ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಬದ್ಧ :ಶಾಸಕ ಮನಗೂಳಿ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಅಲ್ಪ ಸಂಖ್ಯಾತರ ಹಿತ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗ್ರಾಮದಲ್ಲಿ ಮಂಜೂರಾದ ಶಾದಿಮಹಲ್ ಕಟ್ಟಡಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಈ ಭಾಗದಲ್ಲಿ ಶಾದಿಮಹಲ್ ನಿರ್ಮಿಸಿಕೊಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಕೊಟ್ಟ ಮಾತಿನಂತೆ ನಡೆದುಕೊಂಡು ಸಿಂದಗಿ ಮತಕ್ಷೇತ್ರದ ಮಲಘಾಣ ಹಾಗೂ ಮೋರಟಗಿ ಗ್ರಾಮಗಳಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಿ ಅನುದಾನ ತರಲಾಗಿದೆ. ಪ್ರಸಕ್ತ ವರ್ಷ ರಾಜ್ಯದ ೨೨೪ ಮತಕ್ಷೇತ್ರಗಳ ಪೈಕಿ ಸಿಂದಗಿ ಮತಕ್ಷೇತ್ರದಲ್ಲಿ ಮಾತ್ರ ಎರಡು ಶಾದಿಮಹಲ್ ಗಳನ್ನು ಮಂಜೂರು ಮಾಡಲಾಗಿದ್ದು, ನಾವೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹ್ಮದ್ ಅವರಿಗೆ ಋಣಿಯಾಗಿರಬೇಕು ಎಂದರು.
ಸಿಂದಗಿ ಮತಕ್ಷೇತ್ರ ವ್ಯಾಪ್ತಿಯ ಯರಗಲ್ ಬಿ.ಕೆ., ರಾಂಪುರ ಹಾಗೂ ಚಟ್ಟರಕಿ ಗ್ರಾಮಗಳಲ್ಲೂ ಶಾದಿಮಹಲ್ ಮಂಜೂರು ಹಂತದಲ್ಲಿವೆ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧವಾದ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ೫ ಕೋಟಿ ರೂ. ಅನುದಾನ ನೀಡಿದೆ. ಅಲ್ಪಸಂಖ್ಯಾತರೇ ಹೆಚ್ಚಾಗಿ ವಾಸಿಸುತ್ತಿರುವ ಸಮೀಪದ ಹೆಗ್ಗೇರಿಯಲ್ಲಿ ೨.೬೫ ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ ಎಂದರು.
ಅಂಜುಮನ್ ಸಮಿತಿ ಕಾರ್ಯದರ್ಶಿ ಮೈಬೂಬಸಾಬ ಕಣ್ಣಿ ಮಾತನಾಡಿ, ಬಹುದಿನಗಳ ಬೇಡಿಕೆ ಈಡೇರಿರುವುದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ಶಾಸಕರು ವಿಶೇಷವಾಗಿ ಪ್ರಯತ್ನಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಸಮಸ್ತ ಅಂಜುಮನ್ ಸಮಿತಿ ವತಿಯಿಂದ ಶಾಸಕರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಜಿ ಪಂ ಸದಸ್ಯ ನರಸಿಂಗ್ ಪ್ರಸಾದ್ ತಿವಾರಿ, ವೀರನಗೌಡ ಪಾಟೀಲ್, ನಿಂಗನಗೌಡ ಪಾಟೀಲ, ಪ್ರಕಾಶ ಅಡಗಲ್, ಮುತ್ತಪ್ಪ ಸಿಂಗೆ, ರವಿಕಾಂತ ನಡುವಿನಕೇರಿ, ಇಸುಫ್ ಮುಲ್ಲಾ, ಅರವಿಂದ ಹಂಗರಗಿ, ಸಾಯಿಪಟೇಲ್ ಅವಟಿ, ರಜಾಕ ಬಾಗವಾನ, ಸಲೀಮ್ ಕಣ್ಣಿ, ಅಬ್ಬಾಸಲಿ ಬಂಟನೂರ, ಅಬ್ಬಾಸಲಿ ಬಳೂರಗಿ, ಹಸನಸಾಬ ಶಿರಾಶ್ಯಾಡ, ಬಾಬು ಬಾಸಗಿ ಮಾಬಣ್ಣ ಗೊಗಾಡಿ, ಮತ್ತಿತರರು ಇದ್ದರು.

