ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಪ್ರಸಿದ್ಧ ಲೇಖಕಿ, ರಾಜಕೀಯ ಕಾರ್ಯಕರ್ತೆ ಮತ್ತು ಉಪನ್ಯಾಸಕಿಯಾಗಿ ಜಗತ್ತಿನಾದ್ಯಂತ ಲಕ್ಷಾಂತರ ವಿಕಲಚೇತನರಿಗೆ ಧೈರ್ಯದ ಸಂಕೇತವಾಗಿರುವ ಹೆಲೆನ್ ಕೆಲ್ಲರ್ ಜೀವನದ ಹಾದಿ ತುಂಬಾ ಕಠಿಣವಾಗಿತ್ತು. ಅವರು ಕೇವಲ ೧೯ ತಿಂಗಳ ಮಗುವಾಗಿದ್ದಾಗ ತೀವ್ರ ಜ್ವರದ ಕಾರಣದಿಂದಾಗಿ ತಮ್ಮ ದೃಷ್ಟಿ ಮತ್ತು ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡರು. ಇಂಥ ಪರಿಸ್ಥಿತಿಯಲ್ಲಿ ಅವರಿಗೆ ಮಾತು ಕಲಿಯುವುದು ಸಹ ಅಸಾಧ್ಯವಾಗಿತ್ತು. ಸುತ್ತಲಿನ ಸಮಾಜದೊಂದಿಗೆ ಸಂಪರ್ಕವೇ ಇಲ್ಲದೇ ಕತ್ತಲೆಯಲ್ಲಿ ಮುಳುಗುವಂತಾಗಿತ್ತು. ಹೆಲೆನ್ ಕೆಲ್ಲರ್ ಜಾಗದಲ್ಲಿ ಬೇರೆ ಯಾರೂ ಇದ್ದಿದ್ದರೆ ಇಡೀ ಜೀವನವನ್ನು ನಿರಾಸೆಯಿಂದ ಕಳೆದುಬಿಡುತ್ತಿದ್ದರು. ಆದರೆ ಹೆಲನ್ ಕೆಲ್ಲರ್ ಹಾಗೆ ಮಾಡಲಿಲ್ಲ. ತಮ್ಮ ಶಿಕ್ಷಕಿ ಸಹಾಯದಿಂದ ಬ್ರೈಲ್ ಲಿಪಿಯನ್ನು ಕಲಿತರು. ವಿಶ್ವವಿದ್ಯಾಲಯದಿಂದ ಕಲೆ ಪ್ರದರ್ಶನದಲ್ಲಿ ಪದವಿ ಪಡೆದ ಮೊದಲ ಕಿವುಡ ಮತ್ತು ಕುರುಡು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೆಲ್ಲ ಸಾಧ್ಯವಾಗಿದ್ದು ಅವರ ನಿರಂತರ ಪರಿಶ್ರಮ ಮತ್ತು ಅಪ್ರತಿಮ ಧೈರ್ಯದಿಂದ.
ಧೈರ್ಯದ ಹಾದಿ
ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಇಲ್ಲವೇ ಫೇಲ್ ಆಗುತ್ತೇನೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿಗಳ ಲಕ್ಷಣ. ಇದಕ್ಕೆ ವಿರುದ್ಧವಾಗಿ ಕೆಲವರು ಎಂಥ ಸಮಸ್ಯೆ ಬಂದರೂ ಒಂಚೂರು ಹೆದರಿಕೊಳ್ಳದೇ ಮುಖದಲ್ಲಿ ಮಂದಹಾಸ ಬೀರುತ್ತಾರೆ. ‘ನಾನು ಧೈರ್ಯದಿಂದ ಎದುರಿಸುತ್ತೇನೆ.’ ಎಂಬ ಗುಂಡಿಗೆಯನ್ನು ಹೊಂದಿರುತ್ತಾರೆ. ಇನ್ನು ಕೆಲವರು ತಮ್ಮಲ್ಲಿರುವ ವಿಶೇಷ ಗುಣಗಳಿಂದಲೇ ಧೈರ್ಯವನ್ನು ಒಗ್ಗೂಡಿಸಿಕೊಳ್ಳುತ್ತಾರೆ. ನಮ್ಮಲ್ಲಿ ಅನೇಕರಿಗೆ ಧೈರ್ಯ ಎಂಬುದು ಕೇವಲ ಯುದ್ಧಭೂಮಿ ಇಲ್ಲವೇ ರಾಜನಿಗೆ, ವೀರ ಸೈನಿಕರಿಗೆ ಮಾತ್ರ ಸೀಮಿತವಾದುದು ಎಂಬ ತಪ್ಪು ಕಲ್ಪನೆಯಿದೆ. ಆದರೆ ಅದು ದೈನಂದಿನ ಜೀವನದಲ್ಲಿ ನಾವು ತೆಗೆದುಕೊಳ್ಳುವ ಸಣ್ಣ ನಿರ್ಧಾರಗಳ ಮೂಲಕವೂ ಧೈರ್ಯ ವ್ಯಕ್ತವಾಗುತ್ತದೆ. ಪರೀಕ್ಷೆಯಲ್ಲಿ ನಕಲು ಮಾಡಿ ಸುಲಭವಾಗಿ ಪಾಸಾಗುವ ಅವಕಾಶವಿದ್ದರೂ ಫೇಲಾದರೂ ಪರವಾಗಿಲ್ಲ ಪ್ರಾಮಾಣಿಕತೆಯಿಂದ ಬರೆಯುತ್ತೇನೆ ಎಂಬುದು ಧೈರ್ಯದ ಹಾದಿಯೇ ಸರಿ. ನಮ್ಮಿಂದ ತಪ್ಪಾದಾಗ ಬೇರೆಯವರನ್ನು ದೂಷಿಸದೇ ಹೌದು ನನ್ನಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳುವುದು ಸಹ ಧೈರ್ಯವೇ. ಧೈರ್ಯ ಎಂಬುದು ಹುಟ್ಟಿನಿಂದ ಬರುವ ಗುಣವಲ್ಲ. ಬದಲಿಗೆ ಅದನ್ನು ನಿತ್ಯ ಜೀವನದಲ್ಲಿ ಅಭ್ಯಾಸ ಮಾಡಿಕೊಳ್ಳಬಹುದು.
ಹೆದರಿಕೆಯನ್ನು ಮೀರಿ, ಸವಾಲುಗಳನ್ನು ಸ್ವೀಕರಿಸಿ, ಜೀವನದಲ್ಲಿ ಯಶಸ್ಸು ಸಾಧಿಸಲು ಧೈರ್ಯ ಅತ್ಯಗತ್ಯ ನಿಮ್ಮಲ್ಲಿ ಧೈರ್ಯವನ್ನು ವೃದ್ಧಿಸಿಕೊಳ್ಳಲು ಭಯವನ್ನು ಎದುರಿಸಲು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಕೆಲವು ಸರಳ ಹಾಗೂ ಪ್ರಾಯೋಗಿಕ ಮಾರ್ಗಗಳು ಇಲ್ಲಿವೆ.

ಸ್ಪೂರ್ತಿ
ಧೈರ್ಯವೆಂದರೆ ಭಯ ಇಲ್ಲದಿರುವುದು ಅಲ್ಲ. ಬದಲಿಗೆ ಭಯವಿದ್ದರೂ ಅದನ್ನು ಮೀರಿ ಮುಂದುವರಿಯುವುದು. ಯಾವುದರ ಭಯವಿದೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಿ ಭಯದಿಂದ ದೂರ ಓಡುವುದನ್ನು ಬಿಟ್ಟು ಅವುಗಳನ್ನು ಧೈರ್ಯದಿಂದ ಎದುರಿಸುವ ಮನಸ್ಥಿತಿಯನ್ನು ಬೆಳಿಸಿಕೊಳ್ಳಬೇಕು. ಭಯವು ನಮ್ಮನ್ನು ಜೀವಂತವಾಗಿಯೇ ಸಾಯಿಸುತ್ತದೆ. ಆದ್ದರಿಂದ ನಿಮ್ಮ ಸುತ್ತಲಿರುವ ಧೈರ್ಯಶಾಲಿ ವ್ಯಕ್ತಿಗಳನ್ನು ಗಮನಿಸಿ ಮತ್ತು ಅವರಿಂದ ಸ್ಪೂರ್ತಿ ಪಡೆಯಿರಿ. ನಿಮ್ಮ ಗುರಿಗಳನ್ನು ಸಾಧಿಸಲು ಶ್ರಮಿಸುತ್ತಿರುವವರ ಜೊತೆ ಒಡನಾಟ ಇಟ್ಟುಕೊಳ್ಳುವುದು ನಿಮ್ಮ ಮಾನಸಿಕ ಬಲವನ್ನು ಹೆಚ್ಚಿಸುತ್ತದೆ. ಅದು ನಿಮ್ಮಲ್ಲಿನ ಆತ್ಮಸ್ಥೈರ್ಯವನ್ನು ಗಟ್ಟಿಗೊಳಿಸುತ್ತದೆ. ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸುತ್ತದೆ.
ಅವಕಾಶಗಳೆಂದು ತಿಳಿ
ಸವಾಲುಗಳನ್ನು ಅಡೆತಡೆಗಳೆಂದು ನೋಡದೆ ಅವುಗಳನ್ನು ಕಲಿಯಲು ಮತ್ತು ಬೆಳೆಯಲು ಇರುವ ಅವಕಾಶಗಳೆಂದು ಭಾವಿಸಬೇಕು. ಆಗ ಹೆದರುವ ಹಿಂಜರಿಯುವ ಮನಸ್ಸಿಗೆ ತನ್ನಿಂದ ತಾನೆ ಧೈರ್ಯ ಬರುತ್ತದೆ. ಎಲ್ಲ ಸಂದರ್ಭದಲ್ಲೂ ನಮಗೆ ಅನುಕೂಲಕರ ಸನ್ನಿವೇಶಗಳಿರುವುದಿಲ್ಲ ಎಂಬುದನ್ನು ಮರೆಯಬಾರದು. ಅನಾನುಕೂಲತೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ನಮಗೆ ಬೇಕಾದ ಅನುಕೂಲಕರ ವ್ಯವಸ್ಥೆಯನ್ನು ಮಾಡಿಕೊಳ್ಳುವುದನ್ನು ಕಲಿಯಬೇಕು. ಹೊಸ ಸವಾಲುಗಳನ್ನು ತೆರೆದ ಎದೆಯಿಂದ ಸ್ವಾಗತಿಸಬೇಕು. ದೊಡ್ಡ ಸವಾಲುಗಳನ್ನು ಎದುರಿಸಲು ಒಮ್ಮೆಲೇ ಆಗುವುದಿಲ್ಲ. ಆದ್ದರಿಂದ ಸಣ್ಣ ಗುರಿಗಳನ್ನು ಇಟ್ಟುಕೊಂಡು ಅವುಗಳನ್ನು ಸಾಧಿಸುವತ್ತ ಚಿತ್ತ ಹರಿಸಬೇಕು. ಆ ಸಣ್ಣ ಗೆಲುವುಗಳು ನಿಮ್ಮಲ್ಲಿ ಧೈರ್ಯವನ್ನು ತುಂಬುತ್ತವೆ. ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ನೀವು ಮುಟ್ಟುವ ಪ್ರತಿಯೊಂದು ಹಂತವೂ ನಿಮ್ಮ ಧೈರ್ಯವನ್ನು ಇಮ್ಮಡಿಗೊಳಿಸುತ್ತದೆ. ಇತಿಹಾಸದಲ್ಲಿ ಅಳಿಸಲಾಗದ ಮುದ್ರೆ ಒತ್ತಿದ ಸಾಧಕರು ಸವಾಲುಗಳನ್ನು ಅವಕಾಶಗಳನ್ನಾಗಿ ಬಳಸಿಕೊಂಡವರೆ ಎಂಬುದನ್ನು ಮರೆಯುವಂತಿಲ್ಲ.
