ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಮಠ ಮಾನ್ಯಗಳು, ಪುಣ್ಯ ಕ್ಷೇತ್ರಗಳು, ಮಾನವ ಜನ್ಮದ ಭವಬಂಧನ ಕಳೆಯುವ ಆಧ್ಯಾತ್ಮಿಕ ಕೇಂದ್ರಗಳು ಎಂದು ಸಾಹಿತಿ, ಶಿಕ್ಷಕ ಶಿವರುದ್ರಪ್ಪ ಬೊಮ್ಮನಹಳ್ಳಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ಸಂಜೆ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಸತ್ಯಾಸತ್ಯತೆಯ ನಿಜ ಸ್ವರೂಪ ಅರಿತು ಬೆರೆತು ಬಾಳಲು ಕಲಿಸುವ ಸತ್ಸಂಗ, ಶಿವಾನುಭವ ಗೋಷ್ಠಿಯ ಅತ್ಯಾವಶ್ಯಕ. ನರನು ಹರನಾಗಿಸಿ, ಮಾನವ ಮಹಾದೇವನಾಗಿಸುವ ಶಕ್ತಿ ಸತ್ಸಂಗಕ್ಕಿದೆ ಎಂದವರು. ಮಾಸಿಕ ಹುಣ್ಣಿಮೆಯ ಗೋಷ್ಠಿಯಲ್ಲಿ ಜ್ಞಾನಾಮೃತ ಉಣಬಡಿಸುವ ಶ್ರೀಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಕಾರ್ಯ ಸಾರ್ಥಕ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಬಸವ ಶಿವಾಚಾರ್ಯರು ಆದಿಕವಿ ಮಹರ್ಷಿ ವಾಲ್ಮೀಕಿ ಬರೆದಿಟ್ಟ ಮಹಾಕಾವ್ಯವನ್ನು ಚೆನ್ನಾಗಿ ಅರಿತಾಗ ಬದುಕು ಸುಂದರವಾಗಿ ರೂಪುಗೊಂಡು, ಸದಾ ಪ್ರಜ್ವಲಿಸುತ್ತದೆ ಎಂದು ಆಶಿಸಿದರು.
ಶರಣಕುಮಾರ ಯಾಳಗಿ, ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂತು.
ಇದೇ ವೇಳೆ ರಾಚಯ್ಯ ಸ್ವಾಮಿ ಮುದನೂರು, ಮಹಾದೇವಪ್ಪ ವಜ್ಜಲ್, ನಿಜಗುಣ ವಿಶ್ವಕರ್ಮ, ಅವ್ವಣ್ಣ ಮಡಿವಾಳಕರ್, ಅಭಿಷೇಕ್ ಪಾಟೀಲ, ವೀರೇಶ್ ಟಕ್ಕಳಕಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅನೇಕ ಸದ್ಭಕ್ತರು, ಮಹಿಳೆಯರು ಭಾಗವಹಿಸಿದ್ದರು.
ಡಾ ಯಂಕನಗೌಡ ಎಸ್ ಪಾಟೀಲ ಮಾಲಹಳ್ಳಿ ನಿರೂಪಿಸಿ, ವಂದಿಸಿದರು.

