ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮನುಷ್ಯನಿಗೆ ಭಕ್ತಿ ವಿನಯ ಕಲಿಸುತ್ತದೆ. ಭಕ್ತಿಯಿದ್ದರೆ ದೇವರು ಒಲಿಯುತ್ತಾನೆ. ಭಕ್ತಿಯಿದ್ದರೆ ಶ್ರೀಮಂತರಾಗಲು ಸಾಧ್ಯ. ಇದಕ್ಕಾಗಿ ಪ್ರತಿಯೊಬ್ಬರಲ್ಲಿ ಭಕ್ತಿ ಇರಬೇಕೆಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಅಗಸಿ ಆವರಣದಲ್ಲಿ ಗ್ರಾಮದ ಹಿರೇಮಠದ ಆನಂದದೇವರು ನೇತೃತ್ವದಲ್ಲಿ ಹನ್ನೆರಡು ದಿನಗಳ ಕಾಲ ಹಮ್ಮಿಕೊಂಡಿರುವ ಬಸವನಾಡ ನವರಾತ್ರೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಕಾರ್ಯಕ್ರಮ ಮುನ್ನ ಹಾನಗಲ್ಲ ಗುರು ಕುಮಾರೇಶ್ವರ ಶಿವಯೋಗಾಶ್ರಮದ ಅಡಿಗಲ್ಲು ನೆರವೇರಿಸಿದ ನಂತರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹಾನಗಲ್ಲ ಗುರು ಕುಮಾರೇಶ್ವರರು ಸಮಾಜಕ್ಕೆ ದಿಕ್ಕು ತೋರಿಸಿದರು. ಅವರು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡುವ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸಿದರು. ಅವರ ಹೆಸರಿನಲ್ಲಿ ಈ ಗ್ರಾಮದಲ್ಲಿ ಶಿವಯೋಗಾಶ್ರಮ ಆರಂಭವಾಗುತ್ತಿರುವದು ಈ ನಾಡಿಗೆ ಒಳಿತಾಗುವದರಲ್ಲಿ ಸಂದೇಹವಿಲ್ಲ. ಈ ಗ್ರಾಮದ ಹಿರೇಮಠದ ಚಿಕ್ಕವಯಸ್ಸಿನ ಆನಂದದೇವರು ಕ್ರಿಯಾಶೀಲ ಸಾಧಕರಾಗಿದ್ದಾರೆ. ಅವರು ಸಮಾಜ ಅಭಿವೃದ್ಧಿಗೆ ಸದಾ ಬದ್ಧರಾಗಿರುವದು ಅವರ ಸೇವಾ ಕೈಂಕರ್ಯ ತೋರಿಸುತ್ತಿದೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕಾದರೆ ತ್ಯಾಗ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಆನಂದದೇವರು ಸುಶಿಕ್ಷತ, ಸುಸಂಸ್ಕ್ರತ ಸಮಾಜ ನಿರ್ಮಾಣಕ್ಕಾಗಿ ಅನೇಕ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ಹನ್ನೆರಡು ದಿನಗಳ ಕಾಲ ನವರಾತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವದು ಅವರ ಕೈಂಕರ್ಯ ಶ್ಲಾಘನೀಯ ಎಂದರು.
ತಾಲೂಕು ಜನಪದ ಪರಿಷತ್ತಿನ ಅಧ್ಯಕ್ಷ ದೇವೇಂದ್ರ ಗೋನಾಳ ಮಾತನಾಡಿ, ಈ ಭಾಗದ ೨೭ ಗ್ರಾಮದಲ್ಲಿ ನಿರಂತರವಾಗಿ ಜನಜಾಗೃತಿ ಹಮ್ಮಿಕೊಳ್ಳುವ ಮೂಲಕ ಆನಂದದೇವರು ಜನರಿಗೆ ದುಶ್ಚಟಗಳನ್ನು ತ್ಯಜಿಸಲು ಸಂದೇಶ ನೀಡಿದ್ದಾರೆಮಎಂದರು.
ಅಧ್ಯಕ್ಷತೆ ವಹಿಸಿದ್ದ ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಮಾತನಾಡಿ, ಬಸವನಾಡಿನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವದು ಔಚಿತ್ಯಪೂರ್ಣವಾಗಿದೆ. ನಾಡಿನಲ್ಲಿ ಬಸವ ತತ್ವ ಬೆಳಗಿ ಜನರು ಶಾಂತಿ, ನೆಮ್ಮದಿ ಜೀವನ ಸಾಗಿಸುವಂತಾಗಬೇಕು. ಆನಂದ ದೇವರು ನಿರ್ಮಾಣ ಮಾಡುವ ಶಿವಯೋಗಾಶ್ರಮಕ್ಕೆ ಪ್ರಾಮಾಣಿಕವಾಗಿ ಸಹಾಯ-ಸಹಕಾರ ನೀಡಲು ಪ್ರಯತ್ನಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ತೆಲಂಗಾಣದ ವಿರುಪಾಕ್ಷ ದೇವರು, ಆನಂದದೇವರು, ಅನ್ನದಾನಿ ಶಾಸ್ತ್ರೀಜಿ, ನರಸಲಗಿಯ ಸಂಗಯ್ಯ ಸ್ವಾಮೀಜಿ, ರಬಿನಾಳದ ಪರಮಾನಂದ ಮುತ್ಯಾ, ಮಲ್ಲಿಕಾರ್ಜುನಯ್ಯ ಹಿರೇಮಠ, ಗಿರಿಧರ ಓದಿ, ಬಸವರಾಜ ಇಂಗಳೇಶ್ವರ, ಚನ್ನಬಸಪ್ಪ ಸಿಂಧೂರ ಇತರರು ಇದ್ದರು.
ಆಸಂಗಿಯ ವೀರಬಸವ ದೇವರು ನಿರೂಪಿಸಿದರು.

