ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ | ಈ ಅನ್ಯಾಯದ ವಿರುದ್ದ ಜಾತಿ-ಧರ್ಮ, ಪಕ್ಷ-ಪಂಥದ ಭೇದವಿಲ್ಲದೆ ದನಿ ಎತ್ತಿ | ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ‘ಕರ್ನಾಟಕವು ಒಕ್ಕೂಟ ವ್ಯವಸ್ಥೆಯೆಡೆಗೆ ತನಗಿರುವ ಎಲ್ಲ ಗೌರವವನ್ನು ಉಳಿಸಿಕೊಂಡೇ, ತನ್ನ ನ್ಯಾಯಯುತ ಪಾಲನ್ನು ಪಡೆಯಲು ಹೇಗೆ ಮುಂದುವರೆಯಬೇಕೆನ್ನುವ ಚರ್ಚೆ ಸಾರ್ವಜನಿಕವಾಗಿ ನಡೆಯಬೇಕಿದೆ. ಇಂತಹ ರಚನಾತ್ಮಕ ಚರ್ಚೆ ವಿಜಯದಶಮಿಯ ಶುಭದಿನದಿಂದಲೇ ಶುರುವಾಗಲಿ. ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಕನ್ನಡಿಗರೆಲ್ಲರೂ ದನಿ ಎತ್ತಬೇಕಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದ್ದಾರೆ.
ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕೇಂದ್ರದ ಎನ್‍ಡಿಎ ಸರಕಾರ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡುತ್ತಾ ಬಂದಿರುವ ಅನ್ಯಾಯಕ್ಕೆ ಇತ್ತೀಚಿನ ತೆರಿಗೆ ಪಾಲಿನ ಹಂಚಿಕೆಯ ವಿವರಗಳೇ ಸಾಕ್ಷಿ. 28ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂ.ಬಿಡುಗಡೆಗೊಳಿಸಿರುವ ಕೇಂದ್ರ ಸರಕಾರ ಕರ್ನಾಟಕಕ್ಕೆ ನೀಡಿರುವುದು ಕೇವಲ ರೂ.6,498 ಕೋಟಿ. ಈ ಅನ್ಯಾಯದ ವಿರುದ್ದ ಜಾತಿ-ಧರ್ಮ, ಪಕ್ಷ-ಪಂಥದ ಭೇದವಿಲ್ಲದೆ ದನಿ ಎತ್ತುವ ಶಪಥವನ್ನು ಪ್ರತಿಯೊಬ್ಬ ಕನ್ನಡಿಗನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಇಂತಹದ್ದೊಂದು ಪ್ರಮಾಣ ವಚನ ಸ್ವೀಕಾರಕ್ಕೆ ಅನ್ಯಾಯದ ವಿರುದ್ಧ ನ್ಯಾಯದ ಗೆಲುವಿನ ಸಂಕೇತವಾದ ವಿಜಯದಶಮಿಯ ಶುಭ ದಿನ ಸಾಕ್ಷಿಯಾಗಲಿ. ಕರ್ನಾಟಕವನ್ನು ಕಡೆಗಣಿಸುವಂತಹ ಅನ್ಯಾಯವನ್ನು ನಾವೇನು ಮಾಡಿದ್ದೇವೆ? ಎಂದು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನು ಕೇಂದ್ರವನ್ನು ಕೇಳಬೇಕಾಗಿದೆ. ಬಿಮಾರು ರಾಜ್ಯಗಳೆಂದೇ ಕುಖ್ಯಾತಿ ಪಡೆದಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ ರೂ.31,962ಕೋಟಿ, ಬಿಹಾರಕ್ಕೆ ರೂ.17,921ಕೋಟಿ, ಮಧ್ಯಪ್ರದೇಶಕ್ಕೆ ರೂ.13,987 ಕೋಟಿ ಮತ್ತು ರಾಜಸ್ತಾನಕ್ಕೆ ರೂ.10,737 ಕೋಟಿಯಷ್ಟು ತೆರಿಗೆ ಪಾಲನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಅಭಿವೃದ್ದಿ ಪಥದಲ್ಲಿ ಹಿಮ್ಮುಖವಾಗಿ ಸಾಗುತ್ತಿರುವ ಈ ರಾಜ್ಯಗಳಿಗಾಗಿ ಕನ್ನಡಿಗನ ಬೆವರ ಗಳಿಕೆ ಯಾಕೆ ಪೋಲಾಗಬೇಕು ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ.17.93, ಬಿಹಾರಕ್ಕೆ 10.05, ರಾಜಸ್ತಾನಕ್ಕೆ 6.02 ಮತ್ತು ಮಧ್ಯಪ್ರದೇಶಕ್ಕೆ 7.85ರಷ್ಟು ಪಾಲು ನೀಡಿದರೆ, ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲು ಕೇವಲ ಶೇ.3.64 ಮಾತ್ರ. ತೆರಿಗೆ ಹಂಚಿಕೆಗಾಗಿ ನಿಗದಿ ಪಡಿಸಲಾಗಿರುವ ಮಾನದಂಡದಲ್ಲಿಯೇ ಕೇಂದ್ರ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ. ಅಭಿವೃದ್ಧಿಶೀಲ ರಾಜ್ಯವನ್ನು ಶಿಕ್ಷಿಸಿ, ದುರಾಡಳಿತ ನಡೆಸುತ್ತಿರುವ ರಾಜ್ಯಗಳನ್ನು ಪುರಸ್ಕರಿಸುವ ತೆರಿಗೆ ಹಂಚಿಕೆ ಮಾನದಂಡವನ್ನೇ ಬದಲಾಯಿಸಬೇಕೆಂದು ನಾವು ಒತ್ತಾಯಿಸುತ್ತಲೇ ಬಂದಿದ್ದರೂ ಕೇಂದ್ರ ಸರಕಾರ ಕಿವುಡಾಗಿದೆ ಎಂದು ಟೀಕಿಸಿದ್ದಾರೆ.

” ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇ.5ರಷ್ಟಿದ್ದರೂ ದೇಶದ ಜಿಡಿಪಿಗೆ ಕರ್ನಾಟಕದ ಶೇ.8.4ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್‍ಟಿ ಸಂಗ್ರಹದಲ್ಲಿ ಸತತವಾಗಿ ಕರ್ನಾಟಕ ಎರಡನೆ ಸ್ಥಾನದಲ್ಲಿದೆ. ಇನ್ನು ಜಿಎಸ್‍ಟಿ ಸಂಗ್ರಹದ ಬೆಳೆವಣಿಗೆ ದರವನ್ನು ಗಮನಿಸಿದರೆ ಶೇ.17ರ ಸಾಧನೆಯ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ. ವಿಪರ್ಯಾಸವೆಂದರೆ ಈ ಪ್ರಮಾಣದಲ್ಲಿ ಜಿಎಸ್‍ಟಿ ಹಣವನ್ನು ಕೇಂದ್ರಕ್ಕೆ ಸಂಗ್ರಹಿಸಿ ನೀಡಿದರೂ ಇದರಿಂದ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ಪಾಲು ಮಾತ್ರ. ಜಿಎಸ್‍ಟಿಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕವು 2017-18ರಿಂದ 2023-24ರ ವರೆಗೆ ಸುಮಾರು 59,274 ಕೋಟಿ ರೂ.ಹಣವನ್ನು ಕಳೆದುಕೊಂಡಿದೆ.”
– ಸಿದ್ದರಾಮಯ್ಯ
ಮುಖ್ಯಮಂತ್ರಿಗಳು, ಕರ್ನಾಟಕ

