ನಾಲತವಾಡ ಪಪಂ ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಂಗಳವಾರ ಭೇಟಿ ನೀಡಿ, ಪಟ್ಟಣ ಪಂಚಾಯತಿಯಿಂದ ಸಂಗ್ರಹವಾಗುತ್ತಿರುವ ತೆರಿಗೆ ವಸೂಲಿ, ನೀರಿನ ಕರ ವಸೂಲಿ, ಅಂಗಡಿ ಮಳಿಗೆಗಳ ಬಾಡಿಗೆ, ಜಾಹೀರಾತು ಪರವಾನಿಗೆ ಸೇರಿದಂತೆ ವಿವಿಧ ವಿಷಯದ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ಪಟ್ಟಣದಲ್ಲಿ ಎಸ್.ಎಫ್.ಸಿ, 15ನೇ ಹಣಕಾಸು ಯೋಜನೆಯ 2021-22 ರಿಂದ 2024-25ನೇ ಅವಧಿಯವರೆಗೆ ಪ್ರಗತಿಯನ್ನು ಪರಿಶೀಲಿಸಿ ಉಳಿಕೆ ಅನುದಾನದ ಕ್ರಿಯಾ ಯೋಜನೆಗೆ ಮಂಜೂರಾತಿ ಪಡೆದುಕೊಳ್ಳುವಂತೆಯೂ ಹಾಗೂ ಕಾಮಗಾರಿಗಳ ಆದೇಶ ನೀಡಿ ಪ್ರಗತಿ ಸಾಧಿಸಲು ಮುಖ್ಯಾಧಿಕಾರಿಗಳಿಗೆ ಮತ್ತು ಕಿರಿಯ ಅಭಿಯಂತರರಿಗೆ ಸೂಚಿಸಿದರು.
ಅಂಬೇಡ್ಕರ ಸರ್ಕಲ್‌ದಲ್ಲಿ ಅಭಿವೃದ್ದಿ ಕುರಿತು,ಬಸವೇಶ್ವರ ವೃತ್ತದಲ್ಲಿ ಗೂಡಂಗಡಿಗಳ ತೆರವು ಕುರಿತು ಪರಿಶೀಲಿಸಿದ ಅವರು, ಅಭಿವೃಧ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ನಿವಾರಿಸಲು ಸೂಚಿಸಿದರು.
ಎಸ್.ಎಫ್.ಸಿ ವಿಶೇಷ ಅನುದಾನದಡಿ ನಿರ್ಮಾಣವಾಗುತ್ತಿರುವ ಶಾಸಕರ ಮಾದರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಕಟ್ಟಡ ಕಾಮಗಾರಿ ಪರಿಶೀಲಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಎಸ್.ಡಬ್ಲೂ.ಎಮ್ ಘಟಕದ ಕಸ ವೀಲೆವಾರಿ ಸ್ಥಳಕ್ಕೆ ಭೇಟಿ ನೀಡಿ, ವೈಜ್ಞಾನಿಕವಾಗಿ ಘನ ತ್ಯಾಜ್ಯ ವಿಲೇವಾರಿಗೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಆಯ್,ಜಿ. ಕೊಣ್ಣೂರ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕರಾದ ಬದ್ರುದ್ದಿನ್ ಸೌದಾಗರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾರದ ನಾರಯಣಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

