ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಉಪನ್ಯಾಸಕರು, ಬೆಳಗಾವಿ, ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಇತ್ತೀಚಿನ ನಮ್ಮ ಧಾವಂತದ ಬದುಕು ಸೂತ್ರ ಹರಿದ ಪಟದಂತೆ ಎತ್ತೆತ್ತಲೋ ಸಾಗುತ್ತಿದೆ. ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಬದುಕು ಹಸನಾಗಬೇಕಾದರೆ ನಿರ್ಧಿಷ್ಟ ಗುರಿಯೊಂದು ಇರಲೇಬೇಕು. ಆ ಗುರಿ ಸಾಧಿಸಲು ನಿಶ್ಚಿತ ಯೋಜನೆಗಳು ಬೇಕು.. ಬಲವಾದ ಯೋಜನೆಗಳನ್ನು ಹಾಕಿಕೊಂಡು ಮನೋಬಲವೇ ಇಲ್ಲದಿದ್ದರೆ ಗುರಿಯ ಶಿಖರ ಹತ್ತುವುದು ಅಸಾಧ್ಯದ ಮಾತೇ ಸರಿ. ‘ಧೈರ್ಯವಾಗಿ ನೀನು ಒಂದು ಹೆಜ್ಜೆ ಇಟ್ಟರೆ ಯಶಸ್ಸು ಹತ್ತು ಹೆಜ್ಜೆ ಮುಂದೆ ಹಾಕುತ್ತದೆ.’ ಎಂಬುದು ಕವಿ ರವೀಂದ್ರನಾಥ ಟ್ಯಾಗೋರ್‌ರ ಅನುಭವದ ಮಾತು. ಇದನ್ನೇ ಸಂಸ್ಕೃತದಲ್ಲಿ “ಧೈರ್ಯಂ ಸರ್ವತ್ರ ಸಾಧನಂ” ಎಂದು ಹೇಳಿದ್ದಾರೆ. ದಿನವೂ ನಿರೀಕ್ಷಿತ ಗುರಿಯ ಎದೆಯ ಕದವ ತಟ್ಟಲೇಬೇಕು. ಬದಲಾದ ಕಾಲದಲ್ಲಿ ಗುರಿಯೊಂದಿಗೆ ಬೆಸೆಯಲು ಮಹತ್ವದ ಹೊಸ ಸೃಜನಶೀಲತೆಯ ಹೆಜ್ಜೆ ಹಾಕಲು ಆಗುತ್ತಿಲ್ಲ ಎಂದು ಎಷ್ಟೋ ಸಲ ಬೇಸರಿಸಿಕೊಳ್ಳುತ್ತೇವೆ. ಗುರಿ ಎನ್ನುವುದು ದೂರದಲ್ಲಿ ಮಿನುಗುವ ತಾರೆಯಂತೆ ಅದರತ್ತ ಚಿತ್ತಗೊಟ್ಟು ದೃಷ್ಟಿ ಹರಿಸಬೇಕು. ಮನೋಸ್ಥೈರ್ಯದ ಬೆಳಕು ಹೆಚ್ಚಾದಾಗ ಅಸ್ಪಷ್ಟವಾಗಿದ್ದ ದಾರಿ ನಿಖರವಾಗತೊಡುಗುತ್ತದೆ.
ರಾತ್ರೋರಾತ್ರಿ ಗುರಿ ತಲುಪಲು ಸಾಧ್ಯವಿಲ್ಲ. ಕಾಲಾವಕಾಶ ಬೇಕು. ಕಾಲಾನಂತರದ ಮನೋಸ್ಥೈರ್ಯದ ಕಾಣ್ಕೆಯಿಂದ ಗುರಿಯನ್ನು ಧ್ಯಾನಿಸಿದರೆ ಕಷ್ಟು ಪಟ್ಟು ಪ್ರಯತ್ನಿಸಿದರೆ ಸೋಲಿಗೆ ದಾರಿ ಇಲ್ಲದಂತಾಗುತ್ತದೆ. ದಿಕ್ಸೂಚಿಯಲ್ಲಿ ಮುಳ್ಳು ಸದಾ ಕಾಲ ಉತ್ತರ ದಿಕ್ಕು ತೋರಿಸುವಂತೆ ಮನಸ್ಸು ಸದಾ ಯಶಸ್ಸಿನ ಗುರಿಯತ್ತ ಚಲಿಸುತ್ತಿರಬೇಕು. ಕಠಿಣವೆನಿಸಿದ್ದನ್ನು ಸಲುಭಗೊಳಿಸುವ ಒಂದೇ ಒಂದು ಮಾರ್ಗೋಪಾಯವೆಂದರೆ ಮನೋಸ್ಥೈರ್ಯ. ‘ಅದು ನನ್ನಿಂದ ಸಾಧ್ಯವಿಲ್ಲ.’ ನಾನು ಮಾಡಲಾರೆ.’ ಎಂದು ಹಿಂಜರಿಯುವ ಮನಸ್ಸಿಗೆ ಅಚಲವಾದ ಶಕ್ತಿಯನ್ನೀಯುವುದೇ ಮನೋಸ್ಥೈರ್ಯ..ಗೆಲವು ಹಲವರ ಪಾಲಾಗಿದೆ. ವಿಜಯದ ಮಾಲೆ ಅವರ ಕೊರಳನ್ನಲಂಕರಿಸುತ್ತದೆ ಎಂದು ನಾವು ಎಷ್ಟೋ ಬಾರಿ ಕರಬುವುದುಂಟು. ಇಂಥ ಸಮಯದಲ್ಲಿ ಮನಸ್ಸನ್ನು ಕದಲದಂತೆ ಕಟ್ಟಿ ಹಾಕಿ ಮನೋಸ್ಥೈರ್ಯದತ್ತ ಹೆಜ್ಜೆ ಹಾಕಿದರೆ ಗೆಲುವು ನಮ್ಮನ್ನು ಹಿಂಬಾಲಿಸುತ್ತದೆ.
