ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಆದೇಶ ಖಂಡಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರ ನೇತೃತ್ವದಲ್ಲಿ ಪ್ರತಿಭಟನೆ ಗೆ ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ವಕ್ಫ್ ಆಸ್ತಿ ಖಾತೆ ಬದಲಾವಣೆ ಹಾಗೂ ಪ್ಲ್ಯಾಗಿಂಗ್ ಮಾಡುವಂತೆ ಅಧಿಕಾರಿಗಳ ಮೇಲೆ ಕೂಗಾಡಿ, ೪೫ ದಿನಗಳಲ್ಲಿ ಪೂರ್ಣಗೊಳಿಸುವಂತೆ ಒತ್ತಡ ಹಾಕಿರುವುದನ್ನು ಖಂಡಿಸಿ, ಕೇಂದ್ರದ ಮಾಜಿ ಸಚಿವರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರ ನೇತೃತ್ವದಲ್ಲಿ, ಅ.೧೫ ರ ಮಂಗಳವಾರ ಬೆಳಿಗ್ಗೆ ೧೦.೩೦ಕ್ಕೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ಚೌಕ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಕಾನೂನು ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು.
ದೇಶಕ್ಕೆ ಮಾರಕವಾದ ಮತ್ತು ಅವೈಜ್ಞಾನಿಕ ವಕ್ಫ್ ಮಸೂದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಈಗಾಗಲೇ ಮುಂದಾಗಿದ್ದು, ಅದಕ್ಕಾಗಿ ವಕ್ಫ್ ತಿದ್ದುಪಡಿ ಮಸೂದೆ ಜಂಟಿ ಸಂಸತ್ ಸದನ ಸಮಿತಿ ರಚಿಸಲಾಗಿರುವ ಈ ಸಂದರ್ಭದಲ್ಲಿ, ವಕ್ಫ್ ಸಚಿವರು ಮೌಖಿಕವಾಗಿ ಅಧಿಕಾರಿಗಳಿಗೆ ಬೆದರಿಸಿ, ಒತ್ತಡ ಹಾಕಿ ೪೫ ದಿನದೊಳಗಾಗಿ ಖಾತೆಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವಂತೆ ಒತ್ತಡ ಹಾಕಿದನ್ನು ಖಂಡಿಸಿ ಮತ್ತು ಯಾವುದೇ ಅಧಿಕಾರಿಗಳು ಮೌಖಿಕವಾದ ಸಚಿವರ ಆದೇಶವನ್ನು ಪಾಲಿಸಿ ಕಾನೂನು ಬಾಹಿರವಾಗಿ ಯಾವುದೇ ಖಾತೆಯಲ್ಲಿ ವಕ್ಫ್ ಎಂದು ನಮೂದಿಸುವುದನ್ನು ವಿರೋಧಿಸಿ, ಜಿಲ್ಲೆಯಲ್ಲಿರುವ ಸಾವಿರಾರು ಎಕರೆ ಖಾಸಗಿಯವರ ಜಮೀನು, ಸಂಘ-ಸಂಸ್ಥೆಗಳ ಜಮೀನು, ಸರ್ಕಾರಿ ಒಡೆತನದ ಜಮೀನುಗಳನ್ನು ವಕ್ಪ್ ಖಾತೆಯಲ್ಲಿ ವಕ್ಫ್ ಎಂದು ನಮೂದು ಮಾಡದಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕಾರಣ ಈ ಬೃಹತ್ ಪ್ರತಿಭಟನೆಯಲ್ಲಿ ನಗರವೂ ಸೇರಿದಂತೆ ಜಿಲ್ಲೆಯ ಸಮಸ್ತ ಸನಾತನ ಹಿಂದೂ ಧರ್ಮಿಯರು, ಧಾರ್ಮಿಕ ಮುಖಂಡರು, ಮಠಾಧೀಶರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹೋರಾಟ ಯಶಸ್ವಿಗೊಳಿಸಲು ಶಾಸಕರು ವಿನಂತಿಸಿದ್ದಾರೆ.