ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರದ ವಾಹನ ಚಾಲಕರಾದ ವಿಜಯಕುಮಾರ್ ತೋರಗಲ್ ಅವರಿಗೆ ಆತ್ಮೀಯ ಬಿಳ್ಕೋಡುಗೆ
ಉದಯರಶ್ಮಿ ದಿನಪತ್ರಿಕೆ
ನವದೆಹಲಿ: ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರದಲ್ಲಿ ಕಳೆದ ೧೨ ವರ್ಷಗಳಿಂದ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿ, ಬೆಳಗಾವಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರ ಕಛೇರಿಗೆ ವರ್ಗಾವಣೆ ಹೊಂದಿರುವ ವಿಜಯಕುಮಾರ ತೋರಗಲ್ ಅವರನ್ನು ಆತ್ಮೀಯವಾಗಿ ಬಿಳ್ಕೋಡಲಾಯಿತು.
ನಂ-೬ ಸರ್ದಾರ ಪಟೇಲ್ ಮಾರ್ಗದಲ್ಲಿರುವ ಕರ್ನಾಟಕ ಭವನದಲ್ಲಿನ ಕರ್ನಾಟಕ ವಾರ್ತಾ ಕೇಂದ್ರದ ಕಛೇರಿಯಲ್ಲಿ ಬುಧವಾರ ನಡೆದ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಪ್ರಭಾರ ಉಪ ನಿರ್ದೇಶಕಿ ಶ್ರೀಮತಿ ಎಂ ಶಾಲಿನಿ ಅವರು ಮಾತನಾಡಿ, ವಿಜಯ್ ಕುಮಾರ್ ಅವರು ಎಲ್ಲರೊಂದಿಗೆ ಅತ್ಯಂತ ಅತ್ಮೀಯತೆ ಹೊಂದಿದ್ದು, ಸಮಯ ಪರಿಪಾಲನೆಯೊಂದಿಗೆ ಶ್ರದ್ಧೆಯಿಂದ ಕಾರ್ಯನಿರ್ವಹಿಸುವ ಮೂಲಕ ಇತರ ಚಾಲಕರಿಗೆ ಮಾದರಿಯಾಗಿದ್ದು, ಇವರ ಮುಂದಿನ ವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅನ್ಯ ಕರ್ತವ್ಯದ ಮೇಲೆ ನವದೆಹಲಿಯಲ್ಲಿದ್ದ ವಿಜಯಪುರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿ ಅಮರೇಶ್ ದೊಡಮನಿ, ಕರ್ನಾಟಕ ಭವನದ ಪ್ರಭಾರ ಲೆಕ್ಕಾಧೀಕ್ಷಕರಾದ ಎಸ್ ಕುಮಾರ್, ಕಿರಿಯ ಸಹಾಯಕರಾದ ರಾಜಣ್ಣ ಡಿ ಬಿರಾದಾರ, ಪ್ರಥಮ ದರ್ಜೆ ಸಹಾಯಕರಾದ ಸಂದೀಪ ಆರ್ ಹಾಗೂ ಶ್ರೀಮತಿ ರಂಜನಾ, ದ್ವಿತೀಯ ದರ್ಜೆ ಸಹಾಯಕರಾದ ವೈಭವ್ ದೇಸಾಯಿ, ಸ್ವಾಗತಕಾರರಾದ ನವೀನ್ ಕುಮಾರ್ ಮತ್ತು ಶ್ರೀಮತಿ ಕಿರಣ್, ಹಾಗೂ ಕರ್ನಾಟಕ ವಾರ್ತಾ ಕೇಂದ್ರದ ಶ್ರೀಮತಿ ಗೀತಾ ಇವರು ಉಪಸ್ಥಿತರಿದ್ದು, ವರ್ಗಾವಣೆ ಹೊಂದಿದ ವಿಜಯಕುಮಾರ ಅವರಿಗೆ ಶುಭ ಹಾರೈಸಿದರು.

