ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಕಾವ್ಯದಲ್ಲಿ ಮೂಡಿಬಂದಿರುವ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕೆಂದು ವಿಜಯಪುರ ಎಸ್ಬಿ ಕಲಾ ಮತ್ತು ಕೆಸಿಪಿ ವಿeನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ದೊಡಮನಿ ಹೇಳಿದರು.
ಪಟ್ಟಣದ ಬಸವಭವನದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ರಾಮಾಯಣ ಕಾವ್ಯದಲ್ಲಿರುವ ಜೀವನದ ಮೌಲ್ಯಗಳಾದ ರಾಮನ ಆದರ್ಶ, ಸೀತೆಯ ಪತಿವೃತ್ತ, ಕರುಣೆ, ದಯಾಗುಣ, ಭಕ್ತಿ ಮೌಲ್ಯ, ದೌರ್ಜನ್ಯ ತಡೆ ಗಟ್ಟುವಿಕೆ, ನಿಸರ್ಗದ ಪ್ರೇಮ ಸೇರಿದಂತೆ ಅನೇಕ ಮೌಲ್ಯಗಳನ್ನು ಕಾಣುತ್ತೇವೆ. ಇಂತಹ ರಾಮಾಯಣ ಕಾವ್ಯವು ಪ್ರತಿಯೊಂದು ಮನೆಯಲ್ಲಿ ಇರುವ ಜೊತೆಗೆ ಅದರಲ್ಲಿರುವ ಶಾಶ್ವತ ಮೌಲ್ಯಗಳನ್ನು ನಾವು ಅರಿತುಕೊಂಡು ಜೀವನ ಸಾಗಿಸಬೇಕಿದೆ ಎಂದರು.
ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಗುರುವಿನ ಕಾರುಣ್ಯವಿದ್ದರೆ ಜೀವನ ಪಾವನವಾಗುತ್ತದೆ. ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿರುವ ಜೀವನ ಸಂದೇಶ ಅರಿತುಕೊಳ್ಳುವ ಅಗತ್ಯವಿದೆ ಎಂದರು.
ಕರವೇ ಮುಖಂಡ ಅಶೋಕ ಹಾರಿವಾಳ, ಸಾನಿಧ್ಯ ವಹಿಸಿದ್ದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಡಿಎಸ್ಎಸ್ ಮುಖಂಡ ಅರವಿಂದ ಸಾಲವಾಡಗಿ ಮಾತನಾಡಿದರು.
ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ನಾಗರಾಳದ ಹುಚ್ಚಪ್ಪ ಮುತ್ಯಾ ವಹಿಸಿದ್ದರು.
ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜು ಹಿರೇಮನಿ, ತಾಪಂ ಇಓ ಪ್ರಕಾಶ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ಅಪ್ರೋಜಅಹ್ಮದ ಪಟೇಲ, ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ, ಡಿಎಸ್ಎಸ್ ಮುಖಂಡ ಮಹಾಂತೇಶ ಸಾಸಬಾಳ ಮಹರ್ಷಿ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ರವಿ ನಾಯ್ಕೋಡಿ, ವಾಲ್ಮೀಕಿ ಸಮಾಜದ ಮುಖಂಡರಾದ ವೈ.ಎನ್.ಬೇವೂರ, ಪಿ.ವೈ.ಕೋಳೂರ ಇತರರು ಇದ್ದರು.
ಶಿವಾನಿ ಬಿರಾದಾರ ಸಂಗಡಿಗರು ಪ್ರಾರ್ಥಿಸಿದರು. ಮಲ್ಲಿಕಾರ್ಜುನ ರಾಜನಾಳ ಸ್ವಾಗತಿಸಿದರು. ವಿರೇಶ ಗೂಡ್ಲಮನಿ ನಿರೂಪಿಸಿದರು.
ವಾಲ್ಮೀಕಿ ಭಾವಚಿತ್ರದ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ಸಾರೋಟಿನಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.
ತಹಸೀಲ್ದಾರ ಕಚೇರಿಯ ಮುಂಭಾಗ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಯನ್ನು ಅಧಿಕಾರಿಗಳು ಬಸವೇಶ್ವರ ವೃತ್ತದಿಂದ ಆರಂಭಿಸಲು ಮುಂದಾದಾಗ ವಾಲ್ಮೀಕಿ ಸಮಾಜದ ಮುಖಂಡರು ಪ್ರತಿ ವರ್ಷದಂತೆ ತಹಸೀಲ್ದಾರ ಕಚೇರಿಯಿಂದಲೇ ಮೆರವಣಿಗೆ ಆರಂಭಿಸಬೇಕಂದು ಪಟ್ಟು ಹಿಡಿದಾಗ ಸಾರೋಟವನ್ನು ಮತ್ತೆ ತಹಸೀಲ್ದಾರ ಕಚೇರಿಗೆ ತೆಗೆದುಕೊಂಡು ಹೋಗಿ ಅಲ್ಲಿಂದಲೇ ಮೆರವಣಿಗೆ ಆರಂಭಗೊಂಡ ಪ್ರಸಂಗ ಜರುಗಿತು.

