ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ ರಾಜ್ಯೋತ್ಸವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾಷೆಗಳು ಕೇವಲ ಮಾತನಾಡುವ ಮಾಧ್ಯಮ ಮಾತ್ರವಲ್ಲ, ಬದಲಿಗೆ ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯ ಪ್ರತಿಬಿಂಬವಾಗಿರುತ್ತವೆ. ವಿಶ್ವದ ಲಿಪಿಗಳ ರಾಣಿಯಾಗಿ ಗುರುತಿಸಿಕೊಂಡಿರುವ ಕನ್ನಡ ಭಾಷೆ ಕೇವಲ ಭಾಷೆ ಮಾತ್ರವಾಗಿರದೆ ಅದು ನಮ್ಮ ಜೀವನಾಡಿಯಾಗಿದೆ. ಹೀಗಾಗಿ ಅದನ್ನು ಉಳಿಸಿ ಬೆಳೆಸುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಕಾರಣ ಒಂದು ಭಾಷೆ ನಾಶವಾದರೆ ಒಂದು ಪರಂಪರೆಯೇ ನಾಶವಾಗುತ್ತದೆ. ಆದ ಕಾರಣ ಅದನ್ನು ಉಳಿಸುವ ಕೆಲಸ ನಮ್ಮಿಂದ ನಡೆಯಬೇಕು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ರಾಜ್ಯೋತ್ಸವದ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಕನ್ನಡದ ಉತ್ಸವ ನಿತ್ಯೋತ್ಸವವಾಗಬೇಕು ಎಂದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಮಾತನಾಡಿ, ಕನ್ನಡಿಗರ ಗುಣದಷ್ಟೆ ಕನ್ನಡ ಸುಂದರವಾಗಿದ್ದು ಒಂದೊಂದು ಭಾಗಕ್ಕೆ ಕಾಲಿಟ್ಟರೆ ಒಂದೊಂದು ರೀತಿಯಲ್ಲಿ ಕನ್ನಡದ ಝೇಂಕಾರವಾಗುತ್ತದೆ. ಇದು ಕರ್ನಾಟಕದಲ್ಲಿ ಮಾತ್ರ ನೋಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಇನ್ನೋರ್ವ ಕನ್ನಡ ಉಪನ್ಯಾಸಕ ರಮೇಶ ಬಾಗೇವಾಡಿ, ಹಲವಾರು ಪ್ರಕಾರದ ಜನಪದ ಗೀತೆಗಳನ್ನು ಹಾಡಿ ಭಾಷೆಯ ಸೊಗಡನ್ನು ಪರಿಚಯಿಸಿದರು.
ಗಾಯಕ ಪಾಂಡುರಂಗ ಕುಲಕರ್ಣಿ ಕನ್ನಡ ಪರ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ವಿದ್ಯಾರ್ಥಿನಿ ಆಕಾಂಕ್ಷಾ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಸ್ವಾಗತಿಸಿದರು. ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು.
ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