‘ಹಾರಲು ಬಯಸುವ ವ್ಯಕ್ತಿ ಮೊದಲು ನಿಲ್ಲಲು ನಡೆಯಲು ಹಾಗು ಓಡಲು ಕಲಿಯಬೇಕು.’ ಎನ್ನುವ ಫ್ರೆಡಿಕ್ ನೀತ್ಸೆ ಮಾತು ಜಯ ಒಂದೇ ಹಂತದಲ್ಲಿ ಲಭಿಸುವಂಥದ್ದಲ್ಲ ಎಂಬ ಸಂದೇಶವನ್ನು ಸಾರುತ್ತದೆ. ಯಶಸ್ಸಿನತ್ತ ಪಯಣ ಬೆಳೆಸಿದಾಗ ದುರ್ಭರ ಪರಿಸ್ಥಿತಿಯಲ್ಲಿ ಕ್ಷುಲ್ಲಕ ಮನಸ್ಸು ಹಲವು ನೆಪಗಳನ್ನು ಹುಡುಕಿ ಹೇಳುತ್ತದೆ. ಈ ಬಗ್ಗೆ ಕೊಂಚ ಯೋಚಿಸಿದರೂ ಸಾಕು, ಆತ್ಮವಿಮರ್ಶೆ ಮಾಡಿಕೊಂಡರೂ ಸಾಕು, ನಮ್ಮ ಮನಸ್ಸು ಬೇರೆಯವರ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ಮನೋಬಲದತ್ತ ಹೊರಳುತ್ತದೆ. ಮುಕ್ತ ಮನಸ್ಸನ್ನು ಹೇಗೆ ಬೇಕಾದರೂ ಬಾಗಿಸಬಹುದು ಎನ್ನುತ್ತಾರೆ ಬಲ್ಲವರು. ಎಲ್ಲವನ್ನೂ ಪರಾಮರ್ಶಿಸಿ ಸ್ವೀಕರಿಸುವ ಇಲ್ಲವೇ ನಿರಾಕರಿಸುವ ಗುಣ ಮುಕ್ತ ಮನಸ್ಸಿಗಿರುತ್ತದೆ. ಇಂಥ ಮನಸ್ಸು ಧೈರ್ಯವನ್ನು ತುಂಬಬಲ್ಲದು.
ಮನೋಸ್ಥೈರ್ಯವಿಲ್ಲದವರು ಜೀವನದಲ್ಲಿ ತಾವೂ ಮುಂದೆ ಬರುವುದಿಲ್ಲ, ಇತರರನ್ನೂ ಮುಂದಕ್ಕೆ ಬರಲು ಬಿಡುವುದಿಲ್ಲ. ಭಯ ಮನಸ್ಸಿನ ಆಶಕ್ತ ಭಾವ. ಇದು ಸಮಾಜದಲ್ಲೆಡೆ ಹರಡಿರುವ ಪಿಡುಗು. ಈ ಮಾನಸಿಕ ಭಯ ಬದುಕನ್ನೇ ಸರ್ವನಾಶಗೊಳಿಸಬಲ್ಲದು. ಮನೋಸ್ಥೈರ್ಯ ಪ್ರಗತಿ, ಮನಃಶಾಂತಿ, ಆನಂದ ಆರೋಗ್ಯವನ್ನು ಸ್ವಾಗತಿಸುತ್ತದೆ. ಸಾಧಿಸಬೇಕೆಂದಿದ್ದಿರಾ? ಹಾಗಾದರೆ ಮನೋಸ್ಥೈರ್ಯದಿಂದ ಮುಂದುವರೆಯಿರಿ.