ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ ಗ್ರಾಮದ ಚಿತ್ರಕಲಾವಿದ ಬಸವರಾಜ ಹಣಮಪ್ಪ ಹಡಪದ ರವರು ಇತ್ತೀಚೆಗೆ ನಡೆದ ತಾಳಿಕೋಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಿದ ಚಿತ್ರಕಲಾ ಪ್ರದರ್ಶನ ಕಲಾಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಈ ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಹಾಸೀಂಪಿ ವಾಲಿಕಾರ, ತಾಳಿಕೋಟಿ ಸಾಹಿತ್ಯ ಸಮ್ಮೇಳನದ ಅದ್ಯಕ್ಷ ಆರ್ ಆರ್ ಕೊಪ್ಪ ಮತ್ತು ಮಾಜಿ ಜಿಪಂ ಅದ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹಾಗೂ ಗಣ್ಯರು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ, ವಿವಿಧ ರೀತಿಯ ಕಲಾಕೃತಿಗಳನ್ನು ಕಣ್ತುಂಬಿಕೊಂಡರು.
ಹೆಣ್ಣು ಶಿಶುವಿನ ಭ್ರೂಣಹತ್ಯ, ಜನಪದ ಕಲಾಕೃತಿ, ಭೂಕಂಪ ಕಲಾಕೃತಿ, ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ, ಪೂಜ್ಯರ ಭಾವಚಿತ್ರಗಳ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು.
ಶಾಸಕ ಸಿ.ಎಸ್.ನಾಡಗೌಡ, ಎಸ್.ಎಸ್. ಹುನಗುಂದ, ನಾವದಗಿ, ಜಗದೀಶ ಹಡಪದ, ಸಚಿನ್ ಹೂಗಾರ ಮುಂತಾದವರು ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

