ಬೂದಿಹಾಳ-ಫೀರಾಪೂರ ನೀರಾವರಿ ಯೋಜನೆ ಪೂರ್ಣಗೊಳಿಸಲು ಹಾಗೂ ಬರಪೀಡಿತ ಜಿಲ್ಲೆ ಘೋಷಣೆಗೆ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ)ದ ನೇತೃತ್ವದಲ್ಲಿ ಇದೇ ದಿ. ೧೬ ರಂದು ತಾಳಿಕೋಟೆ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ) ಬಣದ ಯಾದಗಿರಿ ಜಿಲ್ಲಾ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಅವರು ಹೇಳಿದರು.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ)ದ ನೇತೃತ್ವದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ರೈತರ ಜೀವನಾಡಿಯಾಗಲಿರುವ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯು ಮುಕ್ತಾಯ ಹಂತಕ್ಕೆ ಬಂದಿದ್ದು ಸದ್ಯ ಎಫ್‌ಐಸಿ ಕಾಲುವೆ ನಿರ್ಮಾಣ ಕಾಮಗಾರಿ ಆಬೇಕಾಗಿದೆ ಈ ಯೋಜನೆ ಪೂರ್ಣಗೊಳ್ಳುವದರಿಂದ ತಾಳಿಕೊಟೆ-ದೇವರ ಹಿಪ್ಪರಗಿ ಅವಳಿ ತಾಲೂಕಿನ ೫೦ ಸಾವಿರ ಏಕರೆ ಭೂಮಿ ನೀರಾವರಿಗೆ ಒಳಪಡಲಿದೆ ಅಲ್ಲದೇ ಹುಣಸಗಿ-ಸುರಪೂರ ತಾಲೂಕಿನ ೪೩ ಸಾವಿರ ಏಕರೆ ನೀರಾವರಿಗೆ ಒಳಪಡಲಿದೆ ಈ ಯೋಜನೆ ಪೂರ್ಣಗೊಳಿಸುವ ಸಲುವಾಗಿ ಕಳೆದ ೨೦೨೫ನೇ ಸಾಲಿನಲ್ಲಿ ಎಲ್ಲ ರೈತರು, ಸಂಘಟನೆಗಳು ಒಗ್ಗೂಡಿ ಕೊಡಗಾನೂರ ಕ್ರಾಸ್‌ನಲ್ಲಿ ಬೃಹತ್ ಪ್ರಮಾಣದ ಹೋರಾಟ ಮಾಡಲಾಗಿತ್ತು ಆಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚೀವರಾಗಿದ್ದ ಎಂ.ಬಿ.ಪಾಟೀಲ ಅವರು ಸ್ಥಳಕ್ಕೆ ಬೆಟ್ಟಿ ನೀಡಿ ಅಲ್ಪದುಡ್ಡಿನಲ್ಲಿ ಕಾಮಗಾರಿ ಮುಗಿಯುತ್ತದೆ ಸೀಘ್ರವೇ ಮಾಡಿಸಿಕೊಡುತ್ತೇನೆಂದು ೩ ತಿಂಗಳು ಸಮಯ ಅವಕಾಶ ತೆಗೆದುಕೊಂಡಿದ್ದರು. ಆದರೆ ವರ್ಷ ಕಳೆಯಲು ಬಂದರೂ ಕೂಡಾ ಯೋಜನೆಯ ಕಾರ್ಯಗತದ ಬಗ್ಗೆ ಚಕಾರ ಶಬ್ದ ಎತ್ತುತ್ತಿಲ್ಲಾ ಹೀಗಾಗಿ ರೈತರ ಕಾಳಜಿ ಇಲ್ಲದ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಇದೇ ದಿ. ೧೬ ರಂದು ಬೃಹತ್ ಪ್ರಮಾಣದ ಹೋರಾಟ ತಾಳಿಕೋಟೆ ನಗರದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ೧೧ ಗಂಟೆಗೆ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಕತ್ರಿ ಭಜಾರ ಮಾರ್ಗವಾಗಿ ಶಿವಾಜಿ ಮಹಾರಾಜರ ವೃತ್ತದ ಮೂಲಕ ಬಸವೇಶ್ವರ ಸರ್ಕಲ್‌ಗೆ ಆಗಮಿಸಿ ಸುಮಾರು ೨ ಗಂಟೆಕಾಲ ರಸ್ತೆತಡೆ ನಡೆಸಲಾಗುವುದು. ಸುಮಾರು೨ ಸಾವಿರದಿಂದ ೩ ಸಾವಿರ ರೈತರು ಪಾಲ್ಗೊಳ್ಳುವ ನಿರಿಕ್ಷೆ ಇದೆ ಎಂದರು.
ರೈತ ಸಂಘದ ರಾಜ್ಯ ಸಂಚಾಲಕರಾದ ಮುತ್ತುಗೌಡ ಪರಸನಳ್ಳಿ ಮತ್ತು ಸಂಗನಗೌಡ ಹೆಗರೆಡ್ಡಿ ಮಾತನಾಡಿದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ) ಬಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಬಿ.ಪಾಟೀಲ(ಮುರಾಳ), ರಾಜ್ಯ ಕಾರ್ಯದರ್ಶಿ ಗುರುನಾಥರೆಡ್ಡಿ ಹದನೂರ, ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಮಾಲಿಪಾಟೀಲ, ಎಂ.ಎಂ.ಪಾಟೀಲ, ಮಡುಸಾಹುಕಾರ ಬಿರಾದಾರ, ರಾಜುಗೌಡ ಗುಂಡಕನಾಳ, ಪ್ರಭುಗೌಡ ನಾಡಗೌಡ, ರಾಜುಗೌಡ ಕೊಳೂರ, ಪಂಚಯ್ಯ ಹಿರೇಮಠ, ಮುತ್ತು ಜಾಹಗೀರದಾರ, ಶರಣಗೌಡ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.

