ವೈಚಾರಿಕ ಸಂತನ ಪುಣ್ಯ ಸ್ಮರಣೆಗೆ ಅಪಾರ ಭಕ್ತಗಣ | ಗೊರುಚಗೆ ಸಿದ್ದಲಿಂಗ ಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ | ಗ್ರಂಥಗಳು ಲೋಕಾರ್ಪಣೆ
ಉದಯರಶ್ಮಿ ದಿನಪತ್ರಿಕೆ
ಗದಗ: ಕರುನಾಡು ಕಂಡ ಅಪರೂಪದ ಸಂತ ಲಿಂ, ತೋಂಟದ ಸಿದ್ದಲಿಂಗ ಶ್ರೀಗಳು ವೈಚಾರಿಕತೆ ಭಾವದ ಮೇರು ಪರ್ವತಕರು.ಅವರ ಮೌಲ್ಯಾಧಾರಿತ ನೇರ ನಡೆ,ನುಡಿಗಳು ಜನಮಾನಸದ ಹೃದಯದಲ್ಲಿಂದು ನೆಲೆಗೊಂಡಿವೆ. ಬಸವತತ್ವಕ್ಕೆ ತಮ್ಮ ಬದುಕನ್ನು ಮೀಸಲಿರಿಸಿ ಸ್ವಾಮಿತ್ವ ಪದಕ್ಕೆ ಘನತೆ,ಗೌರವ ತಂದುಕೊಟ್ಟಿದ್ದಾರೆ.ಪವಿತ್ರ ಕಾವಿಲೋಕದ ಶ್ರೇಷ್ಠತೆ ಹೆಚ್ಚಿಸಿದ್ದಾರೆ.ಸಿದ್ದಲಿಂಗ ಶ್ರೀಗಳು ಸೂರ್ಯನಂತೆ ಪ್ರಕಾಶಿಸುವ ಮಹಾನ ದಾರ್ಶನಿಕರು ಎಂದು ನಾಡೋಜ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಹೇಳಿದರು.
ಗದಗ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಸಿದ್ದಲಿಂಗ ಪೂಜ್ಯರ ಹೆಸರಿನಲ್ಲಿರುವ ಶಿವಾನುಭವ ಮಂಟಪದಲ್ಲಿ ಸೋಮವಾರ ಜರುಗಿದ ಲಿಂ,ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳವರ 6 ನೇ ಪುಣ್ಯಸ್ಮರಣೋತ್ಸವ,ಮರಣವೇ ಮಹಾನವಮಿ ಆಚರಣೆ, ಪ್ರಶಸ್ತಿ ಪ್ರದಾನ, ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ 5 ಲಕ್ಷ ರೂಪಾಯಿ ನಗದು ಹಾಗೂ ಫಲಕ ಒಳಗೊಂಡ “ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ” ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪೂಜ್ಯ ಶ್ರೀಗಳವರ ಮೇಲೆ ತಾವು ಅಪಾರ ಭಕ್ತಿ,ಗೌರವ ಹೊಂದಿದ್ದು.ಆ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಲು ಸಮ್ಮತಿಸಿರುವೆ. ಸದ್ಭಕ್ತಿ, ಸದಾಚಾರ, ಸವಿನಯದ ಮಮಕಾರತೆಯುಳ್ಳ ಸಾಕಾರಮೂತಿ೯ಗಳಾಗಿದ್ದ ಸಿದ್ದಲಿಂಗ ಪೂಜ್ಯರ ಚೇತನಶೀಲತೆ ಮರೆಯಲಾಗದು. ಪೂಜ್ಯರ ಹೆಸರಿನಲ್ಲಿರುವ ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ ತೋಂಟದ ಡಾ.ಸಿದ್ದರಾಮ ಶ್ರೀಗಳವರಿಗೆ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರೂ ಅದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಶರಣ ಸಾಹಿತ್ಯದ ರಸಗವಳವನ್ನು ಮನೆಮನೆಯ ಮನಗಳಿಗೆ ತಲುಪಿಸಲು ಶ್ರಮಿಸಿರುವ ಗೊ.ರು.ಚನ್ನಬಸಪ್ಪನವರು ಹಿರಿಯ ಮತ್ಸದಿಗಳು, ಶ್ರೇಷ್ಠ ಚಿಂತಕರು. 2004 ರಲ್ಲಿ ನಾನು ಕಾನೂನ ಮಂತ್ರಿಯಾಗಿದ್ದಾಗ ಈ ಹಿಂದೆ ನಮ್ಮ ಕೋರಿಕೆ ಮೇರೆಗೆ ಅವರು ಭಾಷಾ ಆಯೋಗದ ಮುಖ್ಯಸ್ಥರಾಗಿ ಕೇಂದ್ರದ 409 ಕ್ಕೂ ಅಧಿಕ ಕಾನೂನುಗಳನ್ನು ಕನ್ನಡಕ್ಕೆ ತಜು೯ಮೆ ಗೈಯುವಲ್ಲಿ ಬಹುದೊಡ್ಡ ಅಮೋಘ ಕೊಡುಗೆ ನೀಡಿದ್ದಾರೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಮಂತ್ರಿವಾಗಿದ್ದಾಗ ಜಾನಪದ ವಿವಿ ಮೂಲಕ ರಾಜ್ಯದ ಎಲ್ಲಾ ಗ್ರಾಮಗಳ ಇತಿಹಾಸವುಳ್ಳ ವಿಶೇಷ ” ಗ್ರಾಮ ಚರಿತೆ” ಗ್ರಂಥಗಳನ್ನು ಪ್ರಕಟಿಸಿ ಹೊರತರಬೇಕೆಂದು ಚನ್ನಬಸಪ್ಪನವರು ಸಲಹೆ ನೀಡಿದ್ದರು. ಅದಕ್ಕೆ ಸ್ಪಂದಿಸಿ ನಮ್ಮ ಸರಕಾರ ಅಂದು ₹ 10 ಕೋಟಿ ಬಿಡುಗಡೆ ಮಾಡಿತು ಎಂದರು.
ಮಹಾತ್ಮ ಗಾಂಧೀಜಿಯವರ ತತ್ವ ಸಿದ್ದಾಂತಗಳ ಅಡಿಯಲ್ಲಿ ಗೊ.ರು.ಚನ್ನಬಸಪ್ಪನವರು ತಮ್ಮ ಜೀವನ ಪಥದ ಹೆಜ್ಜೆಗುರುತು ಮೂಡಿಸಿದ್ದಾರೆ.ಇಂಥ ಹಿರಿಯ ಜೀವಕ್ಕೆ ಇಂದು ಸಾಮಾಜಿಕ ಚಿಂತನೆಯುಳ್ಳ, ಸರಳತೆಯ ದೇವರತ್ನ ತೋಂಟದ ಸಿದ್ದಲಿಂಗ ಪೂಜ್ಯರ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಹಾಗೂ ತಮ್ಮ ಕೈಯಿಂದ ಪ್ರದಾನ ಮಾಡುವ ಸುಯೋಗ ಒದಗಿರುವುದು ಹೆಮ್ಮೆ, ಸಂತಸ ತಂದಿದೆ. ಇಂಥದೊಂದು ಅಪೂರ್ವ ಸವಿಘಳಿಗೆ ಇಲ್ಲಿ ಸಮ್ಮಿಲನಕ್ಕೆ ಸಾಕ್ಷಿಯಾಗಿದ್ದು ಸ್ಮರಣೀಯವಾಗಿದೆ ಅಲ್ಲದೇ ಈ ಪ್ರಶಸ್ತಿಯ ಮೌಲ್ಯಯುತ ತೂಕ ಹೆಚ್ಚಳಗೊಂಡಿದೆ ಎಂದರು.
ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ಸಿದ್ದಲಿಂಗ ಪೂಜ್ಯರ ಸಮಾಜಪರ ಸೇವೆಗಳು ಸ್ಮರಣೀಯವಾಗಿವೆ. ತಾವು ಕಲಿತ ದಿಂಡೂರ ಶಾಲೆಗೆ ಅಂದಿನ ಕಾಲದಲ್ಲಿ ಶ್ರೀಗಳು ಒಂದು ಲಕ್ಷ ರೂ.ಖಚು೯ಮಾಡಿ ಜ್ಞಾನ ಪ್ರಸಾರದ ದೇಗುಲವೆಂಬ ಶಾಲೆಯನ್ನು ಅಭಿವೃದ್ಧಿಪಡಿಸಿ ಔದಾರ್ಯತೆ ಮೆರೆದರು. ಪೂಜ್ಯರ ಡಂಬಳ ಶಾಲೆಯಲ್ಲಿ ತಾವು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದಾಗ ನಮ್ಮ ತಾಂಡಾದ ವಿದ್ಯಾರ್ಥಿಗಳಿಗೆ ಅಂತಃಕರಣದಿಂದ ಮಾತೃಹೃದಯಿಂತೆ ಸ್ವತಃ ಶ್ರೀಗಳೇ ಅನ್ನಪ್ರಸಾಧ ಉಣಬಡಿಸಿದ ಆ ದೃಶ್ಯನೋಟ ಮರೆಯಲಾಗದು. ನಮ್ಮ ಸಮಾಜದ ಬಗ್ಗೆ ಸಿದ್ದಲಿಂಗ ಶ್ರೀಗಳು ಹೊಂದಿದ ಕಳಕಳಿ, ಪ್ರೀತಿ ಪದಗಳಿಂದ ಬಣ್ಣಿಸಲಾಗದು. ಅಷ್ಟೊಂದು ವಿಶ್ವಾಸ, ಗೌರವದ ಭಾವ ಪೂಜ್ಯರಲ್ಲಿತ್ತು. ಅದೀಗ ಸ್ಮರಣೀಯ ಎಂದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ನೆಲ, ಜಲದ ಬಗ್ಗೆ ಅಪಾರ ಗೌರವ ಹೊಂದಿದ್ದ ತೋಂಟದ ಸಿದ್ದಲಿಂಗ ಪೂಜ್ಯರು ಅಂದು ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ಹೋರಾಟದ ಮನಸ್ಸು ಮಾಡದಿದ್ದರೆ ಇಂದು ಕಪ್ಪತ್ತಗುಡ್ಡ ಸಸ್ಯ ಸಂಕುಲ ಉಳಿಯುತ್ತಿರಲಿಲ್ಲ. ಶುದ್ಧ ಗಾಳಿ ಪಡೆಯುವ ತಾಣವೆಂಬ ಹೆಗ್ಗಳಿಕೆ ಹಿರಿಮೆ ಪಡೆಯುತ್ತಿರಲಿಲ್ಲ. ಪರಿಸರ ಪ್ರೇಮಿಯಾಗಿದ್ದ ಪೂಜ್ಯರು ತಾವು ಶಾಸಕರಾಗಿದ್ದಾಗ ಕೈಗೊಂಡ ಕೆಲಸಗಳಿಗೆ ಅದರಲ್ಲೂ ಕೆರೆ ತುಂಬಿಸುವ ಕಾರ್ಯಗಳಿಗೆ ಶ್ಲಾಘಿಸಿ ಪ್ರೇರಪಿಸುತ್ತಿದ್ದರು ಎಂದರು.
ಅತಿಥಿಗಳಾಗಿ ಮಾತನಾಡಿದ ದಾವಣಗೆರೆ ವಿವಿ ಕುಲಪತಿ ಬಿ.ಡಿ.ಕುಂಬಾರ, ಲಿಂ, ಸಿದ್ದಲಿಂಗ ಶ್ರೀಗಳು ಭಕ್ತಗಣದ ಹೃದಯ ಭಕ್ತಿಸತ್ವರಸದೊಂದಿಗೆ ಶ್ರೀಮಂತಿಕೆಗೊಳಿಸಿದ್ದಾರೆ, ಜನಮನದಲ್ಲಿ ಸಾಮರಸ್ಯದ ಸೌಹಾರ್ದತೆ ಮೂಡಿಸಿದ್ದಾರೆ. ಗೋಕಾಕ ವರದಿ ಜಾರಿಗಾಗಿ ನಡೆದ ಅಂದಿನ ಐತಿಹಾಸಿಕ ಹೋರಾಟಕ್ಕೆ ಮುನ್ನಡಿ ಬರೆದು ಕನ್ನಡ ಪ್ರೇಮಭಾವ ಮೊಳಗಿಸಿದ್ದಾರೆ. ಶ್ರೀಗಳ ಚರಿತ್ರಾರ್ಹ ಹೆಜ್ಜೆ ಗುರುತುಗಳು ನಾಡು,ನುಡಿಗಳಿಗಾಗಿ ಸಂದಿವೆ ಎಂದರು.
