ವಕ್ಫ್ ಹಾಗೂ ರಾಜ್ಯ ಸರ್ಕಾರದಿಂದ ಆಗುತ್ತಿರುವ ಅನ್ಯಾಯ, ಅಕ್ರಮ, ಅನೀತಿ, ಅಕೃತ್ಯಗಳನ್ನು ಖಂಡಿಸಿ ಅ.೧೫ರಂದು ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಶೇ ೫೦ ಕ್ಕಿಂತ ಹೆಚ್ಚು ಆಸ್ತಿ ಒತ್ತುವರಿ ಆಗಿದೆ ಅಂತ ನೂರಾರು ವರ್ಷಗಳಿಂದ ಇಲ್ಲಿನ ರೈತರು ಉಳುತ್ತಿರುವ ಭೂಮಿಯನ್ನು ನೋಟೀಸ್ ನೀಡಿ ವಕ್ಫ್ ಸುಪರ್ಧಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆಯಂತೆ. ಈಗಾಗಲೇ, ರೈತರಿಗೆ, ಖಾಸಗಿ ವ್ಯಕ್ತಿಗಳಿಗೆ ನೋಟೀಸು ನೀಡಿದ್ದು ಪ್ರಕ್ರಿಯೆ ಶುರುವಾಗಿದೆಯೆಂದು ಮಾಧ್ಯಮಗಳು ವರದಿ ಮಾಡಿದ್ದು ಇದು ಅಮಾನವೀಯ ಎಂದು ಶಾಸಕ ಬಸನಗೌಡ ಯತ್ನಾಳ ತಿಳಿಸಿದ್ದಾರೆ.
ಶನಿವಾರ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು, ೩೦-೪೦ ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ. ದೇಶದ ಬೆಳವಣಿಗೆಗೆ ಕಿಂಚಿತ್ತೂ ಕೊಡುಗೆಯಿಲ್ಲದ ವಕ್ಫ್ ಇಲಾಖೆಗೆ ರೈತರು ಭೂಮಿ ನೀಡಬೇಕು ಎಂದು ನೋಟೀಸು ನೀಡಿ ತನ್ನ ಸುಪರ್ಧಿಗೆ ತೆಗೆದುಕೊಳ್ಳುವುದು ಅನ್ನದಾತನಿಗೆ ಮಾಡುವ ಅನ್ಯಾಯ. ಜಾತಿ, ಮತ, ಕುಲ ನೋಡದೆ ಎಲ್ಲರಿಗೂ ಅನ್ನ ನೀಡುವವನ ಭೂಮಿಯೇ ಕಿತ್ತುಕೊಂಡು ಯಾವುದೋ ಒಂದು ಸಮುದಾಯದ ಅಭಿವೃದ್ಧಿಗೆ ದೇಶದ ಸಂಪತ್ತನ್ನು ಬಿಟ್ಟು ಕೊಡಬೇಕು ಎನ್ನುವುದು ಅತಾರ್ಕಿಕವಾಗಿದೆ. ೩೦-೪೦ ವರ್ಷಗಳಲ್ಲಿ ಇರದ ಭೂ ವ್ಯಾಜ್ಯ ಧುತ್ತನೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಉದ್ಭವಿಸುತ್ತಿರುವುದು ಗಮನಾರ್ಹ.
ವಿಜಯಪುರದಲ್ಲಿರುವ ಪೊಲೀಸ್ ಕಟ್ಟಡಗಳೂ ನಮ್ಮದೂ ಎಂದು ವಕ್ಫ್ ಹೇಳಿದೆ. ಈ ರೀತಿ ಸಾರ್ವಜನಿಕರಿಗೆ ಕಟ್ಟಿರುವ ಕಟ್ಟಡಗಳು, ಸರ್ಕಾರೀ ಕಚೇರಿಗಳು, ರೈತರ ಭೂಮಿಗಳನ್ನು ಬಿಟ್ಟುಕೊಡಬೇಕು ಎಂದು ಹೇಳುವ ನಿರಂಕುಶ ಪ್ರಭುತ್ವದಲ್ಲಿ ನಮ್ಮ ದೇಶ ಇಲ್ಲ. ಈ ದೇಶದ ಸಂಪತ್ತಿನ ಮೇಲೆ ಎಲ್ಲರಿಗೂ ಸಮಾನವಾದ ಹಕ್ಕಿದೆ. ೩೦-೪೦ ವರ್ಷಗಳಲ್ಲಿ ಇಲ್ಲದ ಸಮಸ್ಯೆ ಈಗೇಕೆ. ಅಷ್ಟಕ್ಕೂ, ವಕ್ಫ್ ನಿಂದ ಸಮಾಜಕ್ಕೆ ಉಪಯೋಗ ಏನಿದೆ? ಅಸಲಿಗೆ, ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲೇ ಇಲ್ಲದ ಕಾನೂನುಗಳು ಇಲ್ಲೇಕೆ ?
ಈ ದೇಶದ ಬೆನ್ನೆಲುಬಾದ ರೈತರ ಭೂಮಿ ನಮ್ಮದು ಅಂತ ಹೇಳಿ ಅವರಿಗೆ ನೋಟೀಸು ನೀಡಿ ಅವರಿಗೆ ಮಾನಸಿಕವಾಗಿ ಜರ್ಜರಿತರಾಗಿ ಮಾಡುತ್ತಿರುವ ವಕ್ಫ್ ಬೋರ್ಡ್ ನ ಕ್ರಮ ಅಮಾನವೀಯವಾಗಿದೆ. ರೈತನಿದ್ದರೆ ದೇಶ ಎಂಬುದು ಇವರಿಗೆ ಇನ್ನೂ ಅರ್ಥವಾಗಿಲ್ಲ.
ಈ ಹಿಂದೆ ಮುಸಲ್ಮಾನ ದೊರೆಗಳು ನಮ್ಮ ದೇಶವನ್ನು ಲೂಟಿ ಹೊಡೆದ ರೀತಿಯಲ್ಲೇ, ವಕ್ಫ್ ಬೋರ್ಡ್ ಸರ್ಕಾರ ಹಾಗೂ ಸರ್ಕಾರೇತರ ಆಸ್ತಿ ನಮ್ಮದು ಎಂದು ಹೇಳುತ್ತಿದೆ. ದೇಶದ ಸಂಪನ್ಮೂಲದ ಮೇಲೆ ಎಲ್ಲರಿಗೂ ಸಮಾನ ಹಕ್ಕಿದೆ. ಇದು ರೈತರಿಗೂ ಅನ್ವಯವಾಗುತ್ತದೆ.
ವಕ್ಫ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಇದೆ ಅಕ್ಟೋಬರ್ ೧೫, ಮಂಗಳವಾರ ದಂದು ನಮ್ಮ ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ವಕ್ಫ್ ಹಾಗೂ ರಾಜ್ಯ ಸರ್ಕಾರದಿಂದ ಆಗುತ್ತಿರುವ ಅನ್ಯಾಯ, ಅಕ್ರಮ, ಅನೀತಿ, ಅಕೃತ್ಯಗಳನ್ನು ಪಕ್ಷಾತೀತವಾಗಿ, ಧರ್ಮಾತೀತವಾಗಿ ಪ್ರತಿಭಟಿಸಲಿದ್ದೇವೆ. ವಿಜಯಪುರದ ಪ್ರಜ್ಞಾವಂತ ನಾಗರೀಕ ಬಂಧುಗಳು, ರೈತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

