧೨ ಅಡಿಗಳಷ್ಟು ಇರುವುದರಿಂದ ಕುರಿ-ಮೇಕೆ ಹಾಗೂ ದನ-ಕರುಗಳಿಗೆ ಸುಲಭವಾಗಿ ಆಹಾರವಾಗುವುದಿಲ್ಲ ಮತ್ತು ಸುಮಾರು ೧೮-೨೪ ತಿಂಗಳುಗಳ ಕಾಲ ಸಸ್ಯಪಾಲನಾಲಯದಲ್ಲಿ ಬೆಳೆದು ನಿರ್ವಹಿಸಲ್ಪಡುವುದರಿಂದ ೨೫೨೫ ಅಳತೆಯ ಸಸಿಗಳನ್ನು ಕ್ಷೇತ್ರಮಟ್ಟದಲ್ಲಿ ನೆಟ್ಟಾಗ ಬಲು ಬೇಗನೆ ಹೊಂದಿಕೊಂಡು ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಬ್ಲಾಕ್‌ನಲ್ಲಿ ಕೈಗೊಂಡ ಅರಣ್ಯೀಕರಣ ಕಾಮಗಾರಿಗಳಿಗೆ ೧೪೨೦ ಅಳತೆಯ ಸಸಿಗಳಿಗೆ ಒಂದು ವೇಳೆ ಬಿದಿರಿನ ಟ್ರೀ-ಗಾರ್ಡ್ ಪೂರೈಕೆ ಇಲಾಖಾವತಿಯಿಂದ ಆದಲ್ಲಿ ಬಿದಿರು ಬೆಳೆಸುವ ರೈತರಿಗೆ ಪ್ರೋತ್ಸಾಹಿಸಿದಂತಾಗುವುದರ ಜೊತೆಗೆ ಬಿದಿರಿನ ಕಲೆಯನ್ನು ನಂಬಿ ಬದುಕುತ್ತಿರುವವರಿಗೂ ಒಂದಡೆ ಆಸರೆಯಾದಂತಾಗುತ್ತದೆ. ಇದರಿಂದ ಅರಣ್ಯ ಇಲಾಖೆ ಪಟ್ಟ ಶ್ರಮಕ್ಕೆ ಒಂದು ಸಾರ್ಥಕತೆ ಇರುತ್ತದೆ.

ಅರಣ್ಯೀಕರಣದಿಂದಾಗಿ ಈ ಪ್ರದೇಶದಲ್ಲಿ ಮಣ್ಣಿನ ತೇವಾಂಶ ಹೆಚ್ಚಿಸುವುದಲ್ಲದೆ, ಗಿಡ-ಮರಗಳು ಮೋಡಗಳ ಆಕರ್ಷಣೆಯಿಂದ ಈ ಭಾಗದ ಭೌಗೋಳಿಕ ಪ್ರದೇಶದಲ್ಲಿ ಅತೀ ಹೆಚ್ಚು ಮಳೆ ಬೀಳುವುದು. ರೈತರು ಬೆಳೆದ ಬೆಳೆಗಳಿಗೆ ಸಾಕಷ್ಟು ನೀರು ಮತ್ತು ಬೋರವೆಲ್, ಕೊಳವೆ ಬಾವಿ, ತೆರೆದ ಬಾವಿಗಳು ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಇದರಿಂದ ರೈತರು ಹೆಚ್ಚಿನ ಇಳುವರಿ ಮತ್ತು ಅಧಿಕ ಲಾಭ ಪಡೆಯುತ್ತಿದ್ದಾರೆ.”
– ರಿಷಿ ಆನಂದ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ, ವಿಜಯಪುರ
“ಕಳೆದ ವರ್ಷಗಳಿಂದ ಅರಣ್ಯ ಪ್ರದೇಶ, ರಸ್ತೆಬದಿ, ಸಂಘ-ಸಂಸ್ಥೆಗಳಲ್ಲಿ, ಮುಂತಾದವುಗಳಲ್ಲಿ ಸಸಿಗಳನ್ನು ನಾಟಿ ಮಾಡಿ ವಿಜಯಪುರ ಜಿಲ್ಲೆಯಲ್ಲಿ ಕುಂದಿರುವ ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸುವತ್ತ ಅರಣ್ಯ ಇಲಾಖೆಯು ಮಹತ್ವದ ಪಾತ್ರವಹಿಸುತ್ತಿದೆ. ಇದಕ್ಕೆ ಜಿಲ್ಲೆಯಲ್ಲಿ ಎಲ್ಲರ ಸಹಕಾರವೂ ದೊರಕುತ್ತಿದೆ.“
– ವನೀತಾ.ಆರ್
ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ವಿಜಯಪುರ

