ಹಿಂದೂ ಮುಸ್ಲಿಂ ಭಾವೈಕ್ಯ ಬೆಸೆದ ಬಾಬಾನಗರ ಪಾನಿಸಾಹೇಬ್ ಉರುಸ್
ಉದಯರಶ್ಮಿ ದಿನಪತ್ರಿಕೆ
– ರೇಖಾ ಪಿ.ಗದ್ಯಾಳ
ತಿಕೋಟಾ: ಭೂಮಿ ಅದ್ಬುತ ಉಣ್ಣಾಕ, ಉಡಾಕ, ಕುಡಿಯಾಕ ಜೀವಿ ಹುಟ್ಟಿ ಬದುಕಬೇಕಾದದ್ದು ಎಲ್ಲವೂ ಭೂಮಿ ಮೇಲೆ ಇದೆ. ಅದ್ಬುತವಾದ ಭೂಮಿ ಮೇಲೆ ಎಲ್ಲರನ್ನು ಪ್ರೀತಿಸಿ ಸಂತೋಷದ ಬದುಕು ಕಟ್ಟಿಕೊಂಡು ಬದುಕುವುದೇ ಧರ್ಮ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಬುಧವಾರ ನಡೆದ ಹಜರತ್ ಬಾಬಾ ಪಾಣಿಸಾಹೇಬ ಉರುಸ್ ಹಾಗೂ ಸರ್ವಧರ್ಮ ಭಾವೈಕ್ಯತಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಿಗರಹಳ್ಳಿ ಮರುಳ ಶಂಕರದೇವರ ಗುರುಪೀಠದ ಶ್ರೀ ಸಿದ್ದ ಬಸವ ಕಬೀರ ಮಹಾಸ್ವಾಮೀಜಿ ಮಾತನಾಡಿ, ನಮ್ಮ ಭಾರತದಲ್ಲಿ ಭಿನ್ನ ಮಾಡುವ ಕಿಡಿಗೇಡಿಗಳಿಗೆ ಹಿಂದೂ ಮುಸ್ಲಿಂ ಐಕ್ಯತೆ ಭಾವದಿಂದ ಬದುಕುತ್ತಿರುವದನ್ನು ತೋರಿಸಬೇಕು. ವಿಷ ಬೀಜ ಬಿತ್ತುವದರಿಂದ ದೇಶಕ್ಕೆ ಆಪತ್ತು ಬರತ್ತದೆ. ಧರ್ಮಗಳು ಯಾವವು ಜಗಳ ಹಚ್ಚುವದಿಲ್ಲ. ನಾವು ಭಾರತೀಯರು ಅನ್ನೋಭಾವ ಇಟ್ಟಕೊಂಡು ಭಾತೃತ್ವದಿಂದ ಬಂದಿವಿ. ಎಲ್ಲ ಮುಸ್ಲಿಂರು ನಮ್ಮ ಅಣ್ಣ ತಮ್ಮವರು, ಯಾರೇ ಬಂದರೂ ಒಂದಾಗಿ ಇರತಿವಿ ಅಂತಾ ತಿಳಕೋಬೇಕು. ದೇಶ ನಮ್ಮದು, ಇಲ್ಲಿರುವ ಸಂಸ್ಕೃತಿ ನಮ್ಮದು ಭಾವೈಕ್ಯತೆಯಿಂದ ಕೂಡಿ ಬಾಳಬೇಕು ಎಂದರು.
ಹೂವಿನ ಹಿಪ್ಪರಗಿಯ ಗುರುಲಿಂಗಾನಂದ ಮಹಾರಾಜರು, ಪತ್ರಿವನ ಮಠದ ಮಾತೋಶ್ರೀ ದ್ರಾಕ್ಷಾಯಣಿ ಅಮ್ಮನವರು ಮಾತನಾಡಿದರು.
ಈ ಸಂದರ್ಭದಲ್ಲಿ ಖ್ಯಾಜಾ ಅಮೀನೋದ್ದಿನ್ ದರ್ಗಾದ ಖ್ವಾಜಾ ಸಯ್ಯದಶಹಾ ಹೂಜುರ ಅಹ್ಮದ ಹುಸೇನಿ ಚಿಸ್ತಿ ಅಲ್ ಖಾದ್ರಿ ಸಜ್ಜಾದನಸೀನ, ಕಮೀಟಿ ಮುಖ್ಯಸ್ಥ ಙ ನೂರುದಿನ್ ಮುಲ್ಲಾ, ಹಿರೇಮಠ ಮಠದ ಮುಖ್ಯಸ್ಥ ರಾಚಯ್ಯ ಹಿರೇಮಠ, ಆರ್.ಎಸ್.ಪಾಟೀಲ, ಈರಣಗೌಡ ರುದ್ರಗೌಡರ, ಅಮೋಘ ಗೌಡನವರ, ಅಣ್ಣಾಸಾಬ ಬಿರಾದಾರ, ಸುವರ್ಣ ಮಸಳಿ, ದುಂಡಪ್ಪ ತುಂಗಳ ಇದ್ದರು. ಎಸ್.ಬಿ.ಬಿರಾದಾರ, ಎಂ.ಐ.ಜಿಡ್ಡಿ ಕಾರ್ಯಕ್ರಮ ನೆರವೇರಿಸಿದರು.

ಸಂತೋಷವಾಗಿ ಬದುಕುವುದೇ ಧರ್ಮ
“ರಸ್ತೆಯಲ್ಲಿ ಬಡಿದಾಡಿ ರಕ್ತ ಹರಿಸಿ ಹೊಡ್ಯದಾಡುವದು ಧರ್ಮ ಅಲ್ಲ. ರಸ್ತೆಯಲ್ಲಿ ಅಪಘಾತವಾಗಿ ರಕ್ತ ಹರಿದು ಬಿದ್ದವನಿಗೆ ರಕ್ತ ಕೊಡುವದು ಧರ್ಮ. ಹಸಿದು ಬಂದವನಿಗೆ ಅನ್ನ, ನೀರು ಕೊಟ್ಟು, ದುಃಖದಿಂದ ಬಂದವರಿಗೆ ಕಣ್ಣಿರು ಒರೆಸಿ ಒಂದೆರಡು ಮಾತು ಹೇಳು ಅದು ಧರ್ಮ. ಇನ್ನೊಬ್ಬರ ಮನಸ್ಸಿಗೆ ದು:ಖ, ನೋವು ಕೊಡಲಾರದೇ ಇದ್ದರೆ ಅದು ಧರ್ಮ. ಧರ್ಮ ಅಂದರ ಸಂತೋಷವಾಗಿ ಬದುಕುವದು. ಬೇರೆ ಬೇರೆ ಪೂಜೆ, ಬೇರೆ ಬೇರೆ ಧರ್ಮ ಇದ್ದರು ಅಲ್ಲಿ ಬೆಳಗುವ ದೀಪ ಒಂದೇ ಅದೇ ದೇವರು, ದೇವರು ಅಂದ್ರೇ ದೀಪ, ಸಾಗರ, ಬಯಲು ಎಂದರು.
ಕಸ ಹಾಕಿದರೂ ಬೆಳೆಗಳಲ್ಲಿ ರಸ ತುಂಬಿ ಕಳಸ್ಯಾಳ ಭೂಮಿ ತಾಯಿ. ಈ ಜಗತ್ತು ಭೂಮಿ ನೋಡಿ ಸಂತೋಷದಿಂದ ಬದುಕು ಕಟ್ಟಿಕೊಂಡು ಭಾವೈಕ್ಯತೆಯಿಂದ ಕೂಡಿ ಬಾಳುವುದೇ ಧರ್ಮ.”
– ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ಕೊಪ್ಪಳ
ಬಾಕ್ಸ್
ಸುಮಂಗಲೆಯರಿಂದ ಕುಂಭ ಮೇಳ
ಸುಮಂಗಲೆಯರಿಂದ ಗ್ರಾಮದ ಹಿರೇಮಠ ಮಠದಿಂದ ದರ್ಗಾದವರೆಗೆ ಕುಂಭ ಮೇಳ ನೆರವೇರಿತು. ಸಾರೋಟದಲ್ಲಿ ಲಿಂಗೈಕ್ಯ ಷಣ್ಮುಖ ಶಿವಾಚಾರ್ಯರ ಭಾವ ಚಿತ್ರದೊಂದಿಗೆ ಸಕಲ ವಾಧ್ಯ ವೃಂದಗಳೊಂದಿಗೆ ಹಿಂದೂ ಮುಸ್ಲಿಂ ಸಹೋದರರು ಭಾವೈಕ್ಯತೆಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
೩ನೇ ತರಗತಿ ವಿಧ್ಯಾರ್ಥಿನಿ ದಾನೇಶ್ವರಿ ರವಿಕುಮಾರ ನಾವಿ ಭರತ ನಾಟ್ಯ ಮಾಡಿ ಎಲ್ಲರ ಗಮನ ಸೆಳೆದಳು.

