ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಯೋಗ, ಭಜನೆ ಹಾಗೂ ಆಧ್ಯಾತ್ಮೀಕ ವಿಚಾರಗಳು ನಮ್ಮ ಆರೋಗ್ಯಪೂರ್ಣ, ಶಾಂತಿಯುತ ಜೀವನಕ್ಕೆ ಅತೀ ಅಗತ್ಯವಾಗಿವೆ ಎಂದು ಯೋಗ ಹಾಗೂ ಆಧ್ಯಾತ್ಮಗುರು ನಿರಂಜನ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ಭಾನುವಾರ ಜರುಗಿದ ಹಿಮಾಲಯನ್ ಧ್ಯಾನಯೋಗ, ಸಾಮೂಹಿಕ ಭಜನೆ ಹಾಗೂ ಆದ್ಯಾತ್ಮಿಕ ಪ್ರವಚನದ ಸಮಾರೋಪ ಸಮಾರಂಭದಲ್ಲಿ ೧೭ ದಿನಗಳ ಯಶಸ್ವಿ ಕಾರ್ಯಕ್ರಮ ಸಂಪನ್ನಗೊಳಿಸಿ ಅವರು ಮಾತನಾಡಿದರು.
ಯೋಗ ಕೇವಲ ರೋಗಿಗಳಿಗೆ ಮಾತ್ರ ಎಂಬ ಭಾವನೆ ತಪ್ಪು. ಯೋಗದಿಂದ ನಾವು ಯೋಗಿಗಳಾಗಬೇಕು ಜೊತೆಗೆ ದೈನಂದಿನ ಜೀವನ ಆನಂದಮಯವಾಗಬೇಕು ಅದಕ್ಕಾಗಿ ನಾವು ನಿತ್ಯ ಯೋಗ, ಭಜನೆ ಹಾಗೂ ಉತ್ತಮ ವಿಚಾರಗಳನ್ನು ರೂಢಿಸಿಕೊಂಡು ಅನುಸರಿಸಬೇಕು ಎಂದರು.
ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತನೇತ್ರ ತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿ, ಯಾವುದೇ ಆಡಂಬರಗಳಿಲ್ಲದ ಸರಳ, ಸುಂದರ ಯೋಗಪದ್ಧತಿ ಹಾಗೂ ನಮ್ಮ ದೈನಂದಿನ ಜೀವನಕ್ಕೆ ಅಗತ್ಯವಾದ ವಿಷಯಗಳನ್ನು ಮನಮುಟ್ಟುವಂತೆ ತಿಳಿಸುವುದರ ಮೂಲಕ ಶ್ರೀಗಳು ೧೭ ದಿನಗಳ ಕಾಲ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಪಟ್ಟಣದ ಜನತೆಯ ಭಾಗ್ಯವಾಗಿದೆ ಎಂದರು.
ಯೋಗ ಉತ್ಸವ ಸಮಿತಿಯ ಅಧ್ಯಕ್ಷ ಸಿ.ಕೆ.ಕುದರಿ, ಪಟ್ಟಣದ ಹಿರಿಯ ವೈದ್ಯ ಆರ್.ಆರ್.ನಾಯಿಕ್ ಹಾಗೂ ಸಿಂದಗಿಯ ಖ್ಯಾತ ವೈದ್ಯ ಮಹಾಂತೇಶ ಹಿರೇಮಠ, ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ವ್ಹಿ.ಕೆ.ಪಾಟೀಲ ಮಾತನಾಡಿದರು.
ಸ್ಥಳೀಯ ಜಡಿಮಠದ ಜಡಿಸಿದ್ಧೇಶ್ವರ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಸುಮಾರು ೧೫ ದಿನಗಳ ಯೋಗ ಹಾಗೂ ಆಧ್ಯಾತ್ಮೀಕ ಪ್ರವಚನ ಕಾರ್ಯಕ್ರಮದಿಂದ ತಮ್ಮಲ್ಲಿ ಆದ ಬದಲಾವಣೆ ಹಾಗೂ ಬೆಳವಣಿಗೆಗಳ ಕುರಿತು ನೀಲಮ್ಮ ತಡವಲ್, ಪಾರ್ವತಿ, ನಿವೃತ್ತ ಮುಖ್ಯಶಿಕ್ಷಕ ಎಸ್.ಎನ್.ಬಸವರೆಡ್ಡಿ, ಮಹಾಂತೇಶ ಬಿರಾದಾರ, ಸಿದ್ಧು ಮೇಲಿನಮನಿ ತಮ್ಮ ಅನುಭವ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಭರತ ಕಾಳಗಿ, ತಬಲಾ ವಾದಕ ಸಾಹೇಬಗೌಡ ಮುಳಸಾವಳಗಿ, ಸಂತೋಷ ಬಡಿಗೇರ ಅವರನ್ನು ಗೌರವಿಸಲಾಯಿತು.
ನಂತರ ಮಹಾಪ್ರಸಾದ ಜರುಗಿತು.
ಕಾರ್ಯಕ್ರಮದಲ್ಲಿ ವೈದ್ಯ ಮಂಜುನಾಥ ಮಠ, ಉದ್ಯಮಿಗಳಾದ ಎ.ಕೆ.ನಾಡಗೌಡ, ರಿಯಾಜ್ ಯಲಗಾರ, ಸಂಗನಗೌಡ ಬಿರಾದಾರ ನಿರೂಪಕ ಪಂಚಾಕ್ಷರಿ ಮಿಂಚನಾಳ ಸಹಿತ ಸ್ಥಳೀಯ ವೈದ್ಯರು, ಗಣ್ಯರು, ಮಹಿಳೆಯರು ಮತ್ತು ಮಕ್ಕಳು ಇದ್ದರು.

