ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಂದಿನ ಪೀಳಿಗೆಗೆ ದೈಹಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಿ. ಎಸ್. ಬಗಲಿ ಹೇಳಿದ್ದಾರೆ.
ಬುಧವಾರ ಬಿ. ಎಲ್. ಡಿ. ಇ ಸಂಸ್ಥೆಯ ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಜಯಪುರ ನಗರ ವಲಯ ಬಿ.ಎಡ್ ಕಾಲೇಜುಗಳ ಅಂತರ್ ಕಾಲೇಜು ವ್ಹಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಬಿ.ಎಡ್ ವಿದ್ಯಾರ್ಥಿಗಳು ಶಿಕ್ಷಕ ವೃತ್ತಿಯ ಕಡೆಗೆ ಗಮನ ಹರಿಸುವುದರ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕವಾಗಿ ಸದೃಢರಾಗಲು ಇಂಥ ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಬಿ. ಎಲ್. ಡಿ. ಇ ಸಂಸ್ಥೆಯ ನಿರ್ದೇಶಕ ಮತ್ತು ದೈಹಿಕ ಶಿಕ್ಷಣ ಆಡಳಿತಾಧಿಕಾರಿ ಡಾ. ಎಸ್. ಎಸ್. ಕೋರಿ ಮಾತನಾಡಿ, ಇಂದಿನ ಯಾಂತ್ರಿಕ ಯುಗದಲ್ಲಿ ಜನರು ದೈಹಿಕ ಚಟುವಟಿಕೆಗಳ ಅಭಾವವನ್ನು ಎದುರಿಸುತ್ತಿದ್ದಾರೆ. ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯವಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಕ್ರೀಡಾ ಮನೋಭಾವ ಮತ್ತು ಉತ್ತಮ ವ್ಯಕ್ತಿತ್ವ ಬೆಳೆಯುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಬಿ. ವೈ. ಖಾಸನೀಸ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ, ಐ.ಕ್ಯೂ.ಎ.ಸಿ ಸಂಯೋಜಕ ಡಾ. ಎಂ. ಎಸ್. ಹಿರೇಮಠ, ಸಹ ಪ್ರಾಧ್ಯಾಪಕ ಡಾ. ಎಂ. ಬಿ. ಕೋರಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಎಸ್. ಪಿ. ಶೇಗುಣಿಸಿ, ಎಸ್. ಎಸ್. ಪಾಟೀಲ, ವಿಜಯಪುರ ನಗರದ ಎಂಟು ಶಿಕ್ಷಣ ಮಹಾವಿದ್ಯಾಲಯಗಳ ಪ್ರಾಚಾರ್ಯರು, ದೈಹಿಕ ನಿರ್ದೇಶಕರು, ಕ್ರೀಡಾಪಟುಗಳು, ಕಾಲೇಜಿನ ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.

