-ಅಲಿ ಮಕಾನದಾರ
ಆಲಮಟ್ಟಿ: ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಭಾನುವಾರ ಆಲಮಟ್ಟಿಯ ರಾಕ್, ಕೃಷ್ಣಾ ಸೇರಿದಂತೆ ಎಲ್ಲಾ ಉದ್ಯಾನಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ರಂಜಾನ್ ಹಬ್ಬದ ಮರುದಿನವಾದ್ದರಿಂದ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿ ಉದ್ಯಾನ ವೀಕ್ಷಿಸಿ ಖುಷಿ ಪಟ್ಟರು.
ಪ್ರತಿ ವರ್ಷವೂ ರಂಜಾನ್ ಹಬ್ಬದ ಮರುದಿನ ಮತ್ತು ಸಂಕ್ರಾಂತಿಗೆ ಇಲ್ಲಿನ ವಿವಿಧ ಉದ್ಯಾನಗಳಿಗೆ ಸಹಸ್ರಾರು ಪ್ರವಾಸಿಗರು ಭೇಟಿ ನೀಡುವುದು ಸಾಮಾನ್ಯ. ಭಾನುವಾರ ಎಲ್ಲಿ ನೋಡಿದರೂ ಜನವೋ ಜನ, ಬೆಳಗ್ಗೆಯಿಂದಲೇ ಪ್ರಾರಂಭವಾದ ಈ ಬೀಡು ಸಂಜೆಯವರೆಗೂ ಮುಂದುವರಿದಿತ್ತು. ಪ್ರವಾಸಿಗರು ಬೆಳಗ್ಗೆಯಿಂದ ಆಲಮಟ್ಟಿಯ ರಾಕ್ ಉದ್ಯಾನದಲ್ಲಿ ಸುತ್ತಾಡಿ, ನಲಿದಾಡಿ, ನಂತರ ತಾವು ತಂದಿದ್ದ ಬುತ್ತಿ ಬಿಚ್ಚಿ ಊಟ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ಮುಸ್ಲಿಂ ಪ್ರವಾಸಿಗರೇ ಅಧಿಕ ಸಂಖ್ಯೆಯಲ್ಲಿದ್ದರು.
ಟಿಕೆಟ್ ಪಡೆಯಲು ಸರದಿ ಸಾಲು ಹೆಚ್ಚಾಗಿತ್ತು.
ಹೆಚ್ಚುವರಿ ಪೊಲೀಸ್ :
ಹೆಚ್ಚು ಪ್ರವಾಸಿಗರು
ಆಗಮಿಸುವುದನ್ನು ಮೊದಲೇ ಅರಿತಿದ್ದ ನಿಡಗುಂದಿ, ಆಲಮಟ್ಟಿ ಹಾಗೂ ಡಿಆರ್ ಪೊಲೀಸರು ಜಂಟಿಯಾಗಿ ಭದ್ರತೆ ಒದಗಿಸಿದ್ದರು. ಕೆಎಸ್ ಐಎಸ್ ಎಫ್ ನ ಸಹಾಯಕ ಕಮಾಂಡರ್ ಅರುಣ ಡಿವಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಹೆಚ್ಚಿತ್ತು.

ಚಕ್ಕಲಿ ಮಾರುವವರು, ಅರ್ಜಂಟಾಗಿ ಫೋಟೋ ತೆಗೆಯುವವರು, ವಿವಿಧ ಉದ್ಯಾನದ ಚಿತ್ರ ಮಾರುವವರು, ಐಸ್ಕ್ರಿಂ ವ್ಯಾಪಾರ ಭರ್ಜರಿಯಾಯಿತು.
ಪಾರ್ಕಿಂಗ್:
ಆಲಮಟ್ಟಿ ಪೆಟ್ರೋಲ್ ಪಂಪ್ ನಿಂದ ಆಲಮಟ್ಟಿ ಸರ್ಕಲ್ ವರೆಗೂ ರಸ್ತೆಯ ಎರಡೂ ಬದಿ ಸಾಲಾಗಿ ವಾಹನಗಳು ನಿಂತಿದ್ದವು. ಪಾರ್ಕಿಂಗ್ ಲಾಟ್ ಸಂಪೂರ್ಣ ಭರ್ತಿಯಾಗಿ ರಸ್ತೆಯ ಎರಡು ಕಡೆ ನಿಲ್ಲುವುದು ಅನಿವಾರ್ಯವಾಗಿತ್ತು.