ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನಾಚರಣೆಯಲ್ಲಿ ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಹಾರ ಸರಪಳಿಯಲ್ಲಿ ಮತ್ತು ಆಹಾರ ಭದ್ರತೆಯನ್ನು ಒದಗಿಸುವಲ್ಲಿ ಮಹಿಳೆಯರ ಕೊಡುಗೆ ಗಣನೀಯವಾಗಿದೆ. ಕೃಷಿ ಮಹಿಳಾ ಪ್ರಧಾನವಾಗಿದೆ. ಆದರೆ ಕೃಷಿಯ ಮೇಲಿನ ಅಧಿಕಾರ ಮಾತ್ರ ಪುರುಷರ ಪ್ರಾಬಲ್ಯದಲ್ಲಿದೆ. ಇದನ್ನು ಮೀರಿ ಮಹಿಳೆಯರು ಕೃಷಿ ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದ ಅವರು, ಮಹಿಳೆಯರು ಉದ್ಯಮಶೀಲತೆ ಬೆಳೆಸಿಕೊಳ್ಳಲು ಮತ್ತು ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ವಿಶ್ವವಿದ್ಯಾಲಯಗಳು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದ ಮಹಿಳೆಯರು ಕೃಷಿಯಲ್ಲಿ ಹೆಚ್ಚು ತೊಡಗಿದ್ದಾರೆ. ಪ್ರತಿ ಕೃಷಿ ಸಂಬಂಧಿ ಚಟುವಟಿಕೆಯ ಹಿಂದೆ ಮಹಿಳೆಯ ಕೊಡುಗೆ ಇದೆ. ಆದ್ದರಿಂದ ವಿಶ್ವಸಂಸ್ಥೆ ಗ್ರಾಮೀಣ ಮಹಿಳೆಯರ ದಿನಾಚರಣೆಯ ಅಂಗವಾಗಿ ಗ್ರಾಮೀಣ ಮಹಿಳೆಯರು ಎಲ್ಲರಿಗಾಗಿ ಉತ್ತಮ ಆಹಾರವನ್ನು ಬೆಳೆಯುತ್ತಿದ್ದಾರೆ ಎಂಬುದನ್ನು ಈ ವರ್ಷದ ಧ್ಯೇಯ ವಾಕ್ಯವನ್ನಾಗಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಶಂಕರ ಕೋಳಿ ಮಾತನಾಡಿ, ಸರ್ಕಾರ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಪ್ರಯೋಜನ ಮಹಿಳೆಯರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಗ್ರಾಮೀಣ ಪ್ರದೇಶ ಮಹಿಳೆಯರ ಹತ್ತಿರ ನೇರವಾಗಿ ಕೃಷಿ ಮತ್ತು ಕೃಷಿಯೇತರ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರ ಸಬಲೀಕರಣಕ್ಕೆ ಪ್ರತಿಯೊಬ್ಬರು ಕೈಜೋಡಿಸಿ ಪ್ರೋತ್ಸಾಹಿಸಬೇಕು ಎಂದರು.
ಗ್ರಾಮೀಣ ಪ್ರದೇಶದ ಮಹಿಳಾ ಸಾಧಕಿಯರಾದ ಸುನಂದಾ ಪಾಟೀಲ, ಸುಮನ ಕೋಲ್ಹಾರ, ಮಂಗಲಾ ಗುಡಿಮಠ, ಚಂದ್ರವ್ವ ಬಬಲೇಶ್ವರ, ಯಲ್ಲವ್ವಾ ಸಾಲಗಲ್ಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಪ್ರೊ.ಜಿ.ಬಿ.ಸೋನಾರ, ಡಾ.ಸೋನಕಾಂಬಳೆ, ಡಾ.ಕಲಾವತಿ ಕಾಂಬಳೆ ಉಪಸ್ಥಿತರಿದ್ದರು.
ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಲಕ್ಷ್ಮಿದೇವಿ ವಾಯ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಡಾ.ಸರೋಜಾ ಸಂತಿ ಅತಿಥಿಗಳನ್ನು ಮತ್ತು ಸಾಧಕಿಯರನ್ನು ಪರಿಚಯಿಸಿದರು. ಡಾ.ರಜಿಯಾಬೇಗಂ ನದಾಫ ನಿರೂಪಿಸಿದರು. ರುಕ್ಮವ್ವಾ ಅಗಸರ ವಂದಿಸಿದರು.

