
ಯುವಕರನ್ನು ರೋಗಗ್ರಸ್ತರನ್ನಾಗಿಸುತ್ತಿರುವ ವಾಟ್ಸ್ ಆಪ್, ಫೇಸ್ಬುಕ್
ಮಹಾಂತೇಶ ಬಿರಾದಾರ ರ ‘ಮುಖಪುಸ್ತಕದ ಮರೆಯದ ಮುಖಗಳು’ ಕೃತಿ ಲೋಕಾರ್ಪಣೆಗೊಳಿಸಿದ ಡಾ.ಸಿದ್ದರಾಮಯ್ಯ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ವಾಟ್ಸ್ ಆಪ್, ಫೇಸ್ ಬುಕ್ ವಿಶ್ವವಿದ್ಯಾಲಯಗಳು ದುರ್ಬಳಕೆ ಆಗುತ್ತಿರುವ ಸಂದರ್ಭದಲ್ಲಿ ಡಾ.ಮಹಾಂತೇಶ ಬಿರಾದಾರ ಅವರ ‘ಮುಖಪುಸ್ತಕದ ಮರೆಯದ ಮುಖಗಳು’ ಕೃತಿ ಮಾರ್ಗದರ್ಶಕವಾಗಿದೆ ಎಂದು ಹಿರಿಯ ಲೇಖಕ ಡಾ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದ ಬಸವ ಸಮಿತಿಯಲ್ಲಿ ಮೈಸೂರಿನ ಕವಿತಾ ಪ್ರಕಾಶನ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ವಾಟ್ಸ್ ಆಪ್, ಫೇಸ್ ಬುಕ್ ವಿಶ್ವವಿದ್ಯಾಲಯಗಳು ಯುವಕರನ್ನು ರೋಗಗ್ರಸ್ತರನ್ನಾಗಿ ಮಾಡುತ್ತಿವೆ. ಇದರಿಂದ ಸಾಮಾಜಿಕ ವಾತಾವರಣ ಹಾಳಾಗುವ ಹಾಗೆ ಯುವಕರ ನಡವಳಿಕೆಗಳು ಇರುತ್ತವೆ. ಇಂಥ ಸಂದರ್ಭದಲ್ಲಿ ಮಹಾಂತೇಶ ಬಿರಾದಾರ ಅವರು ಫೇಸ್ ಬುಕ್ ಮೂಲಕ ಬರೆದ ಲೇಖನಗಳು ಮಾದರಿಯಾಗಿವೆ ಎಂದು ಹೇಳಿದರು.
ವಾಟ್ಸ್ ಆಪ್, ಫೇಸ್ ಬುಕ್ ಮೂಲಕ ಸುಳ್ಳಿನ ಚರಿತ್ರೆ ಬೋಧನೆಯಾಗುತ್ತಿದೆ. ಇದರಿಂದ ಚಾರಿತ್ರಿಕ ಪ್ರಜ್ಞೆ ಕಳೆದುಕೊಂಡಿದ್ದೇವೆ ಜೊತೆಗೆ ವರ್ತಮಾನ ನಮಗೆ ಅರ್ಥವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಬರಹಕ್ಕೆ ಬೇಕಾದ ಸಾರ ಸಂಗ್ರಹ ಎಲ್ಲರಿಗೂ ದಕ್ಕುವುದಿಲ್ಲ. ಹಾಗೆಯೇ ಒಬ್ಬ ವ್ಯಕ್ತಿಯ ಸಮಗ್ರ ಪರಿಚಯ ಕಷ್ಟಸಾಧ್ಯ. ಅನುಭವ ದ್ರವ್ಯ ಇರಬೇಕು ಜೊತೆಗೆ ಭಾಷಾ ಸಾಮರ್ಥ್ಯವೂ ಇರಬೇಕು. ಈ ಗುಣಗಳಿರುವ ಮಹಾಂತೇಶ ಬಿರಾದಾರ ಅವರ ಕೃತಿ ಆಪ್ತವಾಗಿ ಓದಿಸಿಕೊಂಡು ಹೋಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಿ ಪರಿಚಯಿಸಿದ ಹಿರಿಯ ಲೇಖಕ ರಂಜಾನ್ ದರ್ಗಾ, ವಿಜಾಪುರ ಮಂದಿ ಎಂದೂ ಆಗೋದಿಲ್ಲ ಚಿಂದಿ. ಆದರೆ ವಿಜಾಪುರ ಮಂದಿ ಹಿಂದುಳಿದಿಲ್ಲ. ಹಿಂದುಳಿವ ಹಾಗೆ ವ್ಯವಸ್ಥೆ ಮಾಡಿದೆ. ಆದರೂ ವಿಜಾಪುರ ಮಂದಿ ಬಹಳ ಸ್ವಾಭಿಮಾನಿಗಳು ಎಂದು ತಿಳಿಸಿದರು.
ಮನುಷ್ಯರನ್ನು ಮನುಷ್ಯರನ್ನಾಗಿ ನೋಡದೆ ಇರುವುದು ದುರಂತ. ಆದರೆ ಮಹಾಂತೇಶ ಬಿರಾದಾರ ಅವರು ಜಾತಿರಹಿತವಾಗಿ ತಮ್ಮ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಅವರ
ಹೃದಯ ಸಂಪತ್ತು ಮತ್ತು ಮಿತ್ರತ್ವದ ಶಕ್ತಿ ದೊಡ್ಡದು ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಶ್ರೀನಿವಾಸ ಬಿದರಿ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ, ಆಶಾ ಎಂ.ಬಿ.ಪಾಟೀಲ, ಬಿಎಲ್ ಡಿಇ ಸಂಸ್ಥೆ ನಿರ್ದೇಶಕ ಬಸವನಗೌಡ ಎಂ.ಪಾಟೀಲ, ಕೆಎಸ್ ಡಿಎಲ್ ವ್ಯವಸ್ಥಾಪಕ
ನಿರ್ದೇಶಕ ಪಿಕೆಎಂ ಪ್ರಶಾಂತ್ ಹಾಜರಿದ್ದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿದ್ದರು.
ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಗಣೇಶ ಅಮೀನಗಡ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಜ್ಯೋತಿರ್ಲಿಂಗ ಹೊನಕಟ್ಟಿ ಜಾನಪದ ಹಾಡುಗಳನ್ನು ಹಾಡಿದರು.

ಮರೆಯಾಗದ ಲೇಖಕ
ಮುಖ್ಯ ಅತಿಥಿಯಾದ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ ಮಾತನಾಡಿ, ಸಚಿವರಾದ ಎಂ.ಬಿ.ಪಾಟೀಲ ಅವರ ಜೊತೆ ಹೆಚ್ಚು ಸಮಯ ಕಳೆದವರು ಮಹಾಂತೇಶ ಬಿರಾದಾರ. ಅಧಿಕಾರ ಕೇಂದಿತ ವಲಯದಲ್ಲಿದ್ದರೂ ಅವರೊಳಗಿನ ಲೇಖಕ ಮರೆಯಾಗದ ಹಾಗೆ ನೋಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಳ್ಳೆಯತನವನ್ನು ಗುರುತಿಸುವ, ಗುರುತಿಸಿದವರನ್ನು ಪರಿಚಯಿಸುವ ಒಳ್ಳೆಯ ಗುಣ ಮಹಾಂತೇಶ ಬಿರಾದಾರ ಅವರಲ್ಲಿದೆ ಎಂದು ಅಭಿನಂದಿಸಿದರು.

