ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ೧೨ ನೇ ಶತಮಾನದ ಅವಿರಳಜ್ಞಾನಿ ಚನ್ನಬಸವಣ್ಣನವರ ಕರಣ ಹಸಿಗೆಯಲ್ಲಿ ನಮ್ಮ ದೇಹದ ಪ್ರತಿಯೊಂದು ಅಂಗಗಳ ಬಗ್ಗೆ ವೈಜ್ಞಾನಿಕವಾಗಿ ನಿರೂಪಿಸಲಾಗಿದೆ. ಎಲ್ಲ ಧರ್ಮದವರಿಗೂ ಅನ್ವಯವಾಗುವ ಕರಣ ಹಸಿಗೆ ಅರಿತುಕೊಂಡರೆ ಎಲ್ಲರೂ ಆರೋಗ್ಯಕರವಾದ ಜೀವನ ನಡೆಸಲು ಪೂರಕವಾಗುತ್ತದೆ ಎಂದು ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಸಮೀಪವಿರುವ ಐತಿಹಾಸಿಕ ಹೋರಿಮಟ್ಟಿ ಗುಡ್ಡದಲ್ಲಿ ಇಂಗಳೇಶ್ವರ ಗ್ರಾಮದ ವಚನ ಶಿಲಾ ಮಂಟಪದ ಚನ್ನಬಸವ ಸ್ವಾಮೀಜಿಗಳಿಂದ ಹನ್ನೊಂದು ದಿನಗಳ ಕಾಲ ಜರುಗಿದ ಚನ್ನಬಸವಣ್ಣನವರ ಕರಣ ಹಸಿಗೆ ಪ್ರವಚನದ ಮುಕ್ತಾಯ ಸಮಾರೋಪದಂಗವಾಗಿ ಸೋಮವಾರ ಜರುಗಿದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕರಣ ಹಸಿಗೆ ಯಾವುದೇ ಜನಾಂಗ, ಯಾವುದೇ ಧರ್ಮಕ್ಕೆ ಸಿಮೀತವಾಗಿರದೇ ಎಲ್ಲ ಧರ್ಮ, ಜನಾಂಗದವರಿಗೆ ಅನ್ವಯವಾಗುತ್ತದೆ. ಇದು ಇಂದಿನ ವೈದ್ಯಕೀಯ, ವಿಜ್ಞಾನ ಲೋಕಕ್ಕೆ ಇಂದಿಗೂ ಸವಾಲಾಗಿದೆ ನಿಂತಿದೆ. ದೇಹದ ಪ್ರತಿಯೊಂದು ಭಾಗಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಕರಣ ಹಸಿಗೆಯಲ್ಲಿ ನಿರೂಪಿಸಲ್ಪಟ್ಟಿವೆ. ಇಂತಹ ಕರಣ ಹಸಿಗೆಯನ್ನು ಸಾಮಾನ್ಯ ಜನರಿಗೂ ತಿಳಿಯುವ ರೀತಿಯಲ್ಲಿ ಪ್ರವನಚನಗೈದಿರುವ ಹಿರಿಯ ಸ್ವಾಮೀಜಿಗಳಾದ ಚನ್ನಬಸವ ಸ್ವಾಮೀಜಿಗಳು ನಮಗೆ ತಿಳಿಸಿಕೊಟ್ಟಿದ್ದಾರೆ. ಇವರನ್ನು ಪಡೆದ ನಾವೆಲ್ಲರೂ ತುಂಬಾ ಭಾಗ್ಯಶಾಲಿಗಳು ಎಂದು ಹೇಳಿದರು.
ಚಡಚಣದ ವಿರಕ್ತಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ನಾಡಿಗೆ ಕೊಟ್ಟ ಕೊಡುಗೆಯನ್ನು ನಾವೆಂದೂ ಮರೆಯಬಾರದು. ವೈಜ್ಞಾನಿಕ ತಳಹದಿಯ ಮೇಲೆ ಹೊಸ ಆಲೋಚನೆಗಳನ್ನು ನಮಗೆಲ್ಲರಿಗೂ ಕೊಟ್ಟಿದ್ದಾರೆ. ಬಸವಣ್ಣನವರ ವಿಚಾರಗಳು ಮನುಕುಲಕ್ಕೆ ಇಂದು ತುಂಬಾ ಅಗತ್ಯವಿದೆ ಎಂದರು.
ಮಸಬಿನಾಳದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಬಸವೇಶ್ವರರ ವಿಚಾರಗಳನ್ನು ಕೇವಲ ಬಾಯಿ ಮಾತಿನಿಂದ ಹೇಳಿದರೆ ಸಾಲದು. ಅವುಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾಗಿ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಪ್ರವಚನಕಾರ, ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ ಮಾತನಾಡಿ, ಚನ್ನಬಸವಣ್ಣನವರು ಕೊಟ್ಟಿರುವ ಜ್ಙಾನವನ್ನು ಜಗತ್ತಿನಲ್ಲಿ ಯಾವ ದಾರ್ಶನಿಕರು ಇಂದಿಗೂ ನಮಗೆ ಕೊಡಲು ಸಾಧ್ಯವಾಗಿಲ್ಲ. ಚನ್ನಬಸವಣ್ಣನವರ ವಿಚಾರಗಳನ್ನು ನಮಗೆಲ್ಲ ತಿಳಿಸಲು ಸಹಾಯ ಮಾಡಿದ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರನ್ನು ನಾವು ಎಂದಿಗೂ ಮರೆಯಬಾರದು. ಶರಣರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಬೇಕೆಂದರು.
ವಿಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ನಿವೃತ್ತ ಶಿಕ್ಷಕ ಎಂ.ಜಿ.ಆದಿಗೊಂಡ ಮಾತನಾಡಿದರು. ಡಾ.ಮಹಾಂತೇಶ ಮಡಿಕೇಶ್ವರ, ಬಸಮ್ಮ ಹಂಜಗಿ, ಸಂಗಯ್ಯ ಕಾಳಹಸ್ತೇಶ್ವರಮಠ ಅವರು ತಮ್ಮ ಅನಿಸಿಕೆ ಹಂಚಿಕೆಕೊಂಡರು.
ವೇದಿಕೆಯಲ್ಲಿ ಪಡೇಕನೂರದ ಮಲ್ಲಿಕಾರ್ಜುನ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ ಇದ್ದರು. ಶರಣು ಬಸ್ತಾಳ ವಚನ ಪ್ರಾರ್ಥನೆ ಮಾಡುವ ಜೊತೆಗೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಪ್ರಭಾಕರ ಖೇಡದ, ಕೊಟ್ರೇಶ ಹೆಗ್ಡಾಳ, ಶರಣು ಬಸ್ತಾಳ, ವೀರಣ್ಣ ಮರ್ತುರ, ಪ್ರವಚನ ಕಾರ್ಯಕ್ರಮದಲ್ಲಿ ನಿತ್ಯ ದಾಸೋಹದ ಕಾರ್ಯ ನೆರವೇರಿಸಿದವರನ್ನು ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.

