ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವು ರೋಗಿಗಳ ಸೇವೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ಇದನ್ನು ಬೇಗನೆ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು. ಡಯಾಲಿಸಿಸ್ ಕೇಂದ್ರವು ಬಡವರಿಗೆ ಅನುಕೂಲವಾಗಿದ್ದು, ೨೪ ಗಂಟೆಗಳ ಸೇವೆ ನೀಡಲಾಗುವುದು ಎಂದು ಶಾಸಕ ವಿಠ್ಠಲ ಕಟಕಧೊಂಡ ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫಂಗಸ್ ಚಿಕಿತ್ಸೆ ಹಾಗೂ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತ, ಪಟ್ಟಣಕ್ಕೆ ಹದಿನಾರುವರೆ ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧವು ನಿರ್ಮಾಣವಾಗುವುದು. ಈಗಾಗಲೇ ಎಂಟುವರೆ ಕೋಟಿ ಹಣ ಬಿಡುಗಡೆಯಾಗಿದ್ದು, ಬೇಗನೆ ಕಾಮಗಾರಿ ಪ್ರಾರಂಭಿಸಲಾಗುವುದು. ಪಟ್ಟಣದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಶ್ರಮಿಸುವೆನು. ವೈದ್ಯರು ರೋಗಿಗಳನ್ನು ದೇವರಂತೆ ಕಂಡು ಚಿಕಿತ್ಸೆ ನೀಡಬೇಕು ಎಂದರು.
ಚಡಚಣ ಏತ ನೀರಾವರಿ ಯೋಜನೆ ಬೇಗನೆ ಪ್ರಾರಂಭಿಸಲಾಗಿ ೪ ತಿಂಗಳಲ್ಲಿ ನೀರು ಬರುವಂತೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವೆ. ಇಲ್ಲಿ ವೈದ್ಯರ ಕೊರತೆಯಿದ್ದು ತಜ್ಞ ವೈದ್ಯರನ್ನು ನೇಮಕ ಮಾಡಲಾಗುವುದು. ಸಿಬ್ಬಂದಿಯ ಕೊರತೆಯನ್ನು ನಿವಾರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವೆನು. ಯಾವುದೇ ದೂರು ಬರದಂತೆ ಕಾರ್ಯ ನಿರ್ವಹಿಸಿರಿ ಎಂದು ಶಾಸಕ ಕಟಕಧೊಂಡ ಹೇಳಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕುಟುಂಬ ಇಲಾಖೆಯ ವೈದ್ಯಾಧಿಕಾರಿ ಡಾ|| ಸಂಪತ್ ಗುಣಾರಿ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫಂಗಸ್ ಚಿಕಿತ್ಸೆ ಹಾಗೂ ಡಯಾಲಿಸಿಸ್ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವುದು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ|| ಲಕ್ಷ್ಮಿಕಾಂತ ಮೋರೆ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತ, ವರ್ಷದ ೩೬೫ ದಿವಸಗಳ ಸೇವೆ ಮಾಡಲಾಗುವುದು. ಇದಕ್ಕೆ ರಜೆಯಿಲ್ಲ. ಎಲ್ಲರೂ ಇದರ ಪ್ರಯೋಜನ ಪಡೆದುಕೊಂಡು ಗುಣಮುಖರಾಗಿರಿ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಅಪ್ಪಾಸಾಹೇಬ ಇನಾಮದಾರ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ|| ಜಾನ್ ಕಟವಟಿ, ಇಂಡಿ ತಾಲೂಕಾ ವೈದ್ಯಾಧಿಕಾರಿ ಡಾ|| ಅರ್ಚನಾ ಕುಲಕರ್ಣಿ, ತಹಶೀಲದಾರ ಸಂಜಯ ಇಂಗಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ.ಹಕ್ಕೆ, ಕಾಂಗ್ರೆಸ್ ಮುಖಂಡ ಶಬ್ಬೀರ ನದಾಪ, ಆಸ್ಪತ್ರೆ ಸಿಬ್ಬಂದಿಗಳಾದ ಬಿ.ಎ ಮೇತ್ರಿ, ಡಾ|| ಆರ್.ಬಿ.ಲಾಳಸಂಗಿ, ಎಮ್.ಬಿ.ತೇಲಿ, ಎಮ್.ಎಲ್.ಮುಲ್ಲಾ, ಪ್ರಶಾಂತ ಸಾಳುಂಕೆ, ಪ್ರಕಾಶ ಅಂಬಿಗೇರ, ಹಿರೇಕುರುಬರ ಸೇರಿದಂತೆ ನಾಗರಿಕರು ಇದ್ದರು.

