ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮಾತೃಭಾಷೆಯಲ್ಲಿ ಮಾತನಾಡುವುದನ್ನು ಕಲಿಯುವುದು ಅತ್ಯಗತ್ಯ. ಮಾತೃಭಾಷೆಯನ್ನು ಸಾಮಾನ್ಯವಾಗಿ ಆತ್ಮದ ಭಾಷೆ ಎಂದು ಪರಿಗಣಿಸಲಾಗುತ್ತದೆ. ಒಬ್ಬರ ಸಂಸ್ಕೃತಿ, ಪರಂಪರೆ ಮತ್ತು ವೈಯಕ್ತಿಕ ಅನುಭವಗಳ ಸಾರವನ್ನು ಒಳಗೊಂಡಿದೆ ಎಂದು ಶಿಲ್ಪಾ ಕುದರಗೊಂಡ ಹೇಳಿದರು.
ಪಟ್ಟಣದ ಹೂಗಾರ ಲೇಔಟ್‌ನಲ್ಲಿರುವ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂದಗಿ ಹಾಗೂ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ನವರಾತ್ರಿ ಉತ್ಸವ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮಾತೃಭಾಷೆ ನಮ್ಮ ತುಟಿಗಳಲ್ಲಿ ನೃತ್ಯ ಮಾಡುವ ಮೊಟ್ಟ ಮೊದಲ ಭಾಷೆ. ನಮ್ಮ ಅಸ್ಮಿತೆಗೆ ಆಂತರಿಕವಾಗಿ ನಂಟು ಹೊಂದಿದೆ ಎಂದರು.
ಈ ವೇಳೆ ಜನಪದ ವಿದ್ವಾಂಸೆ ಶಿವಲೀಲಾ ಮುರಾಳ ಮಾತನಾಡಿ, ಮಾತೃ ಭಾಷೆ ಎಂದರೆ ಮಗು ಜನನದಿಂದಲೇ ಕಲಿಯುವ ಮೊದಲ ಭಾಷೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳೊಂದಿಗೆ ಮಾತೃಭಾಷೆಯಲ್ಲಿಯೇ ಮಾತನಾಡುವ, ಕಥೆ ಹೇಳುವ ಮತ್ತು ಪದ್ಯ ಕಲಿಸುವ ವ್ಯವಧಾನವನ್ನು ಕಲ್ಪಿಸಿಕೊಳ್ಳಬೇಕು. ಸಂಸ್ಕೃತಿಯೊಂದಿಗೆ ಬೆರೆತಿರುವ ಮಾತೃಭಾಷೆಯು ಶಾಲೆಯಲ್ಲಿ ಕಲಿಕೆಯ ಭಾಷೆಯೂ ಆದರೆ ಮಹುಮುಖ ಅನುಕೂಲಗಳಿವೆ. ಮಕ್ಕಳಲ್ಲಿ ಚಿಂತನಾ ಸಾಮರ್ಥ್ಯ, ಸಂವೇದನಾಶೀಲತೆ, ಸಕಾರಾತ್ಮಕ ಮನೋಭಾವ ರೂಪುಗೊಳ್ಳುವಂತೆ ಮಾಡುತ್ತದೆ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕ ಶರಣಬಸವ ಲಂಗೋಟಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷೆ ಕುಸುಮಾ ಯಾಳಗಿ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಸುನಂದಾ ಯಂಪುರೆ, ಶಿಕ್ಷಕಿ ಶೋಭಾ ಚಿಗರಿ, ಅಂಬಿಕಾ ಪಾಟೀಲ, ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಆನಂದ ಶಾಬಾದಿ, ಪಂಡಿತ ಯಂಪುರೆ, ಎಂ.ಎ.ಗೊಟಗುಣಕಿ, ಶರಣಮ್ಮ ನಾಯಕ, ಸಕ್ಕುಬಾಯಿ ಡಾಂಗಿ, ಸಂಜೀವಕುಮಾರ ಡಾಂಗೆ, ವಿಕಾಸ ಚೌರ, ಅಕ್ಷಯ ದೀಕ್ಷಾ, ಸುಮಾ ಬಿರಾದಾರ, ರೂಪಾ, ಪ್ರಗತಿ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.

