ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತ, ಮೆಗಾ ಮಾರುಕಟ್ಟೆ ಹತ್ತಿರ, ರಾಣಿ ಚನ್ನಮ್ಮ ವೃತ್ತದಲ್ಲಿರುವ ಅಂಗಡಿಯವರು ಪಾದಚಾರಿ(ಪುಟ್ಪಾತ್) ರಸ್ತೆ ಮೇಲೆ ಅತಿಕ್ರಮಿಸಿದ ಜಾಗೆಯನ್ನು ತೆರವು ಗೊಳಿಸುವ ಕಾರ್ಯಾಚರಣೆಯು ಪುರಸಭೆಯಿಂದ ಗುರುವಾರ ಬೆಳ್ಳಂಬೆಳಗ್ಗೆ ೭ ಗಂಟೆಗೆ ಆರಂಭವಾಗಿ ಮಧ್ಯಾನ್ಹ ಸುಮಾರು ೧ ಗಂಟೆಯವರೆಗೂ ನಡೆಯಿತು.
ಈ ತೆರವು ಕಾರ್ಯಾಚರಣೆಯ ನಡೆಯುವ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತೆರವು ಕಾರ್ಯಾಚರಣೆ ವೀಕ್ಷಿಸಿ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ ಮಾಹಿತಿ ಪಡೆದುಕೊಂಡು ರಸ್ತೆಯಲ್ಲಿ ಅತಿಕ್ರಮಿಸಿದ ಜಾಗೆಯನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು.
ಪಟ್ಟಣದ ಬಸವೇಶ್ವರ ವೃತ್ತ, ಮೆಗಾ ಮಾರುಕಟ್ಟೆ ಹತ್ತಿರ, ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಕೆಲ ಅಂಗಡಿಕಾರರು ಪಾದಚಾರಿ(ಪುಟ್ಪಾತ್) ರಸ್ತೆ ಮೇಲೆ ಮೆಟ್ಟಿಲು ನಿರ್ಮಿಸಿದ್ದನ್ನು, ಅಂಗಡಿಗಳ ಮುಂಭಾಗ ಹಾಕಲಾಗಿದ್ದ ಪತ್ರಾಸ್, ಕೆಲ ಅಂಗಡಿಗಳ ಬೋರ್ಡ್ಗಳನ್ನು ತೆರವು ಗೊಳಿಸಲಾಯಿತು. ತೆರವು ಕಾರ್ಯಾಚರಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವರಿಂದ ವಿರೋಧ ವ್ಯಕ್ತವಾದಾಗ, ಪಾದಚಾರಿ ರಸ್ತೆಯನ್ನು ಅತಿಕ್ರಮಿಸುವದು ಕಾನೂನು ರೀತಿ ಸರಿಯಲ್ಲ. ಅತಿಕ್ರಮಿಸಿದ ಜಾಗೆಯನ್ನು ತೆರವು ಗೊಳಿಸುವ ಕಾರ್ಯಾಚರಣೆ ನಡೆಸಲಾಗುವುದು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಹೇಳಿದರು.
ಮುಂದಿನ ದಿನಗಳಲ್ಲಿ ಮುದ್ದೇಬಿಹಾಳ ರಸ್ತೆಯಲ್ಲಿ ಮಿನಿವಿಧಾನಸೌಧದವರೆಗೂ, ತೆಲಗಿ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ತೆರವು ಕಾರ್ಯಾಚರಣೆಯನ್ನು ದಸರಾ ಹಬ್ಬದ ನಂತರ ನಡೆಸಲಾಗುವದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ತೆರವು ಕಾರ್ಯಾಚರಣೆಯಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿಐ ಗುರುಶಾಂತ ದಾಶ್ಯಾಳ, ಪಿಎಸ್ಐ ಐ.ಎಂ.ದುಂಡಸಿ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಅಭಿಯಂತರರಾದ ಸಂತೋಷ ಗಿಡ್ಡಸಣ್ಣನವರ, ಮಹಾದೇವ ಜಂಬಗಿ, ಆರೋಗ್ಯ ನಿರೀಕ್ಷಕರಾದ ವಿಜಯ ವಂದಾಲ, ಮಹೇಶ ಹಿರೇಮಠ, ಪುರಸಭೆಯ ಸಿಬ್ಬಂದಿ, ಪೌರಕಾರ್ಮಿಕರು, ಹೆಸ್ಕಾಂ ಇಲಾಖೆಯ ಸಿಬ್ಬಂದಿ ಇತರರು ಇದ್ದರು.
ಈಗಾಗಲೇ ವಿಜಯಪುರ ರಸ್ತೆ, ಬಸವೇಶ್ವರ ವೃತ್ತ ಸೇರಿದಂತೆ ವಿವಿಧೆಡೆ ಪಾದಚಾರಿ ರಸ್ತೆಯ ಮೇಲಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆಯನ್ನು ಪುರಸಭೆಯಿಂದ ನಡೆದಿರುವುದನ್ನು ಸ್ಮರಿಸಿಕೊಳ್ಳಬಹುದು.
ಸಾರ್ವಜನಿಕ ಗ್ರಂಥಾಲಯದ ಜಾಗೆಗೆ ಡಿಸಿ ಭೇಟಿ
ತೆರವು ಕಾರ್ಯಾಚರಣೆ ವೀಕ್ಷಿಸಿದ ನಂತರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪಟ್ಟಣದ ಲಕ್ಷ್ಮೀ ನಗರದ ಹತ್ತಿರವಿರುವ ಅಂಬಿಗರ ಚೌಡಯ್ಯ ವೃತ್ತ ಸಮೀಪವಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣವಾಗುವ ಜಾಗೆಯನ್ನು ವೀಕ್ಷಿಸಿದರು.
ನಂತರ ಜಿಲ್ಲಾಧಿಕಾರಿಗಳು ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡುವಾಗ ಕಟ್ಟಡದ ಮುಂಭಾಗ ಜಾಗೆಯನ್ನು ಬಿಟ್ಟು ವ್ಯವಸ್ಥಿತವಾಗಿ ಗ್ರಂಥಾಲಯ ಕಟ್ಟಡವನ್ನು ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ವಿವಿಧ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಮಾಹಿತಿ ಪಡೆದುಕೊಂಡರು.

