’ವಚನ ದರ್ಶನ’ ಕೃತಿ ಮತ್ತು ’ಶರಣರ ಶಕ್ತಿ’ ಚಲನಚಿತ್ರ ನಿಷೇಧಿಸಲು ಆಗ್ರಹಿಸಿ ಬಸವ ಭಕ್ತರಿಂದ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವ ಭಕ್ತರ ಭಾವನೆಗೆ ಧಕ್ಕೆ ತರುವ ’ವಚನ ದರ್ಶನ’ ಕೃತಿಯನ್ನು ಸರಕಾರ ಮುಟ್ಟುಗೋಲು ಹಾಕಬೇಕು ಹಾಗೂ ಶರಣ ಸಂಸ್ಕೃತಿಗೆ ಅಪಮಾನ ಮಾಡುವಂತಹ ’ಶರಣರ ಶಕ್ತಿ’ ಚಲನಚಿತ್ರವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಮತ್ತು ಕಲ್ಬುರ್ಗಿ ಫೌಂಡೇಶನ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹಾಗೂ ಗಂಗಾಧರ ಸಾಲಕ್ಕಿ ಮಾತನಾಡಿ, ಶರಣರ ಅನುಭವ ಮಂಟಪ ಪರಿಕಲ್ಪನೆಯನ್ನು ಬುಡಮೇಲು ಮಾಡುವ ರೀತಿಯಲ್ಲಿ ಕೆಲ ಸಂಪ್ರದಾಯವಾದಿಗಳು ಈ ’ವಚನ ದರ್ಶನ’ ಕೃತಿ ರಚಿಸಿದ್ದು, ಇದು ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ಕೃತಿಯಾಗಿದೆ. ಇದರಿಂದ ಬಸವ ಭಕ್ತರಿಗೆ ನೋವಾಗಿದ್ದು, ಕಾರಣ ಶರಣರ ಅಭಿವ್ಯಕ್ತಿಗೆ ಕಳಂಕ ತರುವ ಈ ಕೃತಿಯನ್ನು ಕೂಡಲೇ ಸರಕಾರ ಮುಟ್ಟುಗೋಲು ಹಾಕಬೇಕು. ಅಲ್ಲದೇ ’ಶರಣರ ಶಕ್ತಿ’ ಎಂಬ ಚಲನಚಿತ್ರವು ಶರಣರ ಚರಿತ್ರೆಗೆ ಮಸಿ ಬಳೆಯುವ ರೀತಿಯಲ್ಲಿ ಶರಣರ ಬದುಕನ್ನು ಕ್ರೌರ್ಯದಿಂದ, ಅನಾಗರಿಕ ಸಂಭಾಷಣೆಯಿಂದ ಚಿತ್ರಿಸಿ ಶರಣ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ. ಈ ಚಲನಚಿತ್ರದ ಅನೇಕ ಸನ್ನಿವೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದನ್ನು ಕೂಡಲೇ ತೆಗೆಸಿ, ’ಶರಣರ ಶಕ್ತಿ’ ಚಲನಚಿತ್ರ ಪ್ರದರ್ಶನಕ್ಕೆ ಸರಕಾರ ತಕ್ಷಣ ನಿಷೇಧ ಹೇರಬೇಕೆಂದು ಆಗ್ರಹಿಸಿದರು.
ಎಡಿಸಿ ಸೋಮಲಿಂಗ ಗೆಣ್ಣೂರ ಮನವಿ ಪತ್ರವನ್ನು ಸ್ವೀಕರಿಸಿದರು.
ಕಲ್ಬುರ್ಗಿ ಫೌಂಡೇಶನ್ ಅಧ್ಯಕ್ಷ ಶಿವಲಿಂಗಪ್ಪ ಕಲಬುರ್ಗಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಪ್ರಭುಗೌಡ ಪಾಟೀಲ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ ಸಾಲಿ, ನಿವೃತ್ತ ಫ್ರೊ.ಬಿ.ಎಂ.ಬಿರಾದಾರ, ಹಿರಿಯ ಪತ್ರಕರ್ತ ಅನೀಲ ಹೊಸಮನಿ, ಪುಣೆಯ ’ಅಕ್ಕನ ಅರಿವು’ ಬಳಗದ ಡಾ.ಸರಸ್ವತಿ ಪಾಟೀಲ, ಡಾ.ಶಾರದಾಮಣಿ ಹುಣಶ್ಯಾಳ, ಡಾ.ಮೀನಾಕ್ಷಿ ಪಾಟೀಲ, ಪ್ರೊ.ಶಾರದಮ್ಮ ಪಾಟೀಲ, ಗೌರಮ್ಮ ನಾಶಿ, ಬಸಮ್ಮ ಭರಶೆಟ್ಟಿ, ಶೈಲಾ ಮಣೂರ, ಸಂಗಪ್ಪ ಪಡನಾಡ, ಕರ್ನೆಲ್ ಸಂಗಪ್ಪ, ವಿ.ಎಪಾಟೀಲ್, ಶಕುಂತಲಾ ಚಿಂತಾಮಣಿ ಸೇರಿದಂತೆ ಅಧಿಕ ಸಂಖ್ಯೆಯ ಬಸವ ಭಕ್ತರು, ಅಭಿಮಾನಿಗಳು ಇದ್ದರು.

“ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರದಿಂದ ಬೇರೆ ಬೇರೆ ನಗರಗಳಲ್ಲಿ ” ವಚನ ದರ್ಶನ ” ಕೃತಿ ಬಿಡುಗಡೆ ಮಾಡಿ ಪುಸ್ತಕ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ಈಗ ಪುಸ್ತಕದ ವಿಮರ್ಶೆ ಗೆ ರೂ.೧೦ಸಾವಿರದವರೆಗೆ ಬಹುಮಾನದ ಆಮಿಷವೊಡ್ಡಿ ಎಲ್ಲೆಡೆ ವಿವಾದಾತ್ಮಕ ಕೃತಿಯ ಮಾರಾಟಕ್ಕೆ ಮುಂದಾಗಿದ್ದು ಖಂಡನೀಯ. ಸರಕಾರ ಈ ಪುಸ್ತಕ ಮುಟ್ಟುಗೋಲು ಹಾಕದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗುವುದು ಅನಿವಾರ್ಯ. “
– ಡಾ.ಶಶಿಕಾಂತ ಪಟ್ಟಣ
ಅಧ್ಯಕ್ಷರು, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ

