ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಗುಡಿಗಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂಗಮೇಶ ನವಲಿ ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕು. ಇಲ್ಲದಿದ್ದಲ್ಲಿ ಲೋಕಾಯುಕ್ತರಿಗೆ ದೂರು ನೀಡಿ ಉಪನಿರ್ದೇಶಕರ ಕಚೇರಿಯ ಎದುರು ಧರಣಿ ನಡೆಸುತ್ತೇವೆ ಎಂದು ಗ್ರಾಮಸ್ಥರು ಉಪನಿರ್ದೇಶಕರಿಗೆ ದೂರಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥ ಅಪ್ಪುಗೌಡ ಮಾಡಗಿ ಕಳೆದ ಕೆಲವು ದಿನಗಳ ಹಿಂದೆ ತಾಲೂಕಿನ ಗುಡಿಹಾಳ ಗ್ರಾಮದ ಪ್ರಭಾರಿ ಶಿಕ್ಷಕ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಟ್ಟಿಲ್ಲ ಅಂತಾ ದಿಢೀರ ಧರಣಿ ನಡೆಸಿದ್ದರು. ಈ ಬಗ್ಗೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಭೇಟಿ ನೀಡಿ ಮುಖ್ಯಾಧಿಕಾರಿಯ ಆರೋಪ ಸಾಬೀತಾದ ಬಗ್ಗೆ ವರದಿ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ವರದಿ ನೀಡಿದ್ದು ಉಪನಿರ್ದೇಶಕರು ಮಾತ್ರ ಪ್ರಭಾರ ಮುಖ್ಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಕಾರಣ ನಾವೇ ಖುದ್ದಾಗಿ ಕಚೇರಿಗೆ ಭೇಟಿ ನೀಡಿ ಮನವಿ ನೀಡಿದ್ದೇವೆ. ಕೂಡಲೇ ಕ್ರಮ ವಹಿಸದಿದ್ದಲ್ಲಿ ಕಚೇರಿಯ ಎದುರು ಹೋರಾಟ ನಡೆಸುತ್ತೇವೆ ಎಂದರು.
ಪ್ರಭಾರ ಮುಖ್ಯ ಶಿಕ್ಷಕ ಶಾಲೆಗೆ ಮದ್ಯಾಹ್ನ ೧೨ಕ್ಕೆ ಬಂದು ೨ಗಂಟೆಗೆ ತೆರಳುತ್ತಾರೆ, ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡೋದಿಲ್ಲ, ಎಲ್‌ಸಿ ನೀಡಲು ಹಣಕ್ಕೆ ಪೀಡಿಸುತ್ತಾರೆ, ಮಹಾನ್ ಪುರುಷರ ಜಯಂತಿಗಳನ್ನು ಶಾಲೆಯಲ್ಲಿ ಆಚರಿಸುವದಿಲ್ಲ. ಸೇರಿದಂತೆ ಹಲವು ಆರೋಪಗಳನ್ನು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮನವಿ ಪತ್ರಕ್ಕೆ ಶಾಲೆಯ ಭೂ ದಾನಿ ಪ್ರಭುಗೌಡ ಪಾಟೀಲ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಾಂತಗೌಡ ಮಾಡಗಿ, ಸದಸ್ಯರಾದ ಭೀಮನಗೌಡ ದೋರನಹಳ್ಳಿ, ಇಬ್ರಾಹಿಂ ಶೇಖ ಗ್ರಾಮಸ್ಥರಾದ ಮರೆಪ್ಪ ತಾಳಿಕೋಟಿ, ಮಲ್ಲು ಲಿಂಗದಳ್ಳಿ, ಯಮನಪ್ಪ ಮಾದರ ಸಹಿ ಹಾಕಿದ್ದಾರೆ.

