ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಚಿವ ಎಂ.ಬಿ.ಪಾಟೀಲ ಅವರು ಶಾಲೆಗಳು ಮತ್ತು ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ಚ. ದೇಸಾಯಿ ಹೇಳಿದ್ದಾರೆ.
ಸೋಮವಾರ ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದಲ್ಲಿ ಎಂ. ಬಿ. ಪಾಟೀಲ ಫೌಂಡೇಶನ್ ವತಿಯಿಂದ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಸರಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದು ಮತ್ತು ಆರನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಚಿವರು ಜನಪರ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಸರ್ವಜನರ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸಚಿವರ ಆಪ್ತ ಸಹಾಯಕ ದಶರಥ ಭೋಸ್ಲೆ ಮಾತನಾಡಿ, ಜಲಸಂಪನ್ಮೂಲ ಸಚಿವರಾಗಿ ನೀರಾವರಿ ಕ್ರಾಂತಿ ಮಾಡಿರುವ ಎಂ. ಬಿ. ಪಾಟೀಲರು, ಈಗ ಕೈಗಾರಿಕೆ ಸಚಿವರಾಗಿ ಕೈಗಾರಿಕೆ ಕ್ರಾಂತಿ ಮಾಡುತ್ತಿದ್ದಾರೆ. ಅಲ್ಲದೇ, ಸಿಎಸ್ಆರ್ ಫಂಡ್ ಮೂಲಕ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಅನುದಾನ ಒದಗಿಸಿ ಶೈಕ್ಷಣಿಕ ಕ್ರಾಂತಿಗೆ ಕಾರಣರಾಗಿದ್ದಾರೆ. ಇಂದು ಸಾಂಕೇತಿಕವಾಗಿ ಜೈನಾಪುರ ಗ್ರಾಮದಲ್ಲಿ ಸ್ಕೂಲ್ ಬ್ಯಾಗ್ ವಿತರಿಸಲಾಗಿದ್ದು, ಮತಕ್ಷೇತ್ರಾದ್ಯಂತ ಆದಷ್ಟು ಶೀಘ್ರದಲ್ಲಿ ಸ್ಕೂಲ್ ಬ್ಯಾಗ್ ವಿತರಿಸಲಾಗುವುದು ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಪ್ರಭು ಬಿರಾದಾರ ಮಾತನಾಡಿ, ಸಚಿವರ ಮುತುವರ್ಜಿಯಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳು ಸಿಗುತ್ತಿವೆ. ಇದರಿಂದ ಬಡ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸೇವೆ ಮಾಡಲು ಅನುಕೂಲವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾ. ಪಂ. ಅಧ್ಯಕ್ಷ ಸಂಗಮೇಶ ಬೀಳಗಿ, ಮುಖಂಡರಾದ ಜಗನ್ನಾಥ ಹಿರೇದೇಸಾಯಿ, ಪ್ರಶಾಂತ ದೇಸಾಯಿ, ಹಣಮಂತ ಚೋಳಾಪ್ಪಗೋಳ, ಶ್ರೀಶೈಲ ತುಪ್ಪದ, ಸದಾನಂದ ಮಂಟೂರ, ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಅಮೀತ ದೇಸಾಯಿ, ಗ್ರಾ. ಪಂ. ಸದಸ್ಯರಾದ ಉತಾಲಸಾಬ ಬೆಳ್ಳಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಭರಮಪ್ಪ ಕಲ್ಲವ್ವಗೋಳ, ಶಿಕ್ಷಣ ಸಂಯೋಜಕ ವಸಂತ ಚವ್ಹಾಣ, ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಕೋರೆ, ಶಿಕ್ಷಕ ವಿ. ಎಸ್. ನಿಂಗರಡ್ಡಿ, ಎಚ್. ಎಂ. ಚಿತ್ತರಗಿ, ಎ. ಎಸ್. ರೂಪರಾವರ, ಸಂಗಮೇಶ ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.

