ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಂದವಾಗಿರುವುದು ಮುಖ್ಯವಲ್ಲ ಆನಂದವಾಗಿರುವುದು ಮುಖ್ಯ. ಬದಲಾವಣೆ ನನ್ನಿಂದ ಪ್ರಾರಂಭವಾದಾಗ ಮಾತ್ರ ಅದು ಕಾರ್ಯಸಾಧ್ಯವಾಗುತ್ತದೆ ಎಂದು ಮಹಿಳಾ ವಿವಿಯ ಎನ್.ಎಸ್.ಎಸ್ ಕೋಶದ ಸಂಯೋಜಕ ಪ್ರೊ.ಎ.ಬಿ.ಸುರಪುರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ “ಸ್ವಚ್ಛತಾ ಹಿ ಸೇವಾ” ಅಂಗವಾಗಿ ಸ್ವಚ್ಛತೆ, ಯೋಗ ಮತ್ತು ಆರೋಗ್ಯ ಎಂಬ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ರೋಗಗಳ ನಿರ್ಮೂಲನೆಗಾಗಿ ನಾವೆಲ್ಲರೂ ಯೋಗ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಜ್ಯೋತಿ ಉಪಾಧ್ಯಾಯ ಮಾತನಾಡಿ, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮತ್ತು ಸ್ವಚ್ಛತೆ ಬಹು ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಪ್ರೊ.ಯು.ಕೆ. ಕುಲಕರ್ಣಿ ಮಾತನಾಡಿ, ವರ್ತಮಾನದ ಒತ್ತಡದ ಬದುಕಿನಲ್ಲಿ ಯಾವ ರೀತಿ ಬದುಕು ಕಂಡುಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಸವಿತಾ ನಿರೂಪಿಸಿದರು. ಅಮೃತಾ ಸ್ವಾಗತಿಸಿದರು ಹಾಗೂ ಪವಿತ್ರಾ ವಂದಿಸಿದರು.