ತೋಂಟದ ಡಾ.ಸಿದ್ದರಾಮ ಪೂಜ್ಯರು ಸಾನ್ನಿಧ್ಯ ವಹಿಸಿ ನೀಡಿದ ಆಶೀರ್ವಚನದಲ್ಲಿ ಲಿಂ,ಸಿದ್ದಲಿಂಗ ಶ್ರೀಗಳ ಸಮಾಜಪರ ಗೈದ ಅನುಪಮ ಸೇವಾ ಪಯಣದ ಮೆಲುಕು ಹಾಕಿ ಸ್ಮರಿಸಿದರು. ಮುದೇನಗುಡಿ ಅಡವಿ ಸಿದ್ದೇಶ್ವರ ಮಠದ ನಿರುಪಾಧೀಶ್ವರ ಶ್ರೀಗಳವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆಳಂದದ ಕೋರಣೇಶ್ವರ ಶ್ರೀಗಳು, ಬೈರನಹಟ್ಟಿ ಶಾಂತಲಿಂಗ ಶ್ರೀಗಳು, ಅರಸಿರೇರಿ ಮಠದ ಶಾಂತಲಿಂಗ ದೇಶಿಕೇಂದ್ರ ಶ್ರೀಗಳು, ಸಂಡೂರಿನ ಪ್ರಭುಸ್ವಾಮೀಜಿ ಸಮ್ಮುಖ ವಹಿಸಿದ್ದರು.
ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ, ಶಿಕ್ಷಣ ತಜ್ಞ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ, ಪೂಜ್ಯ ಸಿದ್ದಲಿಂಗ ಶ್ರೀಗಳವರಲ್ಲಿನ ಬಸವ ತತ್ವಾದರ್ಶದ ಕಾಯಕಗಳನ್ನು ಸ್ಮರಿಸಿದರು. ಪೂಜ್ಯರ ಪ್ರಾಂಜಲ್ಯ ಮನಸ್ಸಿನ ದಯಾ, ಕರುಣೆಯುತ ಭಾವನೆಯ ಅವಿರತ ಕಾಯಕಗಳು ಆಜರಾಮರವಾಗಿವೆ.ಅಸಂಖ್ಯಾತ ಮನಭಾವದಲ್ಲಿ ಅನುರಣಿಸುತ್ತಿವೆ ಎಂದರು.
ಗಣ್ಯರ ಸಮ್ಮುಖದಲ್ಲಿ ನಾಡೋಜ ಸಾಹಿತಿ ಗೊ.ರು.ಚನ್ನಬಸಪ್ಪ ಅವರಿಗೆ ಸಿದ್ದಲಿಂಗ ಪೂಜ್ಯರ ಹೆಸರಿನಲ್ಲಿರುವ ಐದು ಲಕ್ಷ ನಗದು ರೂಪಾಯಿ ಹಾಗೂ ಫಲಕವದೊಂದಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು
ಪ್ರೊ.ಶಿವಾನಂದ ಪಟ್ಟಣಶೆಟ್ಟರ ಅವರು ರಚಿಸಿದ “ಶ್ರೀ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ದುಬೈ ಭೇಟಿಯ ನೆನಪುಗಳು” ಹಾಗೂ ಡಾ,ಲಕ್ಷ್ಮಣ ಕೌಂಠೆ ರಚಿಸಿದ “ಕೀರ್ತನ ಕೇಸರಿ ಶ್ರೀ ಚನ್ನಬಸವ ಸ್ವಾಮಿಗಳು” ಎಂಬ ಗ್ರಂಥಗಳು ಬಿಡುಗಡೆಗೊಂಡವು.
ಮಾಜಿ ಸಚಿವ ಎಸ್. ಎಸ್.ಪಾಟೀಲ, ಶಾಸಕ ಜಿ.ಎಸ್.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬಚಿ೯, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಕೆ.ಎಚ್.ಬೇಲೂರ, ಕೊಟ್ರೇಶ ಮೆಣಸಿನಕಾಯಿ, ಅಮರೇಶ ಅಂಗಡಿ, ದಾನಯ್ಯ ಗಣಾಚಾರಿ ಮೊದಲಾದವರು ವೇದಿಕೆಯಲ್ಲಿದ್ದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಸಾ.ಶಿ.ಇಲಾಖೆ ವಿಶ್ರಾಂತ ಡಿಡಿಪಿಐ,ಜೆಟಿವಿಪಿ ಸಂಸ್ಥೆ ಸಿಇಓ ಐ.ಬಿ.ಬೆನಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಿವಿಧ ಶಾಲೆ ಪುಟ್ಟ ಮಕ್ಕಳು ಸಿದ್ದಲಿಂಗ ಪೂಜ್ಯರ ಕುರಿತಾದ ಅರ್ಥಪೂರ್ಣ ಗೀತಗಾನಕ್ಕೆ ನೃತ್ಯ ಮಾಡಿ ಗಮನ ಸೆಳೆದರು.
