ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪುರಸಭೆಯ ನೌಕರರು ಸದಸ್ಯರಿಗೆ ಮಾಹಿತಿ ನೀಡುತ್ತಿಲ್ಲ. ಸದಸ್ಯರಾದಾಗಿನಿಂದ ಅವಧಿ ಮುಗಿಯಲು ಬಂದರೂ ವಾರ್ಡವೊಂದರ ಸ್ವಚ್ಛತೆಗೆ ಆಗಮಿಸಿಲ್ಲ. ಕಸದ ವಾಹನ ಸರಿಯಾಗಿ ಬರೋದಿಲ್ಲ. ಕೆಲವೆಡೆ ಚರಂಡಿ ಸ್ವಚ್ಛಗೊಳಿಸಿ ಬೇಗನೆ ತುಂಬಿಕೊಂಡು ಹೋಗೋದಿಲ್ಲ ಸೇರಿದಂತೆ ಹಲವು ಪುರಸಭೆಯ ಸದಸ್ಯರುಗಳ ದೂರು ಒಂದೆಡೆಯಾದರೆ, ಹಮಾಲರ ಕಾಲೋನಿ ಮತ್ತು ಆಶ್ರಯ ಕಾಲೋನಿಗಳ ಕಾರ್ನರ್ ಪ್ಲಾಟ್‌ಗಳ ತೆರವಿಗೆ ಕ್ರಮ. ೧೭ ನೇ ವಾರ್ಡನಲ್ಲಿ ಕಟ್ಟಲಾದ ಟಾಯಿಲೆಟ್‌ಗಳ ಓಪನಿಂಗ್. ರಸ್ತೆ ಕಾಮಗಾರಿ ಮಾಡದೇ ಕಾಗದದಲ್ಲಿ ಮುಕ್ತಾಯ. ಕೆರೆ ಅಭಿವೃದ್ಧಿ, ಕೊಳಚೆ ನಿವಾಸಿಗಳಿಗೆ ನೀಡಿದ ಜಾಗೆ ಪರಿಶೀಲನೆ, ಸಿಟಿ ವ್ಯಾಪ್ತಿಯಲ್ಲಿ ೮ ಬಸ್ ನಿಲ್ದಾಣ ನಿರ್ಮಾಣ ಈ ಎಲ್ಲ ವಿಷಯಗಳ ಬಗ್ಗೆ ಚರ್ಚೆಯಾಗಿದ್ದು ಪುರಸಭೆಯ ಸಾಮಾನ್ಯ ಸಭೆಯಲ್ಲಿ.
ಶುಕ್ರವಾರ ಮದ್ಯಾಹ್ನ ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಶಾಸಕ ಸಿ.ಎಸ್.ನಾಡಗೌಡರ ಸಮ್ಮುಖದಲ್ಲಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾಜಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯರಾದ ವಿರೇಶ ಹಡಲಗೇರಿ, ರಿಯಾಜ ಢವಳಗಿ, ಬಸಪ್ಪ ತಟ್ಟಿ, ಸಂಗಮ್ಮ ದೇವರಳ್ಳಿ ಪುರಸಭೆಯ ಅಧಿಕಾರಿಗಳು ನಾವು ಕೋರಿದ ಯಾವುದೇ ಮಾಹಿತಿಯನ್ನು ಪೈರೈಸುವದಿಲ್ಲ ಎಂಬ ಆರೋಪವನ್ನು ಮಾಡಿದರೆ ಬನಶಂಕರಿ ದೇವಸ್ಥಾನದ ಬಳಿ ಸ್ವಚ್ಛ ಮಾಡಿ ಅಂದರೆ ನಮ್ಮ ಅವಧಿ ಮುಗಿಯಲು ಬಂದರೂ ಸ್ವಚ್ಛ ಮಾಡೋಕೆ ಬಂದಿಲ್ಲ ಮತ್ತು ಚರಂಡಿಯಲ್ಲಿನ ಹೊಲಸು ತೆಗೆದು ಹೊರಹಾಕಿ ಸುಮಾರು ದಿನಗಳ ವರೆಗೆ ಬಿಟ್ಟು ಆ ಕಸ ಮತ್ತೆ ಅದೇ ಚರಂಡಿಯಲ್ಲಿ ಬಿದ್ದ ಬಳಿಕ ತುಂಬಿಕೊಳ್ಳಲು ಬರ್ತಾರೆ ಎಂದು ಸದಸ್ಯ ತಟ್ಟಿ, ರೋಗ ನಿರೋಧಕ ಪೌಡರ್ ಸಿಂಪಡಿಸಿ ಅಂದರೆ ಮುಖ್ಯಾಧಿಕಾರಿ ಸಹಿ ಮಾಡಿಲ್ಲ ಅಂತ ಎಸ್‌ಐ ಗಳು ಪ್ರತಿಕ್ರಯಿಸ್ತಾರೆ ಅಂತಾ ಸದಸ್ಯ ಢವಳಗಿ, ಕಸದ ವಾಹನ ಸರಿಯಾಗಿ ಬರೋದಿಲ್ಲ ಅಂತಾ ಹಡಲಗೇರಿ, ಕೆಲ ಪೌರ ಕಾರ್ಮಿಕರು ನಿವೃತ್ತಿ ವಯಸ್ಸು ಮುಗಿದರೂ ತಮ್ಮ ಬದಲಿ ಬೇರೆ ನೌಕರರನ್ನಿಟ್ಟು ಸಂಬಳ ಪಡೆಯುತ್ತಿದ್ದಾರೆ ಎಂದು ಸಂಗಮ್ಮ ದೇವರಳ್ಳಿ, ಕೊಳಚೆ ಮಂಡಳಿಯ ಹಕ್ಕು ಪತ್ರ ಕೊಡಿಸುವದಾಗಿ ಬಡವರ ಬಳಿ ಹಣ ಕಬಳಿಸಿದ್ದಾರೆ ಎಂದು ಹಣಮಂತ ವಡ್ಡರ, ಕೃಷ್ಣಾ ಮಂಗಲ ಕಾರ್ಯಾಲದಿಂದ ೮ ಗಡಗಡಿ ಭಾವಿಯವರೆಗೆ ಸಿಸಿ ರಸ್ತೆ ನಿರ್ಮಿಸದೇ ಕಾಗದದಲ್ಲಿ ರಸ್ತೆ ನಿರ್ಮಾಣವಾಗಿದೆ ಅಂತಾ ತೋರಿಸಲಾಗಿದೆ ಎಂದು ಯಲ್ಲಪ್ಪ ನಾಯಕಮಕ್ಕಳ ಆರೋಪಿಸಿದರು.
ಪುರಸಭೆಯನ್ನು ನಗರಸಭೆಯನ್ನಾಗಿಸಲು, ಸಿಟಿ ವ್ಯಾಪ್ತಿಯಲ್ಲಿ ೮ ಬಸ್ ನಿಲ್ದಾಣ, ಕೆರೆ ಒತ್ತೂವರಿ ಕುರಿತು ಚರ್ಚಿಸಲಾಯಿತು. ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಮಾಜಿ ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ ಸದಸ್ಯರಾದ ಸಹನಾ ಬಡಿಗೇರ, ಭಾರತಿ ಪಾಟೀಲ, ಬಸವರಾಜ ಮುರಾಳ, ರಫೀಕ ದ್ರಾಕ್ಷಿ ಸೇರಿದಂತೆ ಎಲ್ಲ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಕೊಳಚೆ ಮಂಡಳಿ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ವೇಳೆ ಸಾಕಷ್ಟು ಜಟಾಪಟಿ ನಡೆದಿದ್ದರಿಂದ ಅಹಿತಕರ ಘಟನೆಗಳು ಸಂಭವಿಸದಂತೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಬಿಗಿ ಬಂದೋಬಸ್ತ ವಹಿಸಿದ್ದರು.
