ವಿಜಯಪುರ ಮಹಾನಗರ ಪಾಲಿಕೆ ಸದಸ್ಯರಿಂದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತೀಯ ಪುರಾತತ್ವ ಇಲಾಖೆಗೆ, ಮಹಾನಗರ ಪಾಲಿಕೆ ಹಾಗೂ ಕಂದಾಯ ಇಲಾಖೆಗೆ ಸೇರಿರುವ ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ಕಾನೂನು ಬಾಹಿರವಾಗಿ ವಕ್ಫ್ ಸೊತ್ತು ಎಂದು ದಾಖಲಿಸಿದ್ದನ್ನು ತೆರವುಗೊಳಿಸಲು ಒತ್ತಾಯಿಸಿ ವಿಜಯಪುರ ಮಹಾನಗರ ಪಾಲಿಕೆ ಸದಸ್ಯರು ಸೋಮವಾರ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ವಿಜಯಪುರ ಜಿಲ್ಲೆಯ ಮುತ್ತಾವಲ್ಲಿಗಳ ಸಮ್ಮೇಳನ ಮತ್ತು ವಕ್ಫ್ ಅದಾಲತ್ ದಲ್ಲಿ ಭಾಗವಹಿಸಿದ್ದ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ, ನಗರ ಮತ್ತು ವಿಜಯಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ವಕ್ಫ್ ಆಸ್ತಿಯನ್ನಾಗಿ ದಾಖಲು ಮಾಡಿರುವುದನ್ನು ದಾಖಲೆ ಸಹಿತ ಮನವರಿಕೆ ಮಾಡಿ, ವಕ್ಫ್ ಸೊತ್ತು ಮಾಡಿರುವುದನ್ನು ತೆರವುಗೊಳಿಸಲು ಒತ್ತಾಯಿಸಿದರು.
ಅಲ್ಲದೆ, ಇದೀಗ ಜಿಲ್ಲಾಡಳಿತ ತಯಾರಿಸಿದ ಯಾದಿ ಪ್ರಕಾರ ವಿಜಯಪುರ ಜಿಲ್ಲೆಯಾದ್ಯಂತ ಮಹಾನಗರ ಪಾಲಿಕೆ, ಭಾರತೀಯ ಪುರಾತತ್ವ, ಕಂದಾಯ ಇಲಖೆಗೆ ಒಳಪಟ್ಟ ಸುಮಾರು ೩೫೭ ಜಮೀನುಗಳು ವಕ್ಫ್ ಹೆಸರಿನಲ್ಲಿ ದಾಖಲಾಗುವ ಸಂಭವವಿದೆ. ಇಂತಹ ಕಂದಾಯಿಕ ಬದಲಾವಣೆ ಮಾಡಬೇಕಾದರೆ, ನಿಯಮಾನುಸಾರ ಮಾಡಬೇಕಾಗುತ್ತದೆ. ಇತ್ತೀಚಿನ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ಸಹ ಚನ್ನಮ್ಮ ಹಿರೇಮಠ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಐತಿಹಾಸಿಕ ತೀರ್ಪು ನೀಡಿದೆ. ಸದರಿ ತೀರ್ಪಿನ ಪ್ರಕಾರ ಕಂದಾಯ ದಾಖಲೆಗಳಲ್ಲಿ ಬದಲಾವಣೆ ಮಾಡಬೇಕಾದರೆ ಆಸ್ತಿಗೆ ಸಂಬಂಧಪಟ್ಟವರ ಹಾಗೂ ಸ್ಥಾನಿಕ ವಿಚಾರಣೆ ಮಾಡದೇ ಮಾಡುವುದು ಕಾನೂನು ಬದ್ದವಲ್ಲವೆಂದು ಹೇಳಿದೆ. ಹೀಗಾಗಿ ಕಂದಾಯ ದಾಖಲೆಗಳಲ್ಲಿ ಕಾನೂನು ಬಾಹಿರವಾಗಿ ವಕ್ಫ್ ಸೊತ್ತು ಎಂದು ದಾಖಲಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಕಿರಣ ಪಾಟೀಲ, ಜವಾಹಾರ ಗೋಸಾವಿ, ಶಿವರುದ್ರ ಬಾಗಲಕೋಟ, ಮುಖಂಡ ದತ್ತಾ ಗೊಲಂಡೆ ಮತ್ತಿತರರು ಇದ್ದರು.

