ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಟಾಟಾ ಸಮೂಹದ ಮುಖ್ಯಸ್ಥ ರತನ ಟಾಟಾ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಮುಖಂಡರು ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಬಸವೇಶ್ವರ ಸೇವಾ ಸಮಿತಿ ಸದಸ್ಯ, ನಿವೃತ್ತ ಶಿಕ್ಷಕ ಎಂ.ಜಿ.ಆದಿಗೊಂಡ ಮಾತನಾಡಿ, ಭಾರತದ ಹೆಮ್ಮೆಯ ಪುತ್ರರಲ್ಲಿ ಒಬ್ಬರಾಗಿದ್ದ ರತನ ಟಾಟಾ ಅವರು ಮಧ್ಯಮ ವರ್ಗದ ಜನರ ಆಶಾಕಿರಣವಾಗಿದ್ದರು. ದೇಶದ ಕಲ್ಯಾಣಕ್ಕಾಗಿ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಇವರು ತಮ್ಮ ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಜೊತೆಗೆ ದೇಶದ ಉದ್ಯಮ ವಲಯವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರವಾಗಿದ್ದಾರೆ. ಇವರ ನಿಧನದಿಂದ ದೇಶಕ್ಕೆ ತುಂಬಾ ನಷ್ಟವಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಗಣ್ಣ ಕಲ್ಲೂರ, ಬಸವರಾಜ ಕೋಟಿ, ಶೇಖರ ಗೊಳಸಂಗಿ, ಬಬಲಕಿಶೋರ ಅಗರವಾಲ, ಶೇಖರಗೌಡ ಪಾಟೀಲ, ಅನಿಲ ಅಗರವಾಲ, ರವಿ ರಾಠೋಡ, ಶಂಕರಗೌಡ ಪಾಟೀಲ, ಸಂಗಯ್ಯ ಕಾಳಹಸ್ತೇಶ್ವರಮಠ, ಶಿವನಗೌಡ ಗುಜಗೊಂಡ, ಸಂಕನಗೌಡ ಪಾಟೀಲ, ಸಂಗಮೇಶ ಪಟ್ಟಣಶೆಟ್ಟಿ, ಮಹಾಂತೇಶ ಹೆಬ್ಬಾಳ ಇತರರು ಇದ್ದರು.

