ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನವದೆಹಲಿಯ ಎಂಎಂಟಿಸಿಸಿ ಕಾಲ್ಸ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನ್ಯಾಕ್ ಸಮಿತಿ, ಮಹಿಳಾ ಘಟಕದ ಸಹಯೋಗದಲ್ಲಿ ಮಂಗಳವಾರ ಕ್ಯಾನ್ಸರ್ ರೋಗದ ಅರಿವು-ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ತಾಲೂಕು ಆಸ್ಪತ್ರೆಯ ಪ್ರಸೂತಿ ಮತ್ತು ಹೆರಿಗೆ ತಜ್ಞ ವೈದ್ಯರಾದ ಡಾ. ಭಾಗ್ಯಲಕ್ಷ್ಮೀ ಗೋನಾಳ ಅವರು ಸ್ತನ್ ಕ್ಯಾನ್ಸರ್ ಮತ್ತು ಗರ್ಭಕಂಠ ಕ್ಯಾನ್ಸರ್ ಕುರಿತು ಮಾತನಾಡಿ, ಕ್ಯಾನ್ಸರ್ ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಹೆಚ್ಚಿನ ಜೀವಗಳನ್ನು ತೆಗೆದುಕೊಳ್ಳುತ್ತದೆ. ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಪ್ರಗತಿಗಳ ಹೊರತಾಗಿಯೂ ವಿಶ್ವಾದ್ಯಂತ ಕ್ಯಾನ್ಸರ್ ಪ್ರಮಾಣ ಮತ್ತು ವರ್ಷಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ವಿಷಾದಕರ ಸಂಗತಿ. ಕ್ಯಾನ್ಸರ್ ಗಂಭೀರ ಸಮಸ್ಯೆಯಾಗಿದೆ. ಚಿಕಿತ್ಸೆ ನೀಡದೇ ಬಿಟ್ಟರೆ ಸಾವಿಗೆ ಕಾರಣವಾಗಬಹುದು. ಕ್ಯಾನ್ಸರ್ ಅಪಾಯವಿದ್ದರೆ ನಿಯಮಿತವಾಗಿ ಪರೀಕ್ಷೆಗೆ ಒಳಗಾಗುವುದು ಬಹುಮುಖ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ನೀಲಪ್ಪ ಹೊಸಮನಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನ್ಯಾಕ್ ಸಂಚಾಲಕ ಅಮಿತ ಮಿರ್ಜಿ, ಮಹಿಳಾ ಘಟಕದ ಸಂಚಾಲಕಿ ವಿಜಯಲಕ್ಷ್ಮೀ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಮಮತಾ ಎನ್. ಇದ್ದರು. ಇತಿಹಾಸ ಉಪನ್ಯಾಸಕಿ ವಿಜಯಲಕ್ಷ್ಮೀ ಪ್ರಾರ್ಥಿಸಿದರು. ವಾಣಿಜ್ಯ ಉಪನ್ಯಾಸಕ ಲಕ್ಷ್ಮಣ ವಾಲೀಕಾರ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಭೀಮಶಿ ಹಡಪದ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಪ್ರಶಾಂತ ಮಮದಾಪುರ ವಂದಿಸಿದರು.

