ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾದ್ಯಂತ, ಎಲ್ಲ ತಾಲೂಕಿನ ಸಾರ್ವಜನಿಕರ, ಸಂಘ-ಸಂಸ್ಥೆಗಳ, ದೇವಸ್ಥಾನಗಳ, ಸರ್ಕಾರಿ, ಸರ್ಕಾರೇತರ ಹಾಗೂ ರೈತರ ಆಸ್ತಿಗಳು/ಜಮೀನುಗಳನ್ನು ಉತಾರೆಯಲ್ಲಿ ವಕ್ಫ ಆಸ್ತಿಯೆಂದು ನಮೂದಿಸಲು ವಕ್ಫ ಸಚಿವರ ಮೌಖಿಕ ಆದೇಶವನ್ನು ಜಾರಿಗೊಳಿಸಿ ನೋಟೀಸ್ ಕಳುಹಿಸಲಾಗಿದೆ. ಹೀಗಾಗಿ ತಕ್ಷಣ ನೋಟಿಸ್ ಪಡೆದ ಪ್ರತಿಯೊಬ್ಬರೂ ತಮ್ಮ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸುವುದನ್ನು ತಪ್ಪಿಸಲು, ತಮಗೆ ನೀಡಲಾದ ನೋಟೀಸ್ ಹಾಗು ಕಾಗದ ಪತ್ರಗಳೊಂದಿಗೆ, ಇದೇ ಅಕ್ಟೋಬರ್ ೧೫ ರಂದು ಬೆಳಿಗ್ಗೆ ೧೦.೩೦ಕ್ಕೆ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಗುಡಿ ಹತ್ತಿರ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ವಿನಂತಿಸಿದ್ದಾರೆ.
ಈ ಬೃಹತ್ ಪ್ರತಿಭಟನೆ ನಗರ ಶಾಸಕರಾದ ಬಸನಗೌಡ ಪಾಟೀಲ (ಯತ್ನಾಳ), ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯಲಿದ್ದು, ಇದು ಪ್ರತಿಯೊಬ್ಬ ಸನಾತನ ಹಿಂದು ನಾಗರಿಕರ, ರೈತರ ಆಸ್ತಿಯ ಕಬಳಿಕೆಯ ಕುತಂತ್ರವಾಗಿದ್ದು, ಇದರ ಮೇಲೆ ನಾವು ಕಾನೂನುಬದ್ಧ ಹೋರಾಟದ ಜೊತೆಗೆ, ದೈಹಿಕ, ಮಾನಸಿಕವಾಗಿ ಉಗ್ರ ಹೋರಾಟ ಮಾಡಿ ನಮ್ಮ ನಮ್ಮ ಆಸ್ತಿಗಳನ್ನು ನಮ್ಮ ಮುಂದಿನ ಪೀಳಿಗೆಗಾಗಿ, ಕುಟುಂಬಕ್ಕಾಗಿ ಉಳಿಸಿಕೊಳ್ಳಬೇಕಾಗಿದೆ.
ಇಲ್ಲದಿದ್ದರೆ, ಮುಂದೆ ನಮ್ಮ ಆಸ್ತಿಗಳನ್ನು ಕಳೆದುಕೊಳ್ಳಬೇಕಾಗಿರುವದರಿಂದ, ಈ ಅವೈಜ್ಞಾನಿಕ ವಕ್ಫ ಕಾಯ್ದೆ ರದ್ದತಿಗಾಗಿ, ಉತಾರೆ ಎಂಟ್ರೀಯನ್ನು ವಿರೋಧಿಸಿ, ಸರ್ವರೂ ಈ ಹೋರಾಟದಲ್ಲಿ ತಮ್ಮ ಕಾಗದ ಪತ್ರಗಳೊಂದಿಗೆ ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮಸ್ಥರು, ಮುಖಂಡರು, ಸನಾತನ ಹಿಂದು ಸಂಘಟನೆಗಳು, ಮಠಾಧೀಶರು, ಸಂಘ ಸಂಸ್ಥೆಯವರು, ದೇವಸ್ಥಾನಗಳ ಸಮಿತಿಯವರು ಹಾಗೂ ಪಕ್ಷಾತೀತವಾಗಿ ಪ್ರತಿಯೊಬ್ಬರು ಭಾಗವಹಿಸಲು ವಿನಂತಿಸಿದ್ದಾರೆ.
