ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆ | ವಕ್ಫ್ ಆಸ್ತಿ ಖಾತೆ ಬದಲಾವಣೆ | ಫ್ಲ್ಯಾಗಿಂಗ್ ಕಾರ್ಯ ೪೫ ದಿನಗಳಲ್ಲಿ ಪೂರ್ಣಗೊಳಿಸಲು ಸಚಿವರ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಕ್ಫ್ ಆಸ್ತಿ ಖಾತೆ ಬದಲಾವಣೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರ ಜಿಲ್ಲೆಯ ಪ್ರಗತಿ ಕುಂಠಿತವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಮುಂದಿನ ಒಂದು ತಿಂಗಳೊಳಗಾಗಿ ವಕ್ಫ್ ಖಾತೆ ಬದಲಾವಣೆ, ಫ್ಲ್ಯಾಗಿಂಗ್ ಸೇರಿದಂತೆ ಸೂಕ್ತ ಪ್ರಗತಿ ಸಾಧಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಬಿ.ಜೆಡ್.ಜಮೀರ್‌ಅಹ್ಮದ ಖಾನ್ ಸೂಚಿಸಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಾದ್ಯಂತ ವಿರುವ ೨೧೪೮ ಆಸ್ತಿಗಳ ಪೈಕಿ ೧೦೯ ಆಸ್ತಿಗೆ ಸಂಬಂಧಿಸಿದಂತೆ ಮಾತ್ರ ಖಾತೆ ಬದಲಾವಣೆ ಮಾಡಲಾಗಿದ್ದು, ೨೦೩೯ ಖಾತೆ ಬದಲಾವಣೆ ಬಾಕಿ ಇದೆ. ಶೇ.೫.೦೭ ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಪ್ರಗತಿ ಕುಂಠಿತವಾಗಿದ್ದು, ಜಿಲ್ಲೆಯ ೧೦೮ ಆಸ್ತಿಗಳ ಫ್ಲ್ಯಾಗಿಂಗ್ ಸಹ ಬಾಕಿ ಉಳಿದಿದ್ದು, ಜಿಲ್ಲೆಯ ವಕ್ಫ್ ಅಧಿಕಾರಿಗಳು ಸಹ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸೂಕ್ತ ಸಮನ್ವಯತೆ ಸಾಧಿಸಿಕೊಂಡು ಖಾತೆ ಬದಲಾವಣೆ ಹಾಗೂ ಪ್ಲ್ಯಾಗಿಂಗ್ ಕಾರ್ಯದ ಅನುಸರಣೆ ಮಾಡಬೇಕು. ಮುಂದಿನ ೪೫ ದಿನಗಳೊಳಗಾಗಿ ಖಾತೆ ಬದಲಾವಣೆ ಹಾಗೂ ಫ್ಲ್ಯಾಗಿಂಗ್ ಕಾರ್ಯ ಪೂರ್ಣಗೊಳಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ತಾಲೂಕಿನ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಒಟ್ಟು ೧೦೯ ಖಾತೆ ಬದಲಾವಣೆಯಾಗಿದ್ದರೂ ಸಹ ೧೦೮ ಆಸ್ತಿಗಳ ಫ್ಲ್ಯಾಗಿಂಗ್ ಬಾಕಿ ಉಳಿದಿದೆ. ಖಾತೆ ಬದಲಾವಣೆಯಾದ ನಂತರ ಫ್ಲ್ಯಾಗಿಂಗ್ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ. ಖಾತೆ ಬದಲಾವಣೆ ಸಂದರ್ಭದಲ್ಲಿ ಮಾತ್ರ ಕೆಲವೊಂದು ತೊಂದರೆಗಳು ಬರಬಹುದು. ಖಾತೆ ಬದಲಾವಣೆ ನಂತರವೂ ಪ್ಲ್ಯಾಗಿಂಗ್ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯತನ ತೋರಿಸುತ್ತಿದೆ. ನಾನು ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ವಕ್ಫ್ ಹಾಗೂ ಮುಜರಾಯಿ ಇಲಾಖೆ ಕಾರ್ಯ ಅತಿ ಪುಣ್ಯದ ಕಾರ್ಯ ಈ ಕಾರ್ಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ವಕ್ಫ್ ಆಸ್ತಿ ಸಂರಕ್ಷಣೆಯಲ್ಲಿ ಅಧಿಕಾರಿಗಳ ಸಹಕಾರ ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಅವರು ಹೇಳಿದರು.
ನಿನ್ನೆ ವಿಜಯಪುರದಲ್ಲಿ ನಡೆದ ವಕ್ಫ್ ಅದಾಲತ್‌ನಲ್ಲಿ ವಕ್ಫ್ ಆಸ್ತಿಗಳ ಅತಿಕ್ರಮಣದ ೧೭ ಅರ್ಜಿಗಳು, ಖಬರಸ್ಥಾನ (ಸ್ಮಶಾನ)ಕ್ಕೆ ಸಂಬಂಧಿಸಿದ್ದು, ಖಾತೆ ಬದಲಾವಣೆಯ ೮೧ ಅರ್ಜಿಗಳು, ಸರ್ವೇ ಕಾರ್ಯಕ್ಕಾಗಿ ೨೫ ಅರ್ಜಿಗಳು ಸೇರಿದಂತೆ ಒಟ್ಟು ೩೩೦ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ೮೩ ಅರ್ಜಿಗಳು ಖಬರಸ್ತಾನ (ಸ್ಮಶಾನ) ಜಾಗ ಕುರಿತು ಅರ್ಜಿಗಳು ಬಂದಿದ್ದು, ವಿವಿಧ ತಾಲೂಕುಗಳಲ್ಲಿ ಅವಶ್ಯಕವಿರುವ ಸ್ಮಶಾನ ಜಮೀನಿಗೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆ ನಡೆಸಿ, ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿ ಮಾಡಿ, ಸ್ಮಶಾನಕ್ಕೆ ಜಮೀನು ಒದಗಿಸುವಂತೆ ಸೂಚಿಸಿದ ಅವರು, ಖಾಸಗಿ ಜಮೀನು ಖರೀದಿಯಲ್ಲಿ ಅನುದಾನದ ಸಮಸ್ಯೆಗಳು ಬಂದಲ್ಲಿ ನನ್ನ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಅವರು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ವಿವಿಧ ಸಚಿವರು, ಶಾಸಕರ ಸಭೆ, ಕೆಡಿಪಿ ಸಭೆಗಳಿಗೆ ಗೈರ ಹಾಜರಾಗುವ ಅಧಿಕಾರಿಗಳ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಅವರು ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಖಾತೆ ಸಚಿವರಾದ ಶಿವಾನಂದ ಪಾಟೀಲ ಅವರು ಮಾತನಾಡಿ, ಬಸವನಬಾಗೇವಾಡಿ ಮತಕ್ಷೇತ್ರದ ಹುಣಶ್ಯಾಳ-ದೇವರಗೆಣ್ಣೂರ ಗ್ರಾಮದ ಸ್ಮಶಾನ ಜಾಗೆ ಕುರಿತು ಪ್ರಸ್ತಾಪಿಸಿದಾಗ, ಅಧಿಕಾರಿಗಳು, ಈ ಗ್ರಾಮದ ಸ್ಮಶಾನ ಜಾಗದ ಕುರಿತು ನಿನ್ನೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ವಕ್ಫ್ ಖಾತೆ ಸಚಿವರು ಬರುತ್ತಿದ್ದಾರೆ ಎಂದು ಪ್ರಸ್ತಾವನೆ ಸಲ್ಲಿಸುವುದು ಸಮಂಜಸವಲ್ಲ ಎಂದ ಅವರು, ಕೂಡಲೇ ಸ್ಮಶಾನ ಜಾಗ ಒದಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ವಿಧಾನಪರಿಷತ್ ಸದಸ್ಯ ಅಬ್ದುಲ ಜಬ್ಬಾರ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಅನ್ವರಬಾಶಾ,ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಅದಾಲತ್‌ನಿಂದ ಜನರಲ್ಲಿ ಜಾಗೃತಿ
