ಬಾಬಾನಗರ ಗ್ರಾಮದಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಮನರೇಗಾ ಯೋಜನೆಯ ಮಾಹಿತಿ, ಶಿಕ್ಷಣ & ಸಂವಹನ (ಐಇಸಿ) ಕಾರ್ಯಕ್ರಮದಡಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದ ಅಂಗವಾಗಿ ಮನೆ-ನೆಗೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರೇಣುಕಾ ಸೋಲಾಪುರ ಅವರು ಮಾತನಾಡಿದರು.
ಸರಕಾರದ ನಿರ್ದೇಶನದಂತೆ ೨೦೨೪-೨೫ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಅಕ್ಟೋಬರ್ ೦೨ ರಿಂದ ಒಂದು ತಿಂಗಳುಗಳ ಕಾಲ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದ ಭಾಗವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ನೀಡುವದರ ಜೊತೆಗೆ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.
ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ, ಈ ತಾಂತ್ರಿಕ ಯುಗದಲ್ಲಿ ಎಲ್ಲರೂ ಪತ್ರರಹಿತ ಕೆಲಸ ಮಾಡಲು ಹೆಚ್ಚು ಒಲವು ತೋರುತ್ತಾರೆ. ಅದರಂತೆ ನಮ್ಮ ಮನರೇಗಾ ಯೋಜನೆಯ ಕುರಿತಾಗಿ ಒಂದು ಕ್ಯೂ.ಆರ್ ಕೋಡ್ ಅಭಿವೃದ್ಧಿಪಡಿಸಿದ್ದು, ಅದನ್ನು ಸ್ಕ್ಯಾನ್ ಮಾಡುವ ಮೂಲಕ ಗ್ರಾಮಸ್ಥರು ನೇರವಾಗಿ ಕಾಮಗಾರಿ ಬೇಡಿಕೆಯನ್ನು ಸಲ್ಲಿಸಬಹುದು. ಈ ಯೋಜನೆಯಡಿ ರೈತರು & ಗ್ರಾಮಸ್ಥರು ಕೃಷಿಹೊಂಡ, ಬದು ನಿರ್ಮಾಣ, ಬಚ್ಚಲು ನೀರು ಇಂಗು ಗುಂಡಿ, ದನಗಳ ಶೆಡ್ಡ್, ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಪೇರು, ಡ್ರ್ಯಾಗನ್, ಗುಲಾಬಿ ಹೂ, ರೇಷ್ಮೆ ಬೆಳೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಶೋಕ ರುದ್ರಗೌಡರ, ಸದಸ್ಯರಾದ ಪ್ರಕಾಶ ಆಯತವಾಡ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಕಾರ್ಯದರ್ಶಿ ಸಿ.ಬಿ.ಕೋಲಕಾರ, ಕಾಯಕ ಮಿತ್ರ ಈರಮ್ಮ ಭೊಮ್ಮನಹಳ್ಳಿ, ರಾಕೇಶ ಸಾವಳಗಿ ಸೇರಿದಂತೆ ಇತರರು ಇದ್ದರು.