ರಾಜೇಶ್ವರಿ ಕಲಾಕಟೀರ ಸಂಸ್ಥೆ ಮಕ್ಕಳು ಆಕರ್ಷಕ ನೃತ್ಯ ಪ್ರದಶಿ೯ಸಿದರು. ಪ್ರಾರ್ಥನೆ ಗೀತೆ ಸುಶ್ರಾವ್ಯವಾಗಿ ಇಂಪಾಗಿ ಮೂಡಿಬಂತು.

“ಲಿಂ. ಸಿದ್ದಲಿಂಗ ಶ್ರೀಗಳು ಭೌತಿಕವಾಗಿ ಮರೆಯಾಗಿದ್ದರೂ ಅವರು ಈ ಕನ್ನಡ ನೆಲದ ಮೇಲೆ ಗೈದ ಅಭೂತಮಯ ಸತ್ಕಾರ್ಯಗಳು ಸದಾ ಅಮರವಾಗಿವೆ. ಅವರ ವಿಚಾರಧಾರೆಗಳು ಸಮಾಜಮುಖಿಗಳಾಗಿವೆ. ಜನತೆಯ ಕಲ್ಯಾಣಕ್ಕಾಗಿ ಮಿಡಿದಿವೆ. ಮನುಕುಲಕ್ಕಾಗಿ ಹವಣಿಸಿವೆ. ಶ್ರಮದ ತಪಜಪದಲ್ಲಿ ಬೆಳಕು ಕಂಡು ಅವು ಮಿನುಗಿವೆ. ಪುಸ್ತಕ ಸಂಸ್ಕೃತಿಗೆ ಮೆರುಗು ನೀಡಿವೆ. ಅನ್ನದಾಸೋಹ, ಅಕ್ಷರ ದಾಸೋಹವೆಂಬ ಅಮೃತ ಸೇವೆಗಳು ಅದೆಷ್ಟೋ ಜನರ ಹೊಟ್ಟೆಗೆ ಪ್ಪಸನ್ನತೆ ಭಾವ ಕಲ್ಪಿಸಿದೆ, ತಲೆಗೆ ಜ್ಞಾನ ಸಿಂಚನ ಕರುಣಿವೆ. ಕನ್ನಡ ಕುಲಗುರು ಸಿದ್ದಲಿಂಗ ಶ್ರೀಗಳ ಪ್ರೇರಣೆಯಿಂದ ಗದುಗಿನ ಜತೋ ಶ್ರೀಮಠದಲ್ಲಿ ನಿರಂತರ ಆಧ್ಯಾತ್ಮಿಕತೆ ಸುಗಂಧದ ಶಿವಾನುಭವ ಕಾರ್ಯಕ್ರಮಗಳು ಮೂಡಿ ಬಂದಿವೆ, ವಿಶೇಷ ಪುಸ್ತಕ ಪ್ರಕಟಣೆಗಳು, ಸಸ್ಯ ಕಾಶಿ ಕಪ್ಪತಗುಡ್ಡದ ಸಂರಕ್ಷಣೆಗಾಗಿ ಹೋರಾಟದ ದಿಟ್ಟತೆಯ ಛಾತಿ, ಸಕಲರನ್ನೂ ಸಂಪ್ರೇಮದಿಂದ ಕಾಣುವ ವಿಶಾಲತೆಯ ಹೃದಯವಂತ ಲೇಪಿತ ಗುಣ ಸ್ವಭಾವಗಳು ಪೂಜ್ಯರಲ್ಲಿ ಹುದಗಿದ್ದವು. ಅವು ಭಕ್ತರ ಮನದಲ್ಲಿಗ ಸದಾ ಚಿರಸ್ಥಾಯಿಯಾಗಿ ಉಳಿದುಕೊಂಡಿವೆ.”
– ಎಸ್.ವಿ. ಸಂಕನೂರ
ವಿಧಾನಪರಿಷತ್ ಸದಸ್ಯರು

