ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಂದು ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಬುಧವಾರ ಸಾಯಂಕಾಲ ಆಗಮಿಸಿದ ಕನ್ನಡ ಜ್ಯೋತಿರಥಯಾತ್ರೆಗೆ ತಾಲ್ಲೂಕು ಆಡಳಿತ, ಪಟ್ಟಣ ಹಾಗೂ ತಾಲ್ಲೂಕು ಪಂಚಾಯಿತಿ, ಕಸಾಪ, ಕರವೇ, ಜಯಕರ್ನಾಟಕ, ದಸಂಸ, ಶಿಕ್ಷಕರ ಸಂಘ, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ, ಆರತಿ ಎತ್ತಿ ಮಾಲಾರ್ಪಣೆ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲಿಕಾರ ಮಾತನಾಡಿ, ಕನ್ನಡ ನೆಲ, ಜಲ, ಭಾಷೆಯ ಜಾಗೃತಿಗಾಗಿ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಜನರಲ್ಲಿ ಸಾಹಿತ್ಯಕ ಅಭಿಮಾನವನ್ನು ಮೂಡಿಸುವ ಅಂಗವಾಗಿ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸುತ್ತಿದೆ ಎಂದರು.
ತಹಶೀಲ್ದಾರ ಪ್ರಕಾಶ ಸಿಂದಗಿ, ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ಪ್ರಭುಗೌಡ ಬಿ.ಎಲ್ (ಚಬನೂರ), ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಸಿಂದಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ಮಾತನಾಡಿದರು.ನಂತರ ಕನ್ನಡ ಜ್ಯೋತಿ ರಥವನ್ನು ಮೊಹರೆ ಹಣಮಂತ್ರಾಯ ವೃತ್ತದವರೆಗೆ ಮೆರವಣಿಗೆ ಮಾಡಿ ನಂತರ ಬಿಳ್ಕೋಡಲಾಯಿತು.
ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್. ಎಸ್. ಬಾಗಲಕೋಟ, ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲಿಕಾರ, ಅಭಿಷೇಕ ಚಕ್ರವರ್ತಿ, ಸಂಗಪ್ಪಣ್ಣ ತಡವಲ್,ಪಿ.ಜಿ.ಹಿರೇಮಠ, ಎಸ್.ಎಸ್.ಸಾತಿಹಾಳ, ಸಂಗನಗೌಡ ಬಿರಾದಾರ, ಮುರ್ತುಜಾ ತಾಂಬೋಳಿ, ಶಿವರಾಜ ತಳವಾರ, ರೆಹಮಾನ್ ಕಣಕಾಲ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಇದ್ದರು.

