ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರನ್ನು ನಾಮಕರಣ ಮಾಡುವುದರ ಜೊತೆಗೆ ನಡೆದಾಡುವ ದೇವರು ಸಿದ್ದೇಶ್ವರ ಅಪ್ಪನವರ ಹೆಸರನ್ನು ವಿಜಯಪುರ ರೇಲ್ವೆ ನಿಲ್ದಾಣಕ್ಕೆ ಮರು ನಾಮಕರಣ ಮಾಡಬೇಕು ಎಂದು ಜಿಲ್ಲಾ ಜೈಕರ್ನಾಟಕ ಸಂಘಟನೆ ಅಧ್ಯಕ್ಷ ಸಂಗಮೇಶ ದಾಶ್ಯಾಳಗೌಡ, ಹೋರಾಟ ಸಮಿತಿ ಅಧ್ಯಕ್ಷ ಸಿದ್ದರಾಜ ಹೊಳಿ ಆಗ್ರಹಿಸಿದರು.
ಶನಿವಾರ ನಗರದ ಖಾಸಗಿ ಹೋಟೇಲನಲ್ಲಿ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡುತ್ತ, ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಸಂಸದ ರಮೇಶ ಜಿಗಜಿಣಗಿ ಅವರು ಪ್ರಧಾನ ಮಂತ್ರಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ನಮ್ಮ ಜಿಲ್ಲೆಯ ಜನರ ಭಾವನೆಗಳೊಂದಿಗೆ ಸ್ಪಂದಿಸಬೇಕು ಎಂದರು.
ಜೊತೆಗೆ ವಿಜಯಪುರದ ಮಹಾತ್ಮಾ ಗಾಂಧಿ ವೃತ್ತವನ್ನು ನವೀಕರಣಗೊಳಿಸಿ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಲ್ಲಿ ನಗರಕ್ಕೆ ಸೌಂದರ್ಯ ಬರುವದರ ಜೊತೆಗೆ ರಾಷ್ಟ್ರಪಿತರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಹಾಗೂ ನಗರ ಕಿತ್ತೂರ ಚೆನ್ನಮ್ಮ ರಂಗಮಂದಿರವನ್ನು ಮಹಾನಗರ ಪಾಲಿಕೆ ಸುಪರ್ಧಿಗೆ ಪಡೆದು ನವೀಕರಣಗೊಳಿಸಿ ರಂಗಭೂಮಿ ಕಲಾವಿದರಿಗೆ ದಿನನಿತ್ಯ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ( ಯತ್ನಾಳ ) ರವರು ಈ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಮೀನಾ ಎಂ ,ಕುಂದನಗಾರ, ಗಾಯತ್ರಿ ರೆಡ್ಡಕರ, ಕಾರ್ಯಾಧ್ಯಕ್ಷ ಪಿಂಟು ಗೊಬ್ಬುರ, ಉಪಾಧ್ಯಕ್ಷ ರಿಯಾಜ ಪಾಂಡು, ಪ್ರಧಾನ ಕಾರ್ಯದರ್ಶಿ ಮುಕದಸ್ಸ ಇನಾಮದಾರ, ಆನಂದ ಹುನ್ನೂರ, ಮುಖಂಡ ಅಶೋಕ ಕೊಡಗ ಉಪಸ್ಥಿತಿರಿದ್ದರು.
ದಿ.ಅ.೨೧ ರಂದು ಬೆಳಿಗ್ಗೆ ೧೦:೦೦ ಗೆ ಸಿದ್ದೇಶ್ವರ ಗುಡಿಯಿಂದ ಪ್ರಾರಂಭವಾಗಿ ಗಾಂಧಿ ವೃತ್ತದಲ್ಲಿ ಬೇಡಿಕೆ ಕುರಿತು ಮಾತನಾಡಿದ ನಂತರ ಪ್ರಮುಖ ರಸ್ತೆ ಬಸವೇಶ್ವರ ವೃತ್ತ ಅಂಬೇಡ್ಕರ , ವೃತ್ತ ಮುಖಾಂತರ ಜಿಲ್ಲಾಧಿಕಾರಿಗಳ ಆವರಣದಲ್ಲಿ ಧರಣಿ ಪ್ರಾರಂಭ. ಬೆಳಿಗ್ಗೆ ೧೦:೦೦ ಗಂಟೆಯಿಂದ ಸಂಜೆ ೫:೦೦ ಗಂಟೆವರೆಗೆ ( ಸರಕಾರಿ ರಜೆ ಹೊರತುಪಡಿಸಿ).
ಬೆಂಬಲಕ್ಕೆ ಮನವಿ
ವಿಜಯಪುರ ಜಿಲ್ಲೆಯ ನಾಗರೀಕರು, ಸಂಘ , ಸಂಸ್ಥೆಯ ಪದಾಧಿಕಾರಿಗಳು , ರಾಜಕೀಯ ಮುಖಂಡರು , ಕನ್ನಡ ಪರ ಹೋರಾಟಗಾರರು , ಸಾಹಿತಿಗಳು , ಮಹಿಳಾ ಸಂಘಟನೆಯ ತಾಯಂದಿರು , ತರುಣರು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕೆಂದು ಜೈ ಕರ್ನಾಟಕ ಸಂಘಟನೆಯ ಸಂಗಮೇಶ ದಾಶ್ಯಾಳಗೌಡ ಹಾಗೂ ಸಿದ್ದರಾಜ ಹೊಳಿ ಜಂಟಿಯಾಗಿ ವಿನಂತಿಸಿದರು.

