– ಪ್ರೊ.ಶಾರದಾ ಎಸ್.ಪಾಟೀಲ್ ( ಮೇಟಿ)
ಬಾದಾಮಿ
ಉದಯರಶ್ಮಿ ದಿನಪತ್ರಿಕೆ
“ಕೊಡೆವಿಡಿಯೆ, ಕುದುರೆಯ ದೃಢವುಳ್ಳ ರಾವುತನೇರೆ,
ಕೊಡೆ -ಕೋಟಿ ಶೂರರು ಹನ್ನಿಬ್ಬರಯ್ಯ.
ಚಂದ್ರಕಾಂತದ ಗಿರಿಯ ಗಜ ಬಂದು ಮೂದಲಿಸೆ
ಅರಿದು ಕೊಲುವೊಡೆ ರಿಪುಗಳ ಕಲಿತನವ ನೋಡಾ.
ಆವಿಗೆಯಲೊದವಿದ ಪುತ್ತಳಿಯ ರೂಹಿನಂತಾಯಿತ್ತು
ಕೂಡಲ ಸಂಗಮದೇವಾ ನಿಮ್ಮ ಹೆಸರಿಲ್ಲದ ಹೆಸರು”*
ಇದು ಬಸವಣ್ಣನವರ, “ಸಂಸಾರಹೇಯಸ್ಥಲ” ದ ವಚನ ಮಾಯೆಯ ವಿಲಾಸದಲ್ಲಿ ರೂಪಗೊಂಡವುಗಳೇ ದೇಹ, ಮನಸ್ಸು ಮತ್ತು ಶಬ್ದಾದಿ ವಿಷಯಯಂಗಳು ಅವು ತನಗೆಯೇ ಎಂದು ಭ್ರಮಿಸುತ್ತಾನೆ. ಈ ಭ್ರಮೆ ಯೇಸಂಸಾರ. ಈ ಭ್ರಮೆಯು ಆತ್ಮನಿಗೆ ತರವಲ್ಲ, ಹೇಯ. ಇದನ್ನು ತಿರಸ್ಕರಿಸದಿದ್ದರೆ ಆತ್ಮನು ಸ್ವಸ್ಥನಾಗಲಾರ. ಸ್ಥಲ ಅಂದರೆ -ಪ್ರಜ್ಞಾ ಭೂಮಿಕೆ ; ಶಿವಾಭಿವ್ಯಕ್ತಿಯ ಮನೊಸ್ಥಿತಿ.
ಈ ವಚನಕ್ಕೆ ಈಗಾಗಲೇ ಮೂರು ಪ್ರಾಚೀನ ಟೀಕೆಗಳು ಬಂದಿರುವವು. ಅರ್ಥದೃಷ್ಟಿಯಿಂದ ಸಮರ್ಪಕವಾಗಿಲ್ಲ. ಎಂದು ಖ್ಯಾತ ಸಂಶೋಧಕರೂ ವಿದ್ವಾ೦ಸಕರೂ ಆದ ಡಾಕ್ಟರ್ ಎಂ.ಎಂ.ಕಲಬುರ್ಗಿಯವರ ಅಭಿಪ್ರಾಯ. ಆಧುನಿಕ ವಿದ್ವಾ೦ಸರಿಗೂ ಇದು ಸವಾಲಾಗಿ ನಿಂತಿದೆ.ಓದುಗರು ತಮ್ಮ, ತಮ್ಮ ಚಿಂತನೆಗಳಿಂದ ಹೊಸ ಅರ್ಥ ಕೊಡಬಹುದು, ಹಾಗಂದೇ ಈ ವಚನವನ್ನು ನಿರ್ವಚನೆನಗಾಗಿ ಇಲ್ಲಿ ಎತ್ತಿಕೊಳ್ಳಲಾಗಿದೆ.