ಪುರಸಭೆ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ
ಪಟ್ಟಣದ ಹುಡಕೋ ಗೇಟ್ ಬಳಿ ಇರುವ ಬೆಂಗಳೂರು ಬೇಕರಿ ಇರುವ ಕಟ್ಟಡ ಪುರಸಭೆಯ ಅನುಮತಿ ಪಡೆಯದೇ, ರಸ್ತೆಯನ್ನು ಅತಿಕ್ರಮಿಸಿ ಕಟ್ಟಲಾಗಿದೆ. ಅದರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಗೆ ಸದಸ್ಯ ವಿರೇಶ ಹಡಲಗೇರಿ ಪ್ರಶ್ನಿಸಿದರು. ಬೆಂಗಳೂರು ಬೇಕರಿ ಕಟ್ಟಡದ ಹಿಂದಿನ ರಸ್ತೆ, ಇತ್ತರ ಭಾಗದ ರಸ್ತೆ ಅತಿಕ್ರಮಣ ಮತ್ತು ಕ್ರಶ್ಚಿಯನ್ ಗೋರಿಗಳ ಬಳಿ ಇರುವ ಉದ್ಯಾನವನ ಜಾಗೆ ಅತಿಕ್ರಮಣ ತೆರವುಗೊಳಿಸುವಂತೆ ನಿರ್ಧರಿಸಲಾಯಿತು.
’ಉದಯರಶ್ಮಿ’ ವರದಿ ಪ್ರತಿಧ್ವನಿ
ಹಂಪ್ ಅಳವಡಿಸಲು ನಿರ್ಧಾರ
ಇಲ್ಲಿನ ಹುಡಕೋ ಗೇಟ್ ಬಳಿ ನಿಮಿಸಿದ ಹಂಪ್ ಅವೈಜ್ಞಾನಿಕ ಮತ್ತು ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ಈ ಪ್ರದೇಶ ಅಪಘಾತ ವಲಯವಾಗಿದ್ದು ಹಂಪ್ ಅಳವಡಿಸುವಂತೆ ’ಉದಯರಶ್ಮಿ’ ಪತ್ರಿಕೆ ಸುದ್ದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಈ ಬಗ್ಗೆ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸುದ್ದಿಯ ಬಗ್ಗೆ ಪ್ರಸ್ತಾಪಿಸಿ ಆದಷ್ಟು ಶೀಘ್ರದಲ್ಲಿ ಹಂಪ್ ಅಳವಡಿಸುವದಾಗಿ ತಿಳಿಸಿದರು.
ಬಹುತೇಕರು ಪಟ್ಟಣದ ನಿವಾಸಿಗಳೇ ಅಲ್ಲ
ಹಮಾಲರ ಕಾಲೋನಿ ಮತ್ತು ಆಶ್ರಯ ಕಾಲೋನಿಗಳ ಕಾರ್ನರ್ ಪ್ಲಾಟ್‌ಗಳನ್ನು ಹರಾಜು ಮಾಡಿ ನೀಡುವಂತೆ ಸರ್ಕಾರದ ಆದೇಶ ಇದ್ದು ಅವುಗಳ ಒತ್ತೂವರಿ ಮಾಡಿಕೊಂಡಿದ್ದ ಬಗ್ಗೆ ಪ್ರಸ್ತಾಪಿಸಲಾಗಿ ಅವುಗಳನ್ನು ತೆರವುಗೊಳಿಸಿ ಬಣ್ಣ ಬಳಿದು ಗುರುತಿಸುವಂತೆ, ಕೊಳಚೆ ಮಂಡಳಿ ನೀಡಿದ ಹಕ್ಕುಪತ್ರಗಳಲ್ಲಿ ಬಹುತೇಕರು ಪಟ್ಟಣದ ನಿವಾಸಿಗಳೇ ಅಲ್ಲ. ಬೇರೆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ನೀಡಿದ್ದು ಮತ್ತೊಮ್ಮೆ ಮಂಡಳಿಯ ಅಧಿಕಾರಿಗಳು ಮತ್ತು ಪುರಸಭೆಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ಮಾಡಿ ನಿವಾಸಿಗಳಲ್ಲದವರಿಗೆ ನೀಡಿದ ಹಕ್ಕು ಪತ್ರವನ್ನು ರದ್ದು ಪಡಿಸುವಂತೆ, ಸಿಸಿ ರಸ್ತೆ ನಿರ್ಮಾಣದಲ್ಲಿ ನಡೆದ ಅವ್ಯವಹಾರಗಳ ಕುರಿತು ನಗರೋತ್ಥಾನದ ಕಾಮಗಾರಿಗಳ ಬಗ್ಗೆ ತನಿಖೆಗಾಗಿ ಲೋಕಾಯುಕ್ತರಲ್ಲಿ ಪ್ರಕರಣ ದಾಖಲಿಸುವುದಾಗಿ ಶಾಸಕ ನಾಡಗೌಡರು ತಿಳಿಸಿದರು.

