ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಐತಿಹಾಸಿಕ ಹಿನ್ನೆಲೆಯ ರಾವುತರಾಯ-ಮಲ್ಲಯ್ಯರ ಜಾತ್ರಾ ಮಹೋತ್ಸವ ಸೋಮವಾರ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭಕ್ತಿ ಭಾವದೊಂದಿಗೆ ಆರಂಭವಾಯಿತು.
ಪಟ್ಟಣದ ರಾವುತರಾಯ ಅಶ್ವಾರೂಢನಾಗಿ ತೆರೆದ ಬಂಡಿಯಲ್ಲಿ ಆಸೀನನಾಗಿ ನಸುಕಿನ ಐದು ಗಂಟೆಗೆ ಮೂಲ ದೇವಸ್ಥಾನದಿಂದ ಹೊರಟು ಬೆಳಗಿನ ೮ ಗಂಟೆಗೆ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ ನೂರಾರು ಭಕ್ತರು ಕಾಲ್ನಡಿಯಿಂದ ಹೊತ್ತು ತಂದ ವಿವಿಧ ಬಗೆಯ ಹೂ,ಹಾರಗಳಿಂದ ಪುಷ್ಪಾಲಂಕಾರಗೊಂಡನು. ಇದನ್ನು ಹೂ ಮುಡಿಯುವುದು ಎಂದೇ ಕರೆಯಲಾಗುತ್ತದೆ. ನಂತರ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರು ಮುಂಬರುವ ಭವಿಷ್ಯದ ಕುರಿತಾಗಿ ಹೇಳಿಕೆಗಳು ಹೇಳಲ್ಪಟ್ಟವು.
ನಂತರ ರಾವುತರಾಯನ ಬಂಡಿ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬನ್ನಿ ಮಹಾಕಾಳಿ ವೃಕ್ಷಕ್ಕೆ ತೆರಳಿ ಬನ್ನಿ ಮುಡಿದು ಮಲ್ಲಯ್ಯನ ದೇವಸ್ಥಾನ ತಲುಪಿತು. ಆನಂತರ ರಾವುತರಾಯ-ಗಂಗಿಮಾಳಮ್ಮರ ಸಾಂಪ್ರದಾಯಿಕ ಮದುವೆಯ ರೂಪಕ ಜರುಗಿತು. ಸತತ ಐದು ದಿನಗಳ ಕಾಲ ಜರುಗುವ ಜಾತ್ರಾ ಮಹೋತ್ಸವದ ಮೊದಲ ದಿನ ರಾವುತರಾಯನು ಮಲ್ಲಯ್ಯನ ದೇವಸ್ಥಾನದಲ್ಲಿ ಆಸೀನನಾಗುವುದರೊಡನೆ ಜಾತ್ರೆಗೆ ಚಾಲನೆ ದೊರಕಿತು. ಜಾತ್ರೆಯ ಮೊದಲ ದಿನ ಆಗಮಿಸಿದ ಅಸಂಖ್ಯಾತ ಭಕ್ತರಿಗೆ ವಿವಿಧ ಭಕ್ತರಿಂದ ಅನ್ನ ಸಂತರ್ಪಣೆ ಜರುಗಿತು.
ಕಾರಣಿಕರ ಹೇಳಿಕೆಗಳು
“ಕೆಂಪು ಕಾಳ ನಾಲ್ಕು ಮೂಲಿಗಿ ಸಮ ಮಾಡುದರಾಗ ಒಂದು ಮೂಲಿ ಕಸರ ಉಳಿತು. ಬಿಳಿ ಕಾಳು ಮೇಲಾಯಿತು. ಕಡಲೆ,ಗೋಧಿ ಬೆನ್ನಹತ್ತಿತ್ತು, ಹತ್ತಿ ಒಳಗ ಬಂಗಾರ ಕಡೆ ಒಗದಿನಿ. ಎಲ್ಲರೂ ನನ್ನ ಸಿಂಹಾಸನ ಮುಟ್ಟಾಂಗ ಆಯಿತು. ನನ್ನ ಸಿಂಹಾಸನ ಜ್ವಾಕಿ. ಚಿತ್ತಿ ಮಳೆ ಒಂದು ಬಾರಿ ಕೊಡತೀನಿ. ಧರ್ಮ, ಕರ್ಮ ತೂಕಾ ಮಾಡುದರಾಗ ಕರ್ಮ ಹೆಚ್ಚಾಯಿತು. ಕರಿತಲಿ ಮಾನವನಿಗಿ ಎಷ್ಟು ಹೇಳಿದ್ರು ಬುದ್ಧಿ ಬರಲಿಲ್ಲ. ನಾ ಅಂದಾವನ ನಡಾ ಮುರಿತೀನಿ. ಹೊಳ್ಳಿ ಹೋಗುದರಾಗ ಮಳಿ, ಬೇಳಿ ಕುಲಸ ಮಾಡಿ ಹೇಳತೀನಿ, ಬಂಡಿ ಎಳೆಯುವವರು ಜ್ವಾಕೀ” ಎಂದು ಹೇಳಲಾಯಿತು.