ಇಲ್ಲಿ ಮೂರು ವಾಕ್ಯಗಳಿವೆ, ಮೊದಲಿನ ವಾಕ್ಯಗಳು ಕೊನೆಯ ವಾಕ್ಯವನ್ನು ಸಮರ್ಥಿಸುವುದು ಯಾವುದೇ ವಚನದ ರಚನಾ ಶಿಲ್ಪ ವಾಗಿದೆ. ಹೀಗಾಗಿ ಈ ವಚನದ ಮೂರು ವಾಕ್ಯಗಳಲ್ಲಿ ಒಂದು ಅಭಿಪ್ರಾಯ ಸುಸಂಭದ್ದತೆ ಇರಬೇಕಾಗುತ್ತದೆ. ಹಾಗೆ ಇದೆ .ಈ ಗ್ರಹಿಕೆಯ ಹಿನ್ನೆಲೆಯಲ್ಲಿ ಈ ವಚನದ ಅರ್ಥಪರಿಭಾವನೆಗೆ ತೊಡಗಬೇಕು.
” ಪಿಂಡಜ್ಞಾನಸ್ಥಲ”ದ ತರುವಾಯದ್ದು “ಸಂಸಾರಹೇ ಯಸ್ಥಲ”: ಆ ಸ್ಥಲದಲ್ಲಿ ಜೀವನಿಗೆ ಶಿವಜ್ಞಾನ ಅಂಕರಿಸುತ್ತದೆ ಹಾಗಾಗಿ ಈ ಸ್ಥಲದಲ್ಲಿ ಸಂಸಾರ ಹೇಯ ಭಾವ ಪ್ರಾರಂಭವಾಗುತ್ತದೆ. ಆಗ ಪರಿಪರಿಯ ಸಂಸಾರ ಯಾತನೆಗಳಿಗೆ ಅನುಗುಣವಾಗಿ ಪರಿಪರಿಯ ಸಂಸಾರ ಹೇಯ ಭಾವಗಳು ಜೀವನಿಗೆ ಮೂಡತೊಡಗುತ್ತವೆ. ಅಂದರೆ ಸಂಸಾರ ಪಾಶವಾಗಿದೆ. ಈ ಪಾಶವನ್ನು ಕಳಚಿಕೊಂಡು ನಿನ್ನತ್ತ ಬರಲು ತವಕ ಪಡುತ್ತಲಿದ್ದೇನೆ. ಇದನ್ನು ಪರಿಹರಿಸಿಕೊಳ್ಳಲು ನಾನು ಮಾಡುವ ಪ್ರಯತ್ನಗಳು ವ್ಯರ್ಥ, ನೀನೆ ಕರುಣಿಸಿ ಇದನ್ನು ದೂರಿಕರಿಸಬೇಕು – ಎಂದು ಮುಂತಾದ ಭಾವನೆಗಳು ಮೂಡಿ ಮೂಡಿ ನಿಲ್ಲುತ್ತವೆ. ಇಲ್ಲಿ ಮಾತ್ರ ಈ ಸಂಸಾರವನ್ನು ಗೆಲ್ಲಲು ನಾನು ಅಸಮರ್ಥ, ಗೆಲ್ಲುವೆನೆಂಬುವದು ವ್ಯರ್ಥ ಹೋರಾಟ ಈಗ ನನಗೆ ನಿನ್ನ ಜ್ಞಾನತೃಷೆ ಉಂಟಾಗಿದ್ದರೂ ಸಂಸಾರ ಬಂಧ ಕಾರಣವಾಗಿ ನಿನ್ನನ್ನು ದೊರಕಿಸಿಕೊಂಡೂ ದೊರಕಿಸಿಕೊಳ್ಳದ ಸ್ಥಿತಿಯಲ್ಲಿದ್ದೇನೆ. ಈ ಕೇಂದ್ರ ಉದ್ದೇಶದ ಸುತ್ತ ಈ ಸಂಪೂರ್ಣ ವಚನ ಹೆಣೆದುಕೊಂಡಿದೆ.
ಚಂದ್ರಕಾಂತ ಪರ್ವತದಲ್ಲಿ (ಚಂದ್ರಪ್ರಕಾಶ್ ದಿಂದ ದ್ರವಿಸುವುದು ಎಂದು ಭಾವಿಸಲಾದ ಒಂದು ಬಗೆಯ ಬಿಳಿಯ ಕಲ್ಲಿನ ಗಿರಿ. ಇದು ಪಾರದರ್ಶಕವಾಗಿದ್ದು ಪ್ರತಿ ಬಿಂಬಿಸುವ ಗುಣವನ್ನು ಹೊಂದಿರುತ್ತದೆ. ಈ ಪರ್ವತಕ್ಕೆ ಆನೆಯು ಬಂದು ಮೂದಲಿಸಿದಲ್ಲಿ ಆ ಛಾಯಾಗಜವನ್ನು ನಾನು ಕೊಲ್ಲುವೆ ನೆಂಬುವದುಬುವದು ಅದೆಂತಹ ಕಲಿತನ? ಆನೆಯ ಪ್ರತಿಬಿಂಬವನ್ನು ಕೊಲ್ಲಲು ಸಾಧ್ಯವಾಗುವುದೇ? ಇಲ್ಲ. ಅದು ವ್ಯರ್ಥ ಹೋರಾಟ.
ಹಾಗೆಯೇನನಗೆ ಕೂಡಲಸಂಗಮದೇವ ನೀನೇ ಕರ್ತಾರನಾಗಿರುವ,ಕಮ್ಮಟದಲ್ಲಿ ನೀನೇ ಕುಂಬಾರ. ನಿನ್ನಆವಿಗೆಯಲ್ಲಿ ಆಕಾರ ಪಡೆದು ಕೈಗೆ ಬಾರದ
ಗೊಂಬೆಯಂತಹಾಗಿದೆ ನನ್ನ ಸ್ಥಿತಿ. ಸಾಕಾರವೆಂದರೂ ನಿರಾಕಾರವಾಗಿರುವ ನಿಮ್ಮ ರೂಪ.
ಹೀಗೆ ಭಕ್ತನ ಮಾನಸಿಕ ತೊಳಲಾಟವನ್ನು ಪ್ರತಿನಿಧಿಸುವ ವಚನವಿದು, ಊರ್ದವ ಮುಖಿಯಾದ
ಜೀವ ಜ್ಞಾನಾಜ್ಞಾನಗಳಲ್ಲಿ ಸಿಲುಕಿಕೊಂಡು ನಡೆಸಿದ ಹೋರಾಟದ ಹುಸಿಸನ್ನಾಹ, ಹುಸಿಗೆಲವು, ಕೊನೆಗೆ ಅಸಹಾಯಕತೆಗಳ ಭಾವ ಉಂಟಾಗುವಿಕೆ ಇಲ್ಲಿದೆ. ಹೀಗಾಗಿ ಈ ವಚನ ಪ್ರಾರಂಭವಾಗುವುದೇ ಹೋರಾಟ ಪ್ರತಿಮೆಯಿಂದ. ಏಕಕಾಲಕ್ಕೆ ಕೋಟಿ ಕುದುರೆ, ಅವುಗಳ ಮೇಲೆ ಕೋಟಿ ಕೊಡೆ, ಅವುಗಳ ನೆರಳಲ್ಲಿ ಕೋಟಿ ರಾವುತರು ವಚನವೇದಿಕೆಯ ಮೇಲೆ ಆವೇಶದಿಂದ ಬರುವರಾದರೂ, ಅವರಲ್ಲಿ ನಿಜವಾಗಿ ಕಾದುವವರು 12 ಜನ ಮಾತ್ರ ಎಂದಾಗ “ಇದು ಇರಿಯದ ವೀರನ ಇಲ್ಲದ ಸೊಬಗು” ಎಂದು ತಟ್ಟನೆ ಮನವರಿಕೆಯಾಗುತ್ತದೆ,ಮಾಯೆ ಎಂಬ ವೈರಿಯನ್ನು ಜಯಿಸಲು ವಿಜೃಂಭಿಸುತ್ತಾ ಹೋರಾಟ ವ್ಯಕ್ತಿಯು ಇಂತ ಹುಸಿಶೂರ”