ಮುಖ್ಯಮಂತ್ರಿಗಳ ಆದೇಶದಂತೆ ನಾನು ರಾಜ್ಯದಾದ್ಯಂತ ಪ್ರವಾಸ ಮಾಡಿ ಅದಾಲತ್‌ಗಳನ್ನು ನಡೆಸುತ್ತಿದ್ದೇನೆ. ಕೇವಲ ನಾಮಕಾವಸ್ತೆ ಆದಾಲತ್‌ಗಳನ್ನು ಮಾಡಲಾಗುತ್ತಿಲ್ಲ. ಅದಾಲತ್‌ನಿಂದ ಜನರಲ್ಲಿ ತಿಳುವಳಿಕೆ- ಜಾಗೃತಿ ಮೂಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸುವ ಉದ್ದೇಶದಿಂದ ಅದಾಲತ್‌ಗಳನ್ನು ನಡೆಸಲಾಗುತ್ತಿದೆ. ಸರ್ಕಾರದ ಮೇಲೆ ಜನರು ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಜನರು ನಿರೀಕ್ಷೆ ಮಾಡುವುದು ಕೇವಲ ರಸ್ತೆ, ನೀರು, ವಿದ್ಯುತ್ ಇದನ್ನು ಸಹ ಒದಗಿಸಲು ಸಾಧ್ಯವಾಗಲಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಖಾತೆ ಬದಲಾವಣೆಯಾಗದ ೩೩೯ ವಕ್ಫ್ ಆಸ್ತಿಗಳು
ವಿಜಯಪುರ ತಾಲೂಕಿನಲ್ಲಿರುವ ೩೫೬ ವಕ್ಫ್ ಆಸ್ತಿಗಳ ಪೈಕಿ ೧೭ ಆಸ್ತಿಗಳಿಗೆ ಸಂಬಂಧಿಸಿದ ಖಾತೆ ಬದಲಾವಣೆ ಮಾಡಲಾಗಿದೆ, ೩೩೯ ಬಾಕಿ ಉಳಿದಿದೆ, ಅದರಂತೆ ಬಬಲೇಶ್ವರ ತಾಲೂಕಿನ ೧೪೨ ಆಸ್ತಿಗಳ ಪೈಕಿ ೮ ಖಾತೆಗಳ ಬದಲಾವಣೆಯಾಗಿದೆ, ೧೩೪ ಬಾಕಿ ಉಳಿದಿವೆ, ತಿಕೋಟಾ ತಾಲೂಕಿನ ೨೯೯ ಆಸ್ತಿಗಳ ಪೈಕಿ ೫ ಖಾತೆಗಳ ಬದಲಾವಣೆಯಾಗಿದೆ, ೨೯೪ ಬಾಕಿ ಉಳಿದಿವೆ. ಬಸವನಬಾಗೇವಾಡಿ ತಾಲೂಕಿನ ೧೩೩ ಆಸ್ತಿಗಳ ಪೈಕಿ ೧೫ ಬದಲಾವಣೆಯಾಗಿದ್ದು, ೧೧೮ ಬಾಕಿ ಇದೆ. ನಿಡಗುಂದಿ ತಾಲೂಕಿನ ೪೩ ಆಸ್ತಿಗಳ ಪೈಕಿ ೭ ಖಾತೆ ಬದಲಾವಣೆಯಾಗಿದ್ದು, ೩೬ ಬಾಕಿ ಇದೆ. ಕೊಲ್ಹಾರ ತಾಲೂಕಿನ ೬೯ ಆಸ್ತಿಗಳ ಪೈಕಿ ೩ ಖಾತೆಗಳ ಬದಲಾವಣೆಯಾಗಿದ್ದು, ೬೬ ಬಾಕಿ ಇದೆ. ಮುದ್ದೇಬಿಹಾಳ ತಾಲೂಕಿನ ೭೯ ಆಸ್ತಿಗಳ ಪೈಕಿ ೮ ಖಾತೆ ಬದಲಾವಣೆಯಾಗಿದ್ದು, ೭೧ ಬಾಕಿ ಇದೆ. ತಾಳಿಕೋಟೆ ತಾಲೂಕಿನ ೧೪೪ ಆಸ್ತಿಗಳ ಪೈಕಿ ೧೭ ಖಾತೆ ಬದಲಾವಣೆಯಾಗಿದ್ದು, ೧೨೭ ಬಾಕಿ ಇದೆ. ದೇವರಹಿಪ್ಪರಗಿ ತಾಲೂಕಿನ ೧೧೧ ಆಸ್ತಿಗಳ ಪೈಕಿ ಈವರೆಗೆ ಯಾವುದೇ ಖಾತೆ ಬದಲಾವಣೆಯಾಗಿರುವುದಿಲ್ಲ. ಸಿಂದಗಿ ತಾಲೂಕಿನ ೧೪೪ ಆಸ್ತಿಗಳ ಪೈಕಿ ಕೇವಲ ೧ ಖಾತೆ ಬದಲಾವಣೆಯಾಗಿದ್ದು, ೧೪೩ ಬಾಕಿ ಉಳಿದಿವೆ. ಆಲಮೇಲ ತಾಲೂಕಿನ ೪೦ ಆಸ್ತಿಗಳ ಪೈಕಿ ೭ ಖಾತೆ ಬದಲಾವಣೆಯಾಗಿದ್ದು, ೩೩ ಬಾಕಿ ಇವೆ. ಇಂಡಿ ತಾಲೂಕಿನ ೫೧೩ ಆಸ್ತಿಗಳ ಪೈಕಿ ೧೫ ಖಾತೆ ಬದಲಾವಣೆಯಾಗಿದ್ದು, ೪೯೮ ಬಾಕಿ ಇದೆ. ಚಡಚಣ ತಾಲೂಕಿನ ೭೫ ವಕ್ಫ್ ಆಸ್ತಿಗಳ ಪೈಕಿ ೬ ಆಸ್ತಿಗೆ ಸಂಬಂಧಿಸಿದ ಖಾತೆ ಬದಲಾವಣೆ ಮಾಡಲಾಗಿದ್ದು, ೬೯ ಆಸ್ತಿಗಳ ಖಾತೆ ಬದಲಾವಣೆ ಬಾಕಿ ಇದೆ ಎಂದು ಸಭೆಗೆ ಮಾಹಿತಿ ಒದಗಿಸಲಾಯಿತು.
ಸಿಂದಗಿ ತಾಪಂ ಇಒ ಅಮಾನತು
ಸಭೆಗೆ ಗೈರ ಹಾಜರಾಗಿರುವ ಸಿಂದಗಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಅಮಾನತ್ತುಗೊಳಿಸುವಂತೆ ಸಚಿವ ಜಮೀರಅಹ್ಮದ ಸೂಚಿಸಿದರು.