ನಿಭಾಯಿಸುವ ಶಕ್ತಿ

ಜೀವನದಲ್ಲಿ ಎಲ್ಲ ಸಮಯದಲ್ಲೂ ಖುಷಿಯಾಗಿರಲು ಸಾಧ್ಯವಿಲ್ಲ. ಕೆಲ ಸಂದರ್ಭ ಸಮಸ್ಯೆಗಳು ಎದುರಾಗುತ್ತವೆ. ಅದಕ್ಕೆ ಧೃತಿಗೆಡದೇ ಧೈರ್ಯದಿಂದ ಎದುರಿಸಿದಾಗ ಯಶಸ್ಸು ಸಿಗುತ್ತದೆ. ಸಮಸ್ಯೆ ಎದುರಿಸಲಾಗದೇ ಹಿಂಜರಿಯುವುದು ಜೀವನವನ್ನು ಮತ್ತಷ್ಟು ಕಠಿಣಗೊಳಿಸುತ್ತದೆ. ಮಾನಸಿಕವಾಗಿ ಧೈರ್ಯವಂತರಾಗಿರುವವರು ಯಾವುದೇ ಸಮಸ್ಯೆಗಳನ್ನು ನಿರಾಯಾಸವಾಗಿ ನಿಭಾಯಿಸುವ ಶಕ್ತಿಯನ್ನು ಪ್ರದರ್ಶಿಸುತ್ತಾರೆ. ‘ನಿಮ್ಮನ್ನು ನೀವು ದುರ್ಬಲರು ಎಂದು ಭಾವಿಸುವುದೇ ದೊಡ್ಡ ಪಾಪ.’ ಎಂದಿದ್ದಾರೆ ಸ್ವಾಮೀ ವಿವೇಕಾನಂದರು. ‘ಕಷ್ಟಗಳಿಗೆ ಹೆದರಿ ಹಿಮ್ಮೆಟ್ಟುವವರಿಗೆ ಅಬ್ದುಲ್ ಕಲಾಂ ಅವರು ಹೀಗೆ ಹೇಳಿದ್ದಾರೆ..’ಕಷ್ಟಗಳು ನಿಮ್ಮನ್ನು ನಾಶಮಾಡಲು ಬರುವುದಿಲ್ಲ, ಬದಲಿಗೆ ನಿಮ್ಮಲ್ಲಿರುವ ಅಡಗಿರುವ ಶಕ್ತಿಯನ್ನು ಹೊರತರಲು ಬರುತ್ತವೆ.’ ಎಂಬ ಸೂಕ್ತ ಸೂಕ್ತಿಯನ್ನು ಸದಾ ನೆನಪಿನಲ್ಲಿಡಬೇಕು. ಕಷ್ಟವೆಂದು ದೂರುತ್ತ ಕುಳಿತುಕೊಳ್ಳದೇ ಅದನ್ನು ಹಿಮ್ಮೆಟ್ಟುವುದು ಹೇಗೆ ಎಂದು ಯೋಚಿಸಬೇಕು. ನಿಮ್ಮ ಆಲೋಚನೆಗಳು ಪ್ರತಿಕ್ರಿಯೆಗಳು ಭಾವನೆಗಳ ಬಗ್ಗೆ ತಿಳಿಯಬೇಕು. ಮತ್ತು ಸಾವಧಾನತೆಯನ್ನು ಅಭ್ಯಸಿಸಬೇಕು.
ಇಚ್ಛಾಶಕ್ತಿ
ದೊಡ್ಡ ದೊಡ್ಡ ಕನಸುಗಳನ್ನು ಕಾಣುವುದು ಸುಲಭ. ಆದರೆ ಅವುಗಳನ್ನು ನನಸಾಗಿಸುವ ಹಾದಿಯಲ್ಲಿ ಬರುವ ಕಷ್ಟಗಳನ್ನು ಎದುರಿಸುವುದು ತುಂಬಾ ಕಠಿಣ.. ಬಹಳ ಜನ ನನ್ನಲ್ಲಿ ಶಕ್ತಿಯಿಲ್ಲ ಎಂದು ಕೊರಗುತ್ತಾರೆ. ಆದರೆ ‘ಶಕ್ತಿ ಎನ್ನುವುದು ದೈಹಿಕ ಸಾಮರ್ಥ್ಯದಿಂದ ಬರುವುದಿಲ್ಲ, ಅದು ಅದಮ್ಯ ಇಚ್ಛಾಶಕ್ತಿಯಿಂದ ಬರುತ್ತದೆ.’ ಹೊರಗಿನಿಂದ ಎಷ್ಟೇ ಬಲಶಾಲಿಯಾಗಿದ್ದರೂ ಮನಸ್ಸಿನಲ್ಲಿ ಧೈರ್ಯ ಮತ್ತು ಇಚ್ಛಾಶಕ್ತಿ ಇಲ್ಲದಿದ್ದರೆ ಯಾವ ಕೆಲಸವೂ ಸಲೀಸಾಗುವುದಿಲ್ಲ. ಧೈರ್ಯ ಎನ್ನುವುದು ಯಾರೋ ಕೆಲವರಿಗೆ ಮಾತ್ರ ಸೀಮಿತವಾದ ಗುಣವಲ್ಲ. ಕುವೆಂಪು ಅವರ ವಾಣಿಯೊಂದು ಹೀಗಿದೆ. ‘ನಿನ್ನನ್ನು ನೀನು ನಂಬದಿದ್ದರೆ ಜಗತ್ತಿನಲ್ಲಿ ಬೇರೆ ಯಾರು ನಿನ್ನನ್ನು ನಂಬಲಾರರು.’ ಇಚ್ಛಾಶಕ್ತಿ ಇದ್ದರೆ ಯಾವುದೇ ದೌರ್ಬಲ್ಯವು ತಡೆಯಲು ಸಾಧ್ಯವಿಲ್ಲ. ಇಚ್ಛಾಶಕ್ತಿಯು ಎಂಥ ದೌರ್ಬಲ್ಯಗಳನ್ನು ಇಲ್ಲವಾಗಿಸಬಲ್ಲದು. ಅದು ಮನುಷ್ಯನನ್ನು ಶೂನ್ಯದಿಂದ ಶಿಖರಕ್ಕೆ ಕರೆದೊಯ್ಯುವ ಶಕ್ತಿ.
