ಉದಯರಶ್ಮಿ ದಿನಪತ್ರಿಕೆ
– ಶಿವಕುಮಾರ್ ಉಪ್ಪಿನ(ಆಲಮೇಲ)
ಈ ದಂಪತಿಗೆ ಬಸವಾದಿ ಶರಣರೆಂದರೆ ಪ್ರಾಣ. ಮಂಡ್ಯದಂತಹ ಒಕ್ಕಲಿಗರ ಬಿರು ನೆಲದಲ್ಲಿ ಬಸಣ್ಣನವರು ಬೆಳಗಿದ ಜ್ಯೋತಿಯನ್ನು ಹಚ್ಚಿ ಅದು ಆರದಂತೆ ತಮ್ಮ ಕೈಗಳನ್ನು ಗಟ್ಟಿಯಾಗಿ ಅಡ್ಡ ಹಿಡಿದ ಅಪರೂಪದ ಜೋಡಿ ಎಂ. ಶಿವಕುಮಾರ್ ಹಾಗೂ ಅಪರ್ಣಾ ಅವರು.
ಶಿವಕುಮಾರ್ ಮೂಲತಃ ಪತ್ರಕರ್ತರು. ಕಳೆದ ಎರಡು ದಶಕಗಳಿಂದ ವೃತ್ತಿ ಪತ್ರಿಕೋದ್ಯಮದಲ್ಲಿದ್ದು, ಒಂದೂವರೆ ದಶಕಗಳ ಹಿಂದೆ ಕಾಯಕಯೋಗಿ ಪ್ರಾತಿಷ್ಠಾನವನ್ನು ಆರಂಭಿಸಿ ಅನೇಕ ಸಮಾಜಮುಖಿ ಕೆಲಸಗಳಿಂದ ಪರಿಚಿತರಾಗಿದ್ದಾರೆ. ಮಂಡ್ಯ ನಗರದ ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕವೇ ಒಂದು ದೊಡ್ಡ ಉದ್ಯಾನವನ್ನು ನಗರಸಭೆಯಿಂದ ದತ್ತು ಪಡೆದು ಅದಕ್ಕೆ ತುಮಕೂರಿನ ಜ್ಞಾನ ದಾಸೋಹಿ, ಶಾತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಯ ಹೆಸರನ್ನಿಟ್ಟು, ಅಚ್ಚಕುಟ್ಟಾಗಿ ನಿರ್ವಹಿಸುತ್ತಿದ್ದಾರೆ. ಹಿರಿಯ ಶ್ರೀಗಳಿದ್ದಾಗಿನಿಂದ ತುಮಕೂರು ಮಠಕ್ಕೆ ನೆಚ್ಚಿನ ಶಿಷ್ಯರಾಗಿದ್ದಾರೆ. ಹಾಗೆಯೇ ಎಲ್ಲೆಡೆ ಗಿಡಗಳನ್ನು ಸಹ ಹಚ್ಚಿ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ. ಇಂತಹ ಕೆಲಸಗಳ ಜೊತೆ ಬಸವಾದಿ ಶರಣರ ವಿಚಾರಗಳನ್ನು ಮಂಡ್ಯದ ಪರಿಸರದಲ್ಲಿ ತಮ್ಮ ಧರ್ಮಪತ್ನಿ ಅಪರ್ಣಾ ಅವರ ಜೊತೆ ಬಿತ್ತುತ್ತಿದ್ದಾರೆ.

ಸತಿಪತಿಗಳೊಂದಾದ ಭಕ್ತಿ..
