ಜಿಲ್ಲೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಂಡ ಭೇಟಿ | ಜಿಪಂ ಸಿಇಒ ಅವರ ನೇತೃತ್ವದಲ್ಲಿ ಸಭೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಎನ್‌ಲ್‌ಎಂ ( ನ್ಯಾಷನಲ್ ಲೆವೆಲ್ ಇನಸ್ಟಿಟ್ಯೂಷನಲ್ ಮಾನಿಟರ್) ಗಾಂಧಿ ಗ್ರಾಮ ರೂರಲ್ ಇನ್ಸ್ಟಿಟ್ಯೂಟ್ ತಮಿಳುನಾಡು ಅಧಿಕಾರಿಗಳಾದ ಡಾ.ಎ.ಆರ್.ಮಣಿ ಹಾಗೂ ಇ.ಆರ್.ಕೆ ರೋಸಿವ್ ಇವರೊಂದಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳಲ್ಲಿ ಸಮೀಕ್ಷೆ ಕೈಗೊಂಡ ಕ್ರೊಢೀಕೃತ ಸಂಪೂರ್ಣ ಮಾಹಿತಿಯ ಪ್ರಕಾರ ಕೇಂದ್ರ ಪ್ರಾಯೋಜಕತ್ವದ ಯೋಜನೆಗಳ ಅನುಷ್ಠಾನದ ಕುರಿತು ತಮ್ಮ ವರದಿಯಲ್ಲಿ ನಮೂದಿಸಿಕೊಂಡ ವಿಷಯದ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಸರ್ಕಾರಿ ಶಾಲಾ ಅಭಿವೃದ್ಧಿ ಕಾಮಗಾರಿಗಳು, ಬೋರ್‌ವೆಲ್ ಮರುಪೂರಣ ಘಟಕ, ಅಮೃತ ಸರೋವರ, ಎನ್.ಆರ್.ಎಲ್.ಎಮ್ ಯೋಜನೆ, ಪಿಂಚಣಿ ಯೋಜನೆಗಳು, ವಸತಿ ಯೋಜನೆ ಕಾಮಗಾರಿಗಳು, ಸಾಮಾಜಿಕ ಅರಣ್ಯೀಕರಣ ಕಾಮಗಾರಿಗಳು ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಂಡಿವೆ ಎಂದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳಾದ ಸರ್ಕಾರಿ ಶಾಲಾ ಅಭಿವೃದ್ಧಿ ಕಾಮಗಾರಿಗಳು, ಜಲ ಸಂರಕ್ಷಣೆ ಕಾಮಗಾರಿಗಳಾದ ಬೋರ್ ವೆಲ್ ಮರುಪೂರಣ ಘಟಕ, ಅಮೃತ ಸರೋವರ ಕಾಮಗಾರಿಗಳನ್ನು ವೀಕ್ಷಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಡಿ.ಆರ್.ಡಿ.ಎ ಕೋಶದ ಯೋಜನಾ ನಿರ್ದೇಶಕ ಬಿ. ಎಸ್. ರಾಠೋಡ ಸೆರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಪಂಚಾಯತಿಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ವಿವಿಧ ಗ್ರಾಪಂಗಳಿಗೆ ಭೇಟಿ ಮತ್ತು ಸಮೀಕ್ಷೆ
ಗಾಂಧಿ ಗ್ರಾಮ ರೂರಲ್ ಇನ್ಸ್ಟಿಟ್ಯೂಟ್ ತಮಿಳುನಾಡು ಅಧಿಕಾರಿಗಳಾದ ಡಾ.ಎ.ಆರ್.ಮಣಿ ಹಾಗೂ ಇ.ಆರ್. ಕೆ ರೋಸಿವ್ ಅವರು ನ.೭ ರಿಂದ ನ.೧೧ ವರೆಗೆ ವಿಜಯಪುರ ಜಿಲ್ಲೆಯ ಚಡಚಣ, ಬಸವನ ಬಾಗೇವಾಡಿ, ಇಂಡಿ ಹಾಗೂ ದೇವರ ಹಿಪ್ಪರಗಿ ತಾಲೂಕುಗಳಲ್ಲಿನ ಆಯ್ದ ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಸಮೀಕ್ಷೆ ಕೈಗೊಂಡು ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಅರ್ಹ ಫಲಾನುಭವಿಗಳೊಂದಿಗೆ ಚರ್ಚಿಸಿ, ಗ್ರಾಮೀಣ ಭಾಗದಲ್ಲಿ ಅನುಷ್ಠಾನಗೊಳಿಸಲಾದ ಮಹಾತ್ಮಗಾಂಧಿ ನರೇಗಾ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ನ್ಯಾಷನಲ್ ಸೋಶಿಯಲ್ ಅಸಿಸ್ಟನ್ಸ್ ಪ್ರೊಗ್ರಾಮ್, ರುಡ್‌ಸೆಟ್, ಸ್ವಾಮಿತ್ವ ಯೋಜನೆಗಳು ಹಾಗೂ ಕಾಮಗಾರಿಗಳ ಪರಿಶೀಲನೆ ನಡೆಸಿದರು.