ನಿರ್ಧರಿಸಿ
ಸೋಲು ಗೆಲುವು ಇದ್ದದ್ದೇ. ಸೋತಾಗ ಕುಗ್ಗುವುದು ಗೆದ್ದಾಗ ಹಿಗ್ಗುವವರ ಕೈಯಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ ಛಲದಿಂದ ಗುರಿ ಮುಟ್ಟಲು ಶ್ರಮಿಸಿದರೆ ಯಶಸ್ಸು ತಾನೇ ಹುಡುಕಿಕೊಂಡು ಬರುತ್ತದೆ. ನಿರಂತರ ಅಭ್ಯಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ನೀವು ಖಂಡಿತವಾಗಿಯೂ ಧೈರ್ಯವನ್ನು ಗಳಿಸಬಲ್ಲಿರಿ. ಜೀವನದಲ್ಲಿ ಬಿದ್ದ ಜಾಗದಲ್ಲೇ ಎದ್ದು ಬರುವಂತಹ ಛಲವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕಷ್ಟದ ಸಂದರ್ಭ ಬಂದರೂ ಅದರಿಂದ ತಪ್ಪಿಸಿಕೊಳ್ಳಲು ನೋಡದೇ ಅದನ್ನು ಅರಿತುಕೊಂಡು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ನಿಮ್ಮಲ್ಲಿ ಸ್ವಾಭಿಮಾನವನ್ನು ಮತ್ತು ಧೈರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಕೊನೆ ಮಾತು
ಯಾವುದೇ ಹೊಸ ಕೆಲಸವನ್ನು ಆರಂಭಿಸುವಾಗ ಧೈರ್ಯ ಸಾಲುವುದಿಲ್ಲ. ಹಾಗಂತ ಪ್ರಯತ್ನಿಸುವುದನ್ನು ಬಿಟ್ಟುಬಿಡುವುದು ತಪ್ಪು. ಗುರಿಯ ಅರ್ಧ ವಿಜಯವು ಧೈರ್ಯದ ನಿರ್ಧಾರದಲ್ಲಿ ಅಡಗಿರುತ್ತದೆ. ಆರಂಭದಲ್ಲೇ ಹಿಂದೇಟು ಹಾಕಿದರೆ ಸೋಲು ನಿಶ್ಚಿತ. ಬದುಕಿನ ಸವಾಲುಗಳನ್ನು ಎದುರಿಸುತ್ತ ಹೋದಂತೆ ಧೈರ್ಯ ಬರುವುದು ಖಚಿತ. ಧೈರ್ಯದಿಂದ ಮುನ್ನುಗ್ಗಿದರೆ ಗೆಲುವು ಸುಲಭ. ಎದೆಯಲ್ಲಿ ಧೈರ್ಯದ ಕಿಡಿಯಿದ್ದರೆ ಜಯದ ಹಾದಿಯು ನಿಮ್ಮನ್ನು ತೆರೆದ ತೋಳಿನಿಂದ ಸ್ವಾಗತಿಸುತ್ತದೆ.


