ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ರೈತರೊಂದಿಗೆ ಚರ್ಚಿಸಲು ಜುಲೈ 15 ರಂದು ಮಟ್ಟಿಹಾಳ ಕ್ರಾಸ್‌ನಲ್ಲಿ ಸಭೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪ್ರಸಕ್ತ ಸಾಲಿನ ಮುಂಗಾರು ಮಳೆ ಸಮರ್ಪಕವಾಗಿ ಆಗದ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯಗಳು ಸ್ಥಗಿತಗೊಂಡಿದ್ದು, ಅವಳಿ ಜಿಲ್ಲೆಗಳ ಏತ ನೀರಾವರಿ ಯೋಜನೆಗಳಿಗೆ ನೀರು ಬಿಡಲು ವಿಳಂಬ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ರೈತರೊಂದಿಗೆ ಚರ್ಚಿಸಲು ಬುಧವಾರ ಜುಲೈ 15 ರಂದು ಬೆಳಗ್ಗೆ 10.30ಕ್ಕೆ ತಾಲೂಕಿನ ಮಟ್ಟಿಹಾಳ ಕ್ರಾಸ್‌ನಲ್ಲಿ ಸಭೆ ಕರೆಯಲಾಗಿದೆ. ಈ ಸಭೆಗೆ ಜಿಲ್ಲೆಯ ಎಲ್ಲಾ ರೈತ ಬಂಧುಗಳು ಆಗಮಿಸಬೇಕು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮನವಿ ಮಾಡಿದ್ದಾರೆ.
ಮಂಗಳವಾರ ಪಟ್ಟಣದ ಸ್ವಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಅವಳಿ ಜಿಲ್ಲೆಯಲ್ಲಿರುವ ಏತ ನೀರಾವರಿ ಯೋಜನೆಗಳನ್ನು ಪ್ರಾರಂಭಿಸಿ, ಅವುಗಳನ್ನು ಶಾಶ್ವತವಾಗಿ ನೀರಾವರಿ ಸಲಹಾ ಸಮಿತಿಯಿಂದ ಹೊರತೆಗೆದು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಸಕ್ತ ಮುಂಗಾರು ಮಳೆ ಸರಿಯಾಗಿ ಆಗದಿರುವುದು ಮತ್ತು ಕೃಷ್ಣಾ ನದಿಗೆ ತಡವಾಗಿ ನೀರು ಬಂದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಬೆಳೆದ ಬೆಳೆಗಳಿಗೆ ನೀರು ಇಲ್ಲದೆ ಒಣಗುವ ಭೀತಿ ಎದುರಾಗಿದ್ದು, ಕುಡಿಯುವ ನೀರಿಗೂ ತೊಂದರೆ ಉಂಟಾಗುತ್ತಿದೆ ಎಂದರು.
ಈ ಕುರಿತು ಈಗಾಗಲೇ ನೀರಾವರಿ ಸಚಿವರು ಹಾಗೂ ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಆದರೆ ಇನ್ನೂ ಸ್ಪಂದನೆ ದೊರೆತಿಲ್ಲ ಎಂದು ಅವರು ಆರೋಪಿಸಿದರು.
ಅವಳಿ ಜಿಲ್ಲೆಗಳ ಸಾರ್ವಜನಿಕರು ನೀರಾವರಿ ಯೋಜನೆಗಳಿಗೆ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾಗುತ್ತಿದ್ದು, ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜುಲೈ 14 ರೊಳಗೆ ನೀರು ಬಿಡದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು. ರೈತರೊಂದಿಗೆ ಸೇರಿ ನಾವೇ ಕಾಲುವೆಗಳಿಗೆ ನೀರು ಹರಿಸುತ್ತೇವೆ ಎಂದು ಮುನ್ನೆಚ್ಚರಿಕೆ ನೀಡಿದ್ದೇವೆ. ಆದರೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ ಎಂದು ಹೇಳಿದರು.
ಇದರಿಂದಾಗಿ ಈ ಮಹತ್ವದ ವಿಷಯದ ಕುರಿತು ಚರ್ಚಿಸಲು ಸಭೆ ಕರೆಯಲಾಗಿದ್ದು, ನೀರು ಬಿಡುವ ನಿರ್ಧಾರ ಕೈಗೊಂಡರೆ ರೈತರೊಂದಿಗೆ ಸೇರಿ ಅದನ್ನು ಸ್ವಾಗತಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಸಪ್ಪಗೌಡ ಮನಗೂಳಿ, ಚಂದ್ರು ನಟ್ಟೆಕಟ್ಟಿ, ಪರಮಾನಂದ ಬರಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಪ್ರಮುಖ ಬೇಡಿಕೆಗಳು
ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳಿಗೆ ತಕ್ಷಣ ನೀರು ಬಿಡಬೇಕು.
ಆಲಮಟ್ಟಿ ಡ್ಯಾಂ ಎಡ ಮತ್ತು ಬಲ ಭಾಗದ ಕಾಲುವೆಗಳ ಮೂಲಕ ನೀರು ಹರಿಸಬೇಕು.
ಈ ಯೋಜನೆಗಳನ್ನು ನೀರು ನಿರ್ವಹಣಾ ಸಲಹಾ ಸಮಿತಿ ವ್ಯಾಪ್ತಿಯಿಂದ ಹೊರಗಿಡಬೇಕು.
ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು.

