ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬದಲಾಗುತ್ತಿರುವ ಹವಾಮಾನ, ಹೆಚ್ಚುತ್ತಿರುವ ಕೃಷಿ ವೆಚ್ಚ, ಕುಂಠಿತವಾಗುತ್ತಿರುವ ಉತ್ಪಾದನೆ ಮತ್ತು ಅನಿಶ್ಚಿತವಾಗಿರುವ ಮಾರುಕಟ್ಟೆಯಂತಹ ಜ್ವಲಂತ ಸಮಸ್ಯೆಗಳಿಂದ ಬಸವಳಿದು ಅಸ್ತಿತ್ವ ಕಳೆದುಕೊಳ್ಳುವ ಅಪಾಯದಂಚಿನಲ್ಲಿರುವ ಕೃಷಿ ಕ್ಷೇತ್ರದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಹಾಗೂ ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ ಕರೆ ನೀಡಿದರು.
ತಾಲೂಕಿನ ಮಡಿಕೇಶ್ವರ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮಂಗಲ ಭವನದಲ್ಲಿ ಕುಕ್ಕುಟ ಸಹಕಾರಿ ಮಹಾಮಂಡಳ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ ವಿಜಯಪುರ, ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಬಸರಕೋಡ, ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹರನಾಳ ಹಾಗೂ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಇವುಗಳ ಸಂಯುಕ್ತಾಶ್ರಯದಲ್ಲಿ ಅಮೃತ ರೈತ ಉತ್ಪಾದಕ ಸಂಸ್ಥೆಗಳ ಯೋಜನೆ ಅನುದಾನದಲ್ಲಿ ಏರ್ಪಡಿಸಲಾಗಿದ್ದ ಕೋಳಿ ಸಾಕಾಣಿಕೆ, ಕೃಷಿ ಮತ್ತು ತೋಟಗಾರಿಕೆಯಲ್ಲಿ ಆಧುನಿಕತೆಗಳ ಅಳವಡಿಕೆಗಳ ಕುರಿತಾದ ಹೋಬಳಿ ಮಟ್ಟದ ರೈತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಸದಸ್ಯ ರೈತರಿಗಾಗಿ ದಾಸೋಹಿ ಕೈಗೊಳ್ಳುತ್ತಿರುವ ಕಾರ್ಯ ಯೋಜನೆಗಳು ಇಡೀ ರಾಜ್ಯಕ್ಕೆ ಮಾದರಿಯಾಗಿವೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಸ್.ಎಂ ವಸ್ತ್ರದ ಮಾತನಾಡಿ, ಕಡಿಮೆ ವೆಚ್ಚ – ಅಧಿಕ ಉತ್ಪಾದನೆ ಎಂಬುದನ್ನು ಮಂತ್ರವನ್ನಾಗಿಸಿಕೊಂಡು ಮಣ್ಣು ಆರೋಗ್ಯ, ಬೀಜಗಳ ಆಯ್ಕೆ, ರೋಗ ಮತ್ತು ಕೀಟಗಳ ನಿರ್ವಹಣೆ, ಕೋಯ್ಲೋತ್ತರ ಪದ್ದತಿ, ಮಾರುಕಟ್ಟೆ ನಿರ್ಧಾರ ಸೇರಿದಂತೆ ಬೆಳೆ ಉತ್ಪಾದನಾ ಚಕ್ರದ ಪ್ರತಿ ಹಂತದಲ್ಲಿ ವೈಜ್ಞಾನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಲ್ಲಿ ರೈತ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ ಮಾತನಾಡಿ, ಕೃಷಿಯಲ್ಲಿ ಹೆಚ್ಚುತ್ತಿರುವ ಕೃಷಿ ಯಾಂತ್ರಿಕತೆಗಳ ಅಗತ್ಯತೆಯನ್ನು ಪೂರೈಸಲು ಸರ್ಕಾರ ಜಾರಿ ಮಾಡಿದ ಸಹಾಯಧನ ಆಧರಿತ ಯೋಜನೆಗಳ ಪ್ರಯೋಜನ ಪಡೆದು ಅಭಿವೃದ್ಧಿ ಸಾಧಿಸಲು ರೈತರು ಇಲಾಖೆಯ ನೆರವು ಪಡೆಯಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿದರು.
ಕೀಟ ಶಾಸ್ತ್ರಜ್ಞ ಡಾ. ಪ್ರಸನ್, ರೇಷ್ಮೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಸಿ.ಆರ್ ಪೋಲೀಸಪಾಟೀಲ, ಸಹಾಯಕ ತೋಟಗಾರಿಕೆ ಅಧಿಕಾರಿ ಮಮತಾ ವಿಷಯ ಮಂಡಿಸಿ ಸಂವಾದ ನಡೆಸಿಕೊಟ್ಟರು.
ಪಿ.ಕೆ.ಪಿ.ಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಗುತ್ತಿಗೆದಾರ ಸಿ.ಎನ್ ಪಾಟೀಲ, ಎಫ್.ಪಿ.ಓ ನಿರ್ದೇಶಕರಾದ ಬಸವರಾಜ ಕುಂಟೋಜಿ, ಶ್ರೀಶೈಲ ಮೇಟಿ ಉಪಸ್ಥಿತರಿದ್ದರು.
ನಿರ್ದೇಶಕ ಸೋಮನಗೌಡ ಬಿರಾದಾರ ಸ್ವಾಗತಿಸಿದರು. ಮಡಿವಾಳಯ್ಯ ಗು. ಹಿರೇಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

