ಉದಯರಶ್ಮಿ ದಿನಪತ್ರಿಕೆ
ಇಂಡಿ: ಶಾಸಕ ಯಶವಂತರಾಯಗೌಡರ ಹುಟ್ಟುಹಬ್ಬ ಆಚರಣೆಯ ನೆಪದಲ್ಲಿ ಹಬ್ಬದೂಟ ಮಾಡಲು ನಾವೆಲ್ಲಾ ಸೇರಿಲ್ಲ. ಈ ನೆಪದಲ್ಲಿ ತಾಲ್ಲೂಕಿನ ಬಡವರ ಸೇವೆ ಮಾಡಲು ಸೇರಿದ್ದೇವೆ ಎಂದು ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್ ಹೇಳಿದರು.
ಗುರುವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ, ಉಚಿತ ಆರೋಗ್ಯ ತಪಾಸಭೆ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ೨ ವರ್ಷಗಳ ಹಿಂದೆ ಶಾಸಕರ ಹುಟ್ಟುಹಬ್ಬದ ನಿಮಿತ್ಯ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದ ಮೂಲಕ ತಾಲ್ಲೂಕಿನ ೨೨ ಜನ ಹೃದಯ ರೋಗಿಗಳಿಗೆ ಉಚಿತವಾಗಿ ಹೃದಯ ರೋಗ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೇವೆ. ಈ ಸಲ ರಕ್ತ ಸಂಗ್ರಹಣೆ ನಮ್ಮ ಉದ್ದೇಶವಾಗಿದ್ದು, ಶಾಸಕರ ೫೭ನೇ ಹುಟ್ಟುಹಬ್ಬಕ್ಕೆ ೫೭ ಜನ ಯುವಕರು ರಕ್ತದಾನ ಮಾಡಲು ಕಾಯುತ್ತಿದ್ದಾರೆ. ನೂರಾರು ಜನ ತಮ್ಮ ರೋಗ ತಪಾಸಣೆಗೆ ಬಂದಿದ್ದಾರೆ. ಅವರೆಲ್ಲರಿಗೂ ರೋಗ ತಪಾಸಣೆ ಮಾಡಿಸುವದಲ್ಲದೇ ಅವರಿಗೆ ಅಗತ್ಯ ಔಷಧೋಪಚಾರ ನೀಡಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಶಾಸಕರ ೫೭ ನೇ ಹುಟ್ಟುಹಬ್ಬದ ನಿಮಿತ್ಯ ೫೭ ಜನ ಯುವಕರು ರಕ್ತದಾನ ಮಾಡಿದರು. ೨೬೮ ಜನ ತಮ್ಮ ವಿವಿಧ ರೋಗಗಳ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದ ಅಂಗವಾಗಿ ವಿವಿಧ ಜಾತಿಯ ೫೦೦ ಹಣ್ಣಿನ ಸಸಿಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು

