ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಹುಟ್ಟು-ಸಾವುಗಳ ಮಧ್ಯೆ ನಾವು ಹೇಗೆ ಜೀವನ ಮಾಡುತ್ತೇವೆ ಎಂಬುವದು ಬಹಳ ಮುಖ್ಯವಾಗಿದೆ. ಜೀವನದಲ್ಲಿ ಉತ್ತಮ ಜೀವನ ಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಇರಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜಪರ ಕಳಕಳಿ ಹೊಂದಿರುವ ಭೂತಲ-ಪಾಟೀಲ ಉಭಯ ಶಿಕ್ಷಕ ದಂಪತಿಗಳು ತಮ್ಮ ನಿವೃತ್ತ ಜೀವನದ ನಂತರವೂ ಸಾಮಾಜಿಕ ಸೇವೆಯಲ್ಲಿ ತೊಡಗುವಂತಾಗಿ ಅವರ ನಿವೃತ್ತಿ ಜೀವನ ಸುಖಕರವಾಗಲೆಂದು ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಕುದರಿಸಾಲವಾಡಗಿ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ನಗರದಲ್ಲಿರುವ ಸಿದ್ರಾಮೇಶ್ವರ ನಿವಾಸದ ಮುಂಭಾಗ ಶನಿವಾರ ಹಮ್ಮಿಕೊಂಡಿದ್ದ ಉಮಾದೇವಿ ಭೂತಲ (ಪಾಟೀಲ) ಅವರ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಮಾದೇವಿ ಭೂತಲ ಅವರ ಪತಿ ನಿವೃತ್ತ ಶಿಕ್ಷಕ ಎಸ್.ಜಿ.ಪಾಟೀಲ ಅವರು ಸಮಾಜದಲ್ಲಿ ಹೇಗೆ ಬದುಕಬೇಕೆಂಬದನ್ನು ತೋರಿಸಿಕೊಟ್ಟಿದ್ದಾರೆ. ಅವರು ತಮ್ಮ ಪತ್ನಿ ಉಮಾದೇವಿ ಅವರನ್ನು ಸಹ ಸಮಾಜಪರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಅವರಿಂದ ಸಮಾಜಕ್ಕೆ ಸೇವೆ ಸಲ್ಲಿಸುವಂತೆ ಮಾಡಿದ್ದಾರೆ. ಇರ್ವರು ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸೇವೆ ಮಾಡುವ ಮೂಲಕ ಮಕ್ಕಳಿಗೆ ಜ್ಞಾನರ್ಜನೆ ಮಾಡಿದ್ದಾರೆ. ಅನೇಕ ಪ್ರಶಸ್ತಿಗಳಿಗೆ ಭಾಜನರಾಗುವ ಮೂಲಕ ಆದರ್ಶ ಶಿಕ್ಷಕರಾಗಿದ್ದಾರೆ. ಇವರ ಸೇವೆ ನಿವೃತ್ತಿಯ ನಂತರವೂ ಸಮಾಜಕ್ಕೆ ಸದಾ ಇರಲೆಂದು ಶುಭ ಹಾರೈಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೋಮನಗೌಡ ಪಾಟೀಲ ಮನಗೂಳಿ ಮಾತನಾಡಿ, ನಿವೃತ್ತಿ ಹೊಂದಿರುವದು ಶಿಕ್ಷಕ ವೃತ್ತಿಗೆ ಹೊರತು ಅವರ ಸಾಮಾಜಿಕ ಸೇವೆ ಅಲ್ಲ. ಅವರು ಶೈಕ್ಷಣಿಕ ವೃತ್ತಿಯಲ್ಲಿ ಮಕ್ಕಳಿಗೆ ವಿದ್ಯೆಯನ್ನು ನೀಡುವ ಮೂಲಕ ಅವರ ಭವಿಷ್ಯ ಉತ್ತಮ ಗೊಳಿಸಿದ ಕೀರ್ತಿಗೆ ಈ ದಂಪತಿಗಳು ಭಾಜನರಾಗಿದ್ದಾರೆ ಎಂದರು.
