ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ತೇರದಾಳ ಪಟ್ಟಣದಲ್ಲಿ ನಿರ್ಮಿಸಲಾಗಿರುವ ನೂತನ ಅಲ್ಲಮ ಪ್ರಭುದೇವರ ದೇವಸ್ಥಾನದ ಉದ್ಘಾಟನೆ ನಿಮಿತ್ತ ನಡೆಯಲಿರುವ ಬಸವಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಿಮ್ಮಡ ಗ್ರಾಮದಿಂದ ಅಲ್ಲಮಪ್ರಭು ಪರಮಜ್ಯೋತಿಯನ್ನು ಪಂಚಶ್ರೀಗಳೊಂದಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಯಿತು.
ಚಿಮ್ಮಡ ವಿರಕ್ತಮಠದ ಚನ್ನಬಸವ ಸಭಾ ಮಂಟಪದಲ್ಲಿ ಹಂದಿಗುಂದ ಆಡಿ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಶೇಗುಣಶಿ ವಿರಕ್ತಮಠದ ಡಾ. ಮಹಾಂತ ಮಹಾಸ್ವಾಮಿಗಳು ಮಾತನಾಡಿ, ಈ ಪಾದಯಾತ್ರೆಯಲ್ಲಿ
ರಬಕವಿ ಬ್ರಹ್ಮಾನಂದ ಮಠದ ಗುರುಸಿದ್ದ ಮಹಾಸ್ವಾಮಿಗಳು, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಕೊಣ್ಣೂರ ಹೊರಗಿನ ಹಿರೇಮಠದ ವಿಶ್ವಪ್ರಭು ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದು ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಪ್ರಭುವಿನ ಕೃಪೆಗೆ ಪಾತ್ರರಾಗಬೇಕೆಂದರು,
ಸ್ಥಳಿಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಅ.೧೪ರಂದು ಪ್ರಾರಂಭಗೊಳ್ಳಲಿರುವ ಪ್ರಭು ಪರಮಜ್ಯೋತಿಯೊಂದಿಗಿನ ಪಾದಯಾತ್ರೆಯು ಮುಂಜಾನೆ ೮ಘಂ.ಗೆ ಚಿಮ್ಮಡ ಗ್ರಾಮದಿಂದ ಹೊರಟು ಹೊಸೂರ, ಸಾಲಿಮನಿ, ರಬಕವಿ, ಹಣಗಂಡಿ ಮೂಲಕ ತೇರದಾಳಕ್ಕೆ ನಡೆಯಲಿದೆ ಎಂದರು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಚಯ್ಯ ಮಠಪತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಪರಪ್ಪಾ ಪಾಲಭಾವಿ, ಗುರಪ್ಪಾ ಬಳಗಾರ ಸೇರಿದಂತೆ ಹೊಸೂರ ಸಾಲಿಮನಿಯ ಪ್ರಮುಖರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಉಪನ್ಯಾಸಕ ಪ್ರಕಾಶ ಬಡಿಗೇರ ಸ್ವಾಗತಿಸಿದರು ಶಿಕ್ಷಕ ಪ್ರಕಾಶ ಪೂಜಾರಿ ನಿರೂಪಿಸಿದರು, ವ್ವನಪ್ಪಾ ಮುಗಳಖೋಡ ವಂದಿಸಿದರು.

