ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ತಾಲೂಕಿನ ನಿಡೋಣಿಯ ಮಂಜರಗಿವಸ್ತಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ದಿನದಂದು ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪರಗೊಂಡ ಶಹಾಪೂರ್ ಗಾಂಧಿ ಮತ್ತು ಶಾಸ್ತ್ರೀಜಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವುದಲ್ಲದೇ, ದೇಶಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.
ನಿಡೋಣಿ ಗ್ರಾಮ ಪಂಚಾಯತಿಯಿಂದ ಕೊಡಮಾಡಲ್ಪಟ್ಟ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ವಿನಾಯಕ ಕೊಟ್ಟಲಗಿ, ಇತ್ತೀಚಿಗೆ ಕಲುಷಿತ ನೀರಿನಿಂದ ಹಲವಾರು ಖಾಯಿಲೆಗಳು ಬರುತ್ತಿದ್ದು, ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಅತ್ಯಗತ್ಯವಾಗಿದೆ. ಎಲ್ಲ ಮಕ್ಕಳು ನಿಮ್ಮ ಜ್ಞಾನ ಸಂಪಾದನೆಯ ಜೊತೆಗೆ ಶಾಲೆಯಲ್ಲಿ ನೀಡುವ ಹಾಲು, ಮೊಟ್ಟೆ, ಬಾಳೆಹಣ್ಣು, ಚಿಕ್ಕಿ, ಪೌಷ್ಟಿಕ ಆಹಾರ ಹಾಗೂ ಶುದ್ಧ ನೀರನ್ನು ಸೇವಿಸಿ ಸದೃಢ ಆರೋಗ್ಯವನ್ನು ಸಂಪಾದಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಿವಪ್ಪ ಚಿಕ್ಕಲಕಿ, ಧರೆಪ್ಪ ಸಾಳಪ್ಪಗೋಳ,ನೂರಅಲಿ ಝಂಡೆ, ಬೈರಪ್ಪ ಮಾಳಿ, ರಾಚಪ್ಪ ಮಾಳಿ, ವಿಠ್ಠಲ ಇಟ್ಟಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಶ್ರೀ ಎಸ್ ಜಿ ಹರನಾಳ ಸ್ವಾಗತಿಸಿದರು, ಶಿಕ್ಷಕ ಪ್ರವೀಣ ಪತ್ತಾರ ವಂದಿಸಿದರು.