ರಾಜ್ಯ ಹಂಡೇವಜೀರ ಕ್ಷೇಮಾಭಿವೃದ್ಧಿ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಮಾತನಾಡಿ, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಉನ್ನತ ಭವಿಷ್ಯ ರೂಪಿಸುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಮಾಜದಲ್ಲಿ ಸದಾ ಗೌರವ ಸ್ಥಾನವಿದೆ. ನೇರ ನುಡಿಗೆ ಇನ್ನೊಂದು ಹೆಸರೇ ಎಸ್.ಜಿ.ಪಾಟೀಲ ಎಂದು ಹೇಳಬಹುದು ಎಂದರು.
ಸಿದ್ದರಾಮೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಿ.ಪಾಟೀಲ ಮಾತನಾಡಿ, ಮಕ್ಕಳಲ್ಲಿಯೇ ದೇವರನ್ನು ಕಂಡು ಶಿಕ್ಷಕಿ ಉಮಾದೇವ ಭೂತಲ ಸೇವೆಗೈದವರು. ಬರುವ ದಿನಗಳಲ್ಲಿ ಹಿಂದುಳಿದ ಮಕ್ಕಳಿಗೆ ಆರ್ಥಿಕ ಹಾಗೂ ಆರೋಗ್ಯ ಸೇವೆಗೆ ಮುಂದಾಗುವೆ ಎಂದರು.
ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಹೊಂದಾಣಿಕೆ ಎನ್ನುವದು ಇಲ್ಲದೇ ಇದ್ದರೆ ಜೀವನ ಪರಿಪೂರ್ಣವಾಗಲು ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ಅಹಂಕಾರ ಎನ್ನುವದು ಇರಬಾರದು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಗುರುವಿನಗಿಂತಲೂ ಗುರುವಾಗಿ ಕಾರ್ಯನಿರ್ವಹಿಸಿದಲ್ಲಿ ಆ ವೃತ್ತಿಗೆ ಗೌರವ ಬರುತ್ತದೆ ಎಂದರು.
ಕರಭಂಟನಾಳ ಹಿರೇಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ನಮ್ಮ ಬದುಕು ಪರಿಪೂರ್ಣವಾಗಿರಬೇಕು. ನಮಗೆ ಮುಕ್ತಿ ಎನ್ನುವದು ಗುರುವಿನ ಹಸ್ತದಿಂದ ಬರಬೇಕು. ಪಾಟೀಲ ದಂಪತಿಗಳು ಕಷ್ಟದೊಂದಿಗೆ ಜೀವನ ನಡೆಸಿ ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ವೀರರುದ್ರಮುನಿ ಸ್ವಾಮೀಜಿ, ಮುಖಂಡರಾದ ಶಿವನಗೌಡ ಬಿರಾದಾರ, ಬಿ.ಕೆ.ಕಲ್ಲೂರ, ವಿವೇಕಾನಂದ ಕಲ್ಯಾಣಶೆಟ್ಟಿ, ಬಿಇಓ ವಸಂತ ರಾಠೋಡ, ನಿವೃತ್ತಿ ಶಿಕ್ಷಕಿ ಉಮಾದೇವಿ ಭೂತಲ ಮಾತನಾಡಿದರು.
ದ್ರಾಕ್ಷಾಯಿಣಿ ಪಾಟೀಲ ಪ್ರಾರ್ಥಿಸಿದರು. ಎಚ್.ಬಿ.ಬಾರಿಕಾಯಿ ಪ್ರಾಸ್ತವಿಕವಾಗಿ ಮಾತನಾಡಿದರು. ದೇವೇಂದ್ರ ಗೋನಾಳ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಶಿವು ಮಡಿಕೇಶ್ವರ ವಂದಿಸಿದರು. ಬಾಲ ಕಲಾವಿದೆ ಅನುಷ್ಕಾ ಭೂತಲ ಭರತನಾಟ್ಯ, ಮುದ್ದೇಬಿಹಾಳದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಎಸ್.ಜಿ.ಪಾಟೀಲ ದಂಪತಿಗಳನ್ನು ಅನೇಕರು ಸನ್ಮಾನಿಸಿದರು.

