ಬಿಮಾ ಯೋಜನೆಗಳ ಕುರಿತ ಪ್ರಗತಿ ಪರಿಶೀಲನೆ ಹಾಗೂ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಬಿಮಾ ಸುರಕ್ಷಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಸಿ ನಿಗದಿತ ಗುರಿ ಸಾಧಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪ್ರಧಾನಮಂತ್ರಿ ಸುರಕ್ಷಾ, ಪ್ರಧಾನಮಂತ್ರಿ ಜೀವನಜ್ಯೊತಿ ಸೇರಿದಂತೆ ವಿವಿಧ ಬಿಮಾ ಯೋಜನೆಗಳ ಕುರಿತ ಪ್ರಗತಿ ಪರಿಶೀಲನೆ ಹಾಗೂ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೇಂದ್ರ ಸರ್ಕಾರದ ಬಿಮಾ ಯೋಜನೆಗಳು ಯಾವುದೇ ನಿಗದಿತ ವರ್ಗಗಳಿಗೆ ಮೀಸಲಾಗದೇ, ಸರ್ಕಾರಿ ನೌಕರರು ಸೇರಿದಂತೆ ಎಲ್ಲ ವರ್ಗದ ಜನರನ್ನು ಈ ಯೋಜನೆಯಡಿ ನೊಂದಣಿಗೆ ಅವಕಾಶವಿದ್ದು, ಜಿಲ್ಲೆಗೆ ಬಿಮಾ ಯೋಜನೆಯಡಿ ೧೦.೨೫ ಲಕ್ಷ ಗುರಿ ಎದುರು, ೨.೭೫ ಲಕ್ಷ ನೊಂದಣಿ ಮಾಡಿಸಲಾಗಿದೆ. ಎಲ್ಲ ಇಲಾಖೆ ಜಿಲ್ಲಾ ಮಟ್ಟದ, ತಾಲೂಕಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳ ನೊಂದಣಿ ಮಾಡಿಸಿ ನಿಗದಿತ ಗುರಿ ಸಾಧಿಸುವಂತೆ ಅವರು ಸೂಚನೆ ನೀಡಿದರು.
ವಿವಿಧ ಇಲಾಖೆಗಳಡಿ ಹಲವು ಸೌಲಭ್ಯಕ್ಕಾಗಿ ಬರುವ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಬಿಮಾ ಸುರಕ್ಷಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆ ಕುರಿತು ಮಾಹಿತಿ ಒದಗಿಸಿ, ಈ ಯೋಜನೆಯಡಿ ನೊಂದಾಯಿಸಲು ಕ್ರಮ ವಹಿಸಬೇಕು. ವಿವಿಧ ಇಲಾಖೆ ಅಧಿಕಾರಿಗಳು, ತಮ್ಮ ಹಂತದ ಸಿಬ್ಬಂದಿ, ಡಿ-ಗ್ರೂಪ್ ನೌಕರರು, ಹೊರಗುತ್ತಿಗೆ ನೌಕರರು, ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಸಿ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಬಿಮಾ ಯೋಜನೆಗಳ ಕುರಿತು ಸಾರ್ವಜನಿಕರಲ್ಲೂ ವ್ಯಾಪಕವಾಗಿ ತಿಳುವಳಿಕ ಮೂಡಿಸಬೇಕು. ವಿವಿಧ ಇಲಾಖೆಗಳ ಸಹಯೋಗದಲ್ಲಿ ಹೆಚ್ಚಿನ ನೊಂದಣಿ ಮಾಡಿಸಿ, ನಿಗದಿತ ಗುರಿ ಸಾಧಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ-ಸಿಬ್ಬಂದಿಗಳು, ವಿವಿಧ ಇಲಾಖೆ ಹಾಸ್ಟೇಲ್ ವಾರ್ಡನ್‌ಗಳು, ಕಂದಾಯ ಇಲಾಖೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಸಹಾಯಕರು, ಶಿಕ್ಷಣ ಇಲಾಖೆ ಶಿಕ್ಷಕರು ಸೇರಿದಂತೆ ಎಲ್ಲ ಸಿಬ್ಬಂದಿಗಳನ್ನು ಕಡ್ಡಾಯವಾಗಿ ಈ ಯೋಜನೆಯಡಿ ನೊಂದಣಿ ಮಾಡಿಸಬೇಕು. ಬಿಮಾ ಯೋಜನೆಯಡಿ ನೊಂದಣಿಗೆ ಏನಾದರೂ ಸಮಸ್ಯೆ ಬಂದಲ್ಲಿ ಅಧಿಕಾರಿಗಳು ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರ ಮೊ: ೯೪೪೯೮೬೦೭೩ ಸಂಖ್ಯೆಗೆ ಸಂಪರ್ಕಿಸುವಂತೆ ತಿಳಿಸಲಾಯಿತು.
ಆಧಾರ ಕಾರ್ಡ ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಬಿಮಾ ಯೋಜನೆಯಡಿ ನೊಂದಾಯಿಸಬಹುದಾಗಿದ್ದು, ಪ್ರಧಾನಮಂತ್ರಿ ಬಿಮಾ ಸುರಕ್ಷಾ ಯೋಜನೆಯಡಿ ೧೮ ರಿಂದ ೭೦ ವರ್ಷ ವಯೋಮಾನದವರು, ಪ್ರತಿ ವರ್ಷ ಕೇವಲ ೨೦ ರೂ. ವಿಮೆ ಮೊತ್ತ ಪಾವತಿಸಬೇಕು. ಈ ಯೋಜನೆಯಡಿ ನೊಂದಾಯಿಸಿಕೊಂಡ ಫಲಾನುಭವಿಗಳ ವಾರಸುದಾರರಿಗೆ ೪೫ ದಿನಗಳೊಳಗಾಗಿ ಅಕ್ಸಿಡೆಂಟೆಲ್ ಮರಣಕ್ಕೆ ೨ಲಕ್ಷ ರೂ. ಪರಿಹಾರ ಹಾಗೂ ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ ೧೮ ರಿಂದ ೫೦ ವರ್ಷ ವಯೋಮಾನದವರು ಪ್ರತಿವರ್ಷಕ್ಕೆ ೪೩೬ ರೂ. ವಿಮೆ ಮೊತ್ತ ಪಾವತಿಸಬೇಕು. ಈ ಯೋಜನೆಯ ಫಲಾನುಭವಿಗಳ ನಾಮನಿರ್ದೇಶಿತರಿಗೆ ಸಹ ೨ಲಕ್ಷ ರೂ. ಪರಿಹಾರ ದೊರೆಯಲಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ್ ಗೆಣ್ಣೂರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಅಧಿಕಾರಿಗಳಿಂದ ಮಾಹಿತಿ
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ೨೧೯೫ ಅಂಗನವಾಡಿ ಕಾರ್ಯಕರ್ತೆ, ೨೦೫೦ ಅಂಗನವಾಡಿ ಸಹಾಯಕಿಯರು, ೧೦೧೭೯ ಪೌರಕಾರ್ಮಿಕರು ಮತ್ತು ಗುತ್ತಿಗೆ ನೌಕರರು, ೧೭೫೦ ಆಶಾ ಕಾರ್ಯಕರ್ತೆ, ೪೫೦೦ ಮಧ್ಯಾಹ್ನದ ಬಿಸಿಯೂಟ ಸಿಬ್ಬಂದಿಗಳಿಗೆ ಬಿಮಾ ಯೋಜನೆ ನೊಂದಣಿ ಮಾಡಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