ಎರಡನೆಯ ವಾಕ್ಯಕ್ಕೆ ಬಂದರೆ ಹುಸಿ ಗೆಲುವಿನಿಂದ ವಿಜೃಂಭಿಸುವ ಕಲಿತನದ ಇನ್ನೊಂದು ಚಿತ್ರವಿದೆ.ಇಲ್ಲಿ ತಾನು ಗೆದ್ದೆನೆಂದು ಭಾವಿಸಿರುವ ವೈರಿ ಗಜ ನಿಜವಾದದಲ್ಲ. ಚಂದ್ರಕಾಂತ ಶಿಲೆಯಲ್ಲಿ ಪ್ರತಿಬಿಂಬಿತವಾದುದು ಇಂಥದನ್ನು ಕೊಂದೆನೆಂದು ವಿಜ್ರಂಭಿಸುವುದು ವ್ಯರ್ಥ ಹೋರಾಟ.ಅಂದರೆ ಮಾಯೆ ಎಂಬ ವೈರಿಯನ್ನು ಜಯಿಸುವೆ ಎಂಬ ಪ್ರಯತ್ನ” ಹುಸಿ ಹೋರಾಟ”.
ಇಂಥ ಹುಸಿ ಶೌರ್ಯ ಹುಸಿ ಗೆಲುವುಗಳಿಗೆ ತಾನು ಇನ್ನೂ ನೆಲೆಯಾಗಿರುವ ಕಾರಣ ಕೂಡಲಸಂಗಯ್ಯನ ನಿರಾಕಾರ -ಸಾಕಾರತ್ವವು “ಆವಿಗೆಯಲೊದಗಿದಪುತ್ತಳಿಯ ರೂಹಿನಂತೆ” ಕಣ್ಣಿಗೆ ಕಂಡರೂ ಕೈಗೆ ನಿಲುಕದಂತಾಗಿದೆ. ಇಲ್ಲಿ ದೇವನ ನಿರಾಕಾರ-ಸಾಕಾರತ್ವವನ್ನು ಸೂಚಿಸುವ’ ಹೆಸರಿಲ್ಲದ ಹೆಸರು’ ಎಂಬುದು ಬಸವಣ್ಣನವರ ಒಂದು ಅಪೂರ್ವ ಶಬ್ದ ಸೃಷ್ಟಿಯೇ ಸರಿ.
ಇಲ್ಲಿಯ ಇನ್ನೊಂದು ಪ್ರತಿಮೆ “ಆವಿಗೆಯ ಲೊದಗಿದ ಪುತ್ತಳಿಯ ರೂಹು” _ಎಂಬಲ್ಲಿ-
ದೇವರು ದೇವಾಲಯದಲ್ಲಿ ಇಲ್ಲ. ದೇಹ ದೇವಾಲಯದಲ್ಲಿ ಇದ್ದಾನೆ. ಆದರೆ ದೈವಿ ಹಂಬಲದ ಕಿಚ್ಚು ತೀವ್ರವಾಗಿರುವ ಸಂಸಾರ ಹೇಯ ಸ್ಥಲ ದ ಈ ವಚನದಲ್ಲಿ ಬಳಸಿದ’ ದೇಹ ಆವಿಗೆಯ’ ರೂಪಕವು ಭಕ್ತ ಮನಸ್ಸಿನ ಕಳವಳ, ಆತಂಕ, ಕಿಚ್ಚು ಗಳನ್ನು ಹಾಗೂ ಈ ಕಿಚ್ಚಿನಿಂದ ಕಾಳಿಕೆಯೆಲ್ಲ ಸುಟ್ಟು ಹೋಗಿ ಒಳಗೆ ದೈವತ್ವ ಪಡೆಯುತ್ತಿರುವ ಚಿತ್ರವನ್ನು ಕಣ್ಣಿಗೆ ಹಿಡಿಯುತ್ತದೆ. ಹೀಗೆ ದೇವರ ಹೆಸರು( ನಾಮ) ಸ್ಪಷ್ಟವಾಗಿ ರೂಹು( ರೂಪು) ಲಭ್ಯವಾಗಿರುವ ಕಾರಣ ಭಕ್ತನು ಸಂಸಾರ ಬಂಧನ, ದೈವಿ ಆಕರ್ಷಣೆಗಳ ಮಧ್ಯೆ ತೊಳಲಾಡುತ್ತಿದ್ದು ತನ್ನ ಪ್ರಯತ್ನವೆಲ್ಲ’ಕೊಡೆ ಕೋಟಿ ಶೂರರು ಹನ್ನಿಬ್ಬರು’ಎಂಬಂತೆ ಚಂದ್ರಕಾಂತ ಗಿರಿ ಗಜವನ್ನು ಗೆದ್ದೆನೆಂಬಂತೆ ವ್ಯರ್ಥವಾಗುತ್ತಲಿದೆ ಎಂದು ಕೂಡಲಸಂಗಯ್ಯನಲ್ಲಿ ಮೊರೆ ಇಡುತ್ತಲಿದ್ದಾರೆ.
ಬಸವಣ್ಣನವರ ಈ ಮೇಲಿನ ವಚನ ಜಿಜ್ಞಾಸುಗಳಿಗೆ ಸಾಕಷ್ಟು ಗ್ರಾಸವನ್ನು ಒದಗಿಸಬಹುದು. ವಚನ ಸಾಹಿತ್ಯದಲ್ಲಿ ತುಂಬಾ ಪ್ರಚಲಿತವಾಗಿರುವ ಬಸವಣ್ಣನವರ ಕೆಲವು ವಚನಗಳನ್ನು ನೋಡಿದವರು,ವಚನಗಳೆಲ್ಲ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಷ್ಟು ಸರಳವಾಗಿವೆ ಎನ್ನಬಹುದು. ಆದರೆ ಸಮಗ್ರ ಅಧ್ಯಯನ ಮಾಡುವಾಗ ಅವರ ಎಲ್ಲ ವಚನಗಳು ಮೇಲೆ ಕಾಣುವಷ್ಟು ಸರಳವಲ್ಲ. ಗಂಭೀರವಾಗಿ ಅಧ್ಯಯನ ಮಾಡಿದಷ್ಟು ,ಪರಿಭಾವಿಸಿದಷ್ಟು ಅವುಗಳ ಅರ್ಥ ಅಂತರಾರ್ಥ ಹೆಚ್ಚು ಹೆಚ್ಚಾಗಿ ತಿಳಿಯುತ್ತ ಹೋಗುವುದು ಅನುಭವಕ್ಕೆ ಬರುತ್ತದೆ.ಸಾಮಾನ್ಯ ಅರ್ಥದ ಸೊಗಸನ್ನು ಮೀರಿದ ಅರಿವು ಧ್ವನಿತವಾಗುತ್ತದೆ. ಅಧ್ಯಯನ ಚರ್ಚೆ ಚಿಂತನೆಗಳ ಸಹಾಯದಿಂದ ವಚನಗಳ ಅರ್ಥದ ಆಳಕ್ಕಿಳಿದು ಅಮೂಲ್ಯವಾದ ವಿಚಾರ ರತ್ನಗಳನ್ನು ತೆಗೆಯಬಹುದು. ಈ ವಚನವನ್ನು ಅರ್ಥೈಸುವ ಪ್ರಕ್ರಿಯೆಯಲ್ಲಿ ಇದೆ ಅಂತಿಮವಲ್ಲ.