ಅಪರ್ಣಾ ಎಸ್. ಕುಮಾರ್ ಅವರು ಇವರಿಗಿಂತ ಒಂದು ಕೈ ಹೆಚ್ಚೇ ಎನ್ನುವಂತೆ ಇದ್ದಾರೆ. ಶ್ರದ್ಧೆ, ಶ್ರಮದಿಂದ ಶರಣರ ನೆನಪಿನ ಕಾರ್ಯಕ್ರಮಗಳ ಸಂಘಟನೆಯಲ್ಲಿ ತೊಡಗಿದ್ದಾರೆ. ಬಸವ ಪಂಚಮಿ ರೂಪಿಸಿ ಹಾಲು ಹಾಳು ಮಾಡದಿರಲು ಜಾಗೃತಿ ಮೂಡಿಸುತ್ತ ಅನಾಥ ಮಕ್ಕಳಿಗೆ ಹಾಲು, ಹಣ್ಣು, ಆಹಾರ ನೀಡುತ್ತ ಬಂದಿದ್ದಾರೆ. ಕಾಲಕಾಲಕ್ಕೆ ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಲಿಂಗಾಯತ ಧರ್ಮದ ಹೋರಾಟವನ್ನೂ ಇವರು ಇಲ್ಲಿ ಚಾಲ್ತಿಯಲ್ಲಿ ಇಟ್ಟಿದ್ದಾರೆ. ಮಾತೆ ಮಹಾದೇವಿ ಅವರೊಂದಿಗೆ ಇವರ ಕುಟುಂಬ ಮೊದಲಿಂದ ಸಂಪರ್ಕ ಹೊಂದಿತ್ತು. ಇಲ್ಲಿ ಲಿಂಗಾಯತರ ಪ್ರಾಬಲ್ಯವಿಲ್ಲದಿದ್ದರೂ ತಮ್ಮ ಚಟುವಟಿಕೆಗಳಿಂದ ಇವರು ಆ ಕೊರತೆಯನ್ನು ನೀಗಿಸುತ್ತಿದ್ದಾರೆ. ಧರ್ಮದ ಆಶಯಗಳನ್ನು ಸ್ಥಳೀಯ ಲಿಂಗಾಯತರಿಗೆ ಮುಟ್ಟಿಸಲು ಶ್ರಮಿಸಿದ್ದಾರೆ. ಬಸವಾದಿ ಶರಣರ ಜಯಂತಿಗಳನ್ನು ಆಯೋಜಿಸಿ, ಆ ನೆವದಲ್ಲಿ ಅವರ ಧ್ಯೇಯಗಳನ್ನು ತಲುಪಿಸುತ್ತಿದ್ದಾರೆ.
ಸಂಘಗಳಿಗೆ ಶರಣೆಯರ ಹೆಸರು
ಅಪರ್ಣಾ ಅವರು ಇಪ್ಪತ್ತಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ಕಟ್ಟಿ ಅವಗಳಿಗೆಲ್ಲ ಒಂದೊಂದು ಶರಣೆಯರ ಹೆಸರುಗಳನ್ನು ಇಟ್ಟಿದ್ದಾರೆ. ಆ ಮೂಲಕ ಸಂಘದ ಸದಸ್ಯೆಯರಿಗೆ ಆರ್ಥಿಕ ಸ್ವಾವಲಂಬನೆಯ ಜೊತೆ ಜೊತೆಗೆ ಶರಣೆಯರ ಪರಿಚಯ ಮಾಡಿ, ಅವರ ಪ್ರೇರಣೆಗೆ ಕಾರಣರಾಗಿದ್ದಾರೆ. ಶಕ್ತಿ ಇಲ್ಲದವರಿಗೆ ಸಂಘದಿಂದ ಹಣ ಸಹಾಯ ಮಾಡಿ ಅವರಿಗೆ ಧೈರ್ಯ ತುಂಬಿದ್ದಾರೆ. ತಾವು ತಾವೇ ಸ್ವಸಹಾಯ ಸಂಘಗಳನ್ನು ಶುರು ಮಾಡಿಕೊಳ್ಳಲು ಪ್ರೇರಕರಾಗಿದ್ದಾರೆ. ಬಳಲಿದ, ನಿರ್ಗತಿಕ ಜನರನ್ನು ಗುರುತಿಸಿ ಅವರಿಗೆ ಸಹಾಯ ಮಾಡಿದ್ದಾರೆ. ಅಪರ್ಣಾರ ತಾಯಿ ಜಗದಂಬಾ, ತಂದೆ ಪ್ರಕಾಶ್ ಅವರು ಕೂಡ ಹೊನ್ನಲಗೆರೆ ಎನ್ನುವ ಗ್ರಾಮದಲ್ಲಿ ತತ್ತ್ವ ಪರಿಪಾಲಕರಾಗಿ ಅಲ್ಲಿನ ಜನರನ್ನು ಹಚ್ಚಿಕೊಂಡಿದ್ದಾರೆ.
ಚನ್ನಬಸವಾನಂದ ಶ್ರೀಗಳೊಟ್ಟಿಗೆ ಶಿವಕುಮಾರ್ ದಂಪತಿ ಸೇರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕನಕಪುರದ ಹತ್ತಿರ ದಾಳಿಂಬದಲ್ಲಿ ಶ್ರೀಗಳು ಹಲವರ ಸಹಾಯದಿಂದ ‘ಬಸವ ಭವನ’ ನಿರ್ಮಿಸಿದ್ದಾರೆ. ಅಪರ್ಣಾ ಶಿವಕುಮಾರ್ ಬಸವ ದಳದ ಮಂಡ್ಯ ಜಿಲ್ಲಾಧ್ಯಕ್ಷೆಯಾಗಿದ್ದು, ಮಂಡ್ಯದಲ್ಲೂ ಜಾಗ ಗುರುತಿಸಿ ‘ಬಸವ ಭವನ’ ಸಾಕಾರಗೊಳಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ‘ಶರಣರ ಬರುವೆಮಗೆ ಪ್ರಾಣ ಜೀವಾಳ..’ ಎನ್ನುವಂತೆ ತಮ್ಮ ಮನೆಗೆ ಬರುವವರಿಗೆ ದಾಸೋಹ ನೀಡುತ್ತ ಬಸವಣ್ಣನವರ ಆಶಯ ಈಡೇರಿಸಿದ್ದು, ಅದರಲ್ಲೂ ದೂರದ ಉತ್ತರ ಕರ್ನಾಟಕದಿಂದ ಬರುವವರಿಗೆ ಆತಿಥ್ಯ ನೀಡಿ ಅಚ್ಚುಮೆಚ್ಚಿನವರಾಗಿದ್ದಾರೆ.
ಬಸವೇಶ್ವರರ ವೃತ್ತ, ಪತ್ರಿಕೆ
ಶಿವಕುಮಾರ್ ಅವರು ತಾವಿರುವ ಪ್ರದೇಶಕ್ಕೆ ಹತ್ತಿರದ ವೃತ್ತ ಹಾಗೂ ರಸ್ತೆಗೆ ದಶಕದ ಹಿಂದೆಯೇ ನಗರಸಭೆಯಲ್ಲಿ ಒತ್ತಡ ತಂದು ಬಸವೇಶ್ವರರ ಹೆಸರಿಡಿಸಿದ್ದಾರೆ. ತಮ್ಮ ಕಾಯಕಯೋಗಿ ಸಂಘದಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿದ್ದಾರೆ. ಬಸವಪರ ಚಿಂತನೆಗಾಗಿಯೇ ‘ಕಾಯಕಯೋಗಿ’ ಎನ್ನುವ ದಿನಪತ್ರಿಕೆ ಕೂಡ ತರುತ್ತಿದ್ದಾರೆ. ಇದು ಈಗ ಪ್ರಾದೇಶಿಕದಿಂದ ರಾಜ್ಯಮಟ್ಟದ ಪತ್ರಿಕೆಯಾಗಿ ಬೆಳೆಯುತ್ತಿದೆ. ಅಪರ್ಣಾ ಅವರು ‘ನುಡಿದರೆ ಮುತ್ತಿನ ಹಾರದಂತಿರಬೇಕು..’ ಎನ್ನುವ ನಡೆ-ನುಡಿಯ ಗುಣದ, ಸರಳ ಜೀವಿ. ಮಂಡ್ಯ ಭಾಗದಲ್ಲಿ ಬಸವ ತತ್ತ್ವದವರು ಕಮ್ಮಿ ಎನ್ನುವ ಮಾತಿಗೆ ಇವರು ಅಪವಾದ. ಎಷ್ಟೇ ಕಷ್ಟವಾದರೂ ಯಾರಿಂದಲೂ ಸಹಾಯ ಕೇಳದೇ ತಮ್ಮ ಸ್ವಂತ ಹಣದಲ್ಲೇ ಇವರು ಎಲ್ಲವನ್ನು ನಿಭಾಯಿಸುತ್ತಿರುವುದು ಹೆಮ್ಮೆಯ ಸಂಗತಿ. ಮೈಸೂರು ಭಾಗದಲ್ಲಿ ಇಂತಹ ಬಸವ ಪ್ರೇಮಿಗಳಿಂದ ಮತ್ತಷ್ಟು, ‘ಮೊಗೆ’ದಷ್ಟು ಕೆಲಸಗಳಾಗಲಿ.

